ಭಾರತದ ಬೆಳವಣಿಗೆ ದರವನ್ನು 7.2%ದಿಂದ 7%ಕ್ಕೆ ತಗ್ಗಿಸಿದ ಎಡಿಬಿ
ಹೊಸದಿಲ್ಲಿ, ಸೆ. 21: ಭಾರತದ 2021-22ನೇ ಸಾಲಿನ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆ ದರವನ್ನು ಏಶ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಬುಧವಾರ 7.2%ದಿಂದ 7%ಕ್ಕೆ ಇಳಿಸಿದೆ. ಜುಲೈ ತಿಂಗಳಲ್ಲಿ ಭಾರತದ ಬೆಳವಣಿಗೆ ದರವನ್ನು ಅದು 7.2%ಕ್ಕೆ ನಿಗದಿಪಡಿಸಿತ್ತು.
ಜಾಗತಿಕ ಆರ್ಥಿಕ ಪರಿಸ್ಥಿತಿ, ಹೆಚ್ಚಿರುವ ಹಣದುಬ್ಬರ ಮತ್ತು ಕಠಿಣ ಆರ್ಥಿಕ ನೀತಿಯನ್ನು ಪರಿಗಣಿಸಿ ಹೊಸ ಬೆಳವಣಿಗೆ ದರವನ್ನು ಅಂದಾಜಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
‘‘ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಿದೆ ಹಾಗೂ ಹಣದುಬ್ಬರ ಅಧಿಕವಾಗಿದೆ. ಹಾಗಾಗಿ ಹಣದುಬ್ಬರವನ್ನು ಕಡಿಮೆ ಮಾಡುವುದಕ್ಕಾಗಿ ಆರ್ಥಿಕ ನೀತಿಯನ್ನು ನಿರಂತರವಾಗಿ ಬಿಗಿಗೊಳೀಸುವುದು ಅಗತ್ಯವಾಗಿದೆ’’ ಎಂದು ಬ್ಯಾಂಕ್ ಹೇಳಿದೆ. ‘‘ಮುಂದಿನ ಎರಡು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಬೇಡಿಕೆಯಿಂದಾಗಿ ರಫ್ತು ಕುಂಠಿತಗೊಳ್ಳುತ್ತದೆ ಹಾಗೂ ಇದು ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’’ ಎಂದು ಅದು ಅಭಿಪ್ರಾಯಪಟ್ಟಿದೆ.