2020ರ ದಿಲ್ಲಿ ಕೋಮುಗಲಭೆ ಆರೋಪಿಯ ದೋಷಮುಕ್ತಿ
ಹೊಸದಿಲ್ಲಿ, ಸೆ. 21: 2020ರ ದಿಲ್ಲಿ ಕೋಮುಗಲಭೆಗೆ ಸಂಬಂಧಿಸಿದ ಪ್ರಕರಣವೊಂದರ ಆರೋಪಿಯನ್ನು ದಿಲ್ಲಿಯ ನ್ಯಾಯಾಲಯವೊಂದು ಮಂಗಳವಾರ ದೋಷಮುಕ್ತಗೊಳಿಸಿದೆ. ಪೊಲೀಸರು ದುರುದ್ದೇಶದಿಂದ ಈ ವ್ಯಕ್ತಿಯನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.
ನೂರ್ ಮುಹಮ್ಮದ್ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನಡೆಸಿದ ಬಳಿಕ ನ್ಯಾಯಾಲಯ ತನ್ನ ತೀರ್ಪು ನೀಡಿದೆ. 2020 ಫೆಬ್ರವರಿ 24ರಂದು ರಾಷ್ಟ್ರ ರಾಜಧಾನಿಯ ಖಜೂರಿ ಖಾಸ್ ಪ್ರದೇಶದಲ್ಲಿರುವ ಟೈಲರಿಂಗ್ ಅಂಗಡಿಯೊಂದನ್ನು ದೋಚಿ ಬೆಂಕಿ ಕೊಟ್ಟ ಗುಂಪಿನಲ್ಲಿ ನೂರ್ ಮುಹಮ್ಮದ್ ಇದ್ದರು ಎಂಬುದಾಗಿ ಮೊಕದ್ದಮೆಯಲ್ಲಿ ಪೊಲೀಸರು ಆರೋಪಿಸಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವವರು ಮತ್ತು ಅದನ್ನು ವಿರೋಧಿಸುವವರ ನಡುವೆ ಈಶಾನ್ಯ ದಿಲ್ಲಿಯಲ್ಲಿ 2020 ಫೆಬ್ರವರಿ 23 ಮತ್ತು 26ರ ನಡುವೆ ಕೋಮು ಗಲಭೆ ನಡೆದಿತ್ತು. ಹಿಂಸಾಚಾರದಲ್ಲಿ 53 ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡಿದ್ದಾರೆ.
ದಿಲ್ಲಿ ಪೊಲೀಸರು ಮುಹಮ್ಮದ್‌ರನ್ನು ಬಂಧಿಸಿ, ಅವರ ವಿರುದ್ಧ ಗಲಭೆ, ಅಕ್ರಮ ಕೂಟ, ಬೆಂಕಿ ಹಚ್ಚುವುದು ಮತ್ತು ದರೋಡೆಗೆ ಸಂಬಂಧಿಸಿದ ಪರಿಚ್ಛೇದಗಳಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ, ದೂರುದಾರ ಮುಹಮ್ಮದ್ ಹನೀಫ್ ಮತ್ತು ಬೀಟ್ ಕಾನ್ಸ್‌ಟೇಬಲ್ ಸಂಗ್ರಾಮ್ ಸಿಂಗ್‌ರ ಸಾಕ್ಷಗಳನ್ನಷ್ಟೇ ಪ್ರಾಸಿಕ್ಯೂಶನ್ ನೆಚ್ಚಿಕೊಂಡಿದೆ ಎಂದು ಮಂಗಳವಾರ ನಡೆದ ವಿಚಾರಣೆಯ ವೇಳೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಹೇಳಿದರು. ತನಿಖಾಧಿಕಾರಿ ಜೀವಾನಂದ್‌ರ ಹೇಳಿಕೆಯಲ್ಲಿ ವೈರುಧ್ಯಗಳಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ನ್ಯಾಯಾಧೀಶರು ಹೇಳಿದರು.
‘‘ಈ ಪ್ರಕರಣದಲ್ಲಿ, 2020 ಎಪ್ರಿಲ್ 2ರ ಮುನ್ನ, ದೂರುದಾರರಲ್ಲದೆ ಬೇರೆ ಯಾರಿಗೂ ಆರೋಪಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ತನಿಖಾಧಿಕಾರಿ ಹೇಳಿದ್ದಾರೆ. ಅದೇ ವೇಳೆ, 2020 ಎಪ್ರಿಲ್ 2ರ ಮುನ್ನ, ಬೀಟ್ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್‌ರನ್ನು ವಿಚಾರಿಸಿದಾಗ, ಅಂಗಡಿಯನ್ನು ಧ್ವಂಸಗೊಳಿಸಿದ ವ್ಯಕ್ತಿಯನ್ನು ತಾನು ಗುರುತಿಸಬಲ್ಲೆ ಎಂದು ಹೇಳಿದ್ದಾರೆ ಎಂಬುದಾಗಿ ಅದೇ ತನಿಖಾಧಿಕಾರಿ ಹೇಳಿದ್ದಾರೆ’’ ಎಂದು ನ್ಯಾಯಾಧೀಶರು ಹೇಳಿದರು.
ಅದೂ ಅಲ್ಲದೆ, ದೂರುದಾರರು ತನ್ನ ದೂರಿನಲ್ಲಿ ಮುಹಮ್ಮದ್‌ರನ್ನು ಹೆಸರಿಸಿರಲಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಪರಿಗಣಿಸಿತು.
‘‘ನೂರ್ ಮುಹಮ್ಮದ್ ದೊಂಬಿ ಪ್ರಕರಣದ ಓರ್ವ ಆರೋಪಿ ಎಂಬುದಗಿ ತನ್ನ ದೂರಿನಲ್ಲಿ ಮುಹಮ್ಮದ್ ಹನೀಫ್ ಹೇಳಿಲ್ಲ. ಅದೂ ಅಲ್ಲದೆ, ಗಲಭೆಕೋರರ ಪೈಕಿ ತಾನು ಯಾರನ್ನಾದರೂ ನೋಡಿದ್ದೇನೆ ಮತ್ತು ಅವರನ್ನು ಗುರುತಿಸಬಲ್ಲೆ ಎಂಬುದಾಗಿಯೂ ಅವರು ಹೇಳಿಲ್ಲ’’ ಎಂದು ನ್ಯಾಯಾಲಯ ಹೇಳಿತು.