ಅದಾನಿ ಸಂಸ್ಥೆಗೆ ಒದಗಿಸಿದ ಅರಣ್ಯ ಭೂಮಿಯ ತಪ್ಪಾದ ವರ್ಗೀಕರಣದಿಂದ ಗುಜರಾತ್ ಸರಕಾರಕ್ಕೆ ರೂ. 58 ಕೋಟಿ ನಷ್ಟ

Update: 2022-09-24 12:39 GMT
ಗೌತಮ್ ಅದಾನಿ (File Photo: PTI)

ಹೊಸದಿಲ್ಲಿ: ಮುಂದ್ರಾ ಬಂದರು ಮತ್ತು ವಿಶೇಷ ಆರ್ಥಿಕ ವಲಯಕ್ಕಾಗಿ ಅದಾನಿ ಕೆಮಿಕಲ್ಸ್ (Adani Chemicals) ಸಂಸ್ಥೆಗೆ ವರ್ಗಾಯಿಸಿದ್ದ ಅರಣ್ಯ ಭೂಮಿಯ ಅಸಮರ್ಪಕ ವರ್ಗೀಕರಣದಿಂದಾಗಿ ಕಂಪೆನಿಯು ಸರಕಾರಕ್ಕೆ ರೂ 58.64 ಕೋಟಿಯಷ್ಟು ಕಡಿಮೆ ಪಾವತಿಸಿದೆ ಎಂದು ಗುಜರಾತ್ (Gujarat) ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾದ ತನ್ನ ಐದನೇ ವರದಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ(PAC) ಹೇಳಿದೆ indianexpress.com ವರದಿ ಮಾಡಿದೆ.

ಕಂಪೆನಿಯಿಂದ ಈ ಮೊತ್ತವನ್ನು ಮೂರು ತಿಂಗಳೊಳಗೆ ಪಡೆದುಕೊಳ್ಳುವಂತೆ ಹಾಗೂ ಅರಣ್ಯ ಜಮೀನಿನ ಅಸಮರ್ಪಕ ವರ್ಗೀಕರಣ ನಡೆಸಿದ ಸರಕಾರಕ್ಕೆ ನಷ್ಟ ಉಂಟು ಮಾಡಿ ಕಂಪೆನಿಗೆ ಲಾಭ ತಂದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿದೆ.

ತನ್ನ ವರದಿಯಲ್ಲಿ ಕಾಂಗ್ರೆಸ್ ಶಾಸಕ ಪುಂಜಾ ವಂಶ್ ನೇತೃತ್ವದ ಸಮಿತಿಯು ಈ ಕುರಿತಂತೆ ಸಿಎಜಿ ಇದರ ಆಡಿಟ್ ವರದಿಯೊಂದರಲ್ಲಿ ತಿಳಿಸಿದ್ದನ್ನೂ ಉಲ್ಲೇಖಿಸಿದೆ.

ಅದಾನಿ ಕೆಮಿಕಲ್ಸ್ ಲಿಮಿಟೆಡ್ ಸಲ್ಲಿಸಿದ ಪ್ರಸ್ತಾವನೆಯಂತೆ ಕೇಂದ್ರ ಸರಕಾರ 2004 ರಲ್ಲಿ ಕಛ್ ಜಿಲ್ಲೆಯ ಮುಂದ್ರಾ ಗ್ರಾಮದಲ್ಲಿ 1,860 ಹೆಕ್ಟೇರ್ ಮತ್ತು ಧ್ರಬ್ ಗ್ರಾಮದಲ್ಲಿ 168.42 ಹೆಕ್ಟೇರ್ ಜಮೀನನ್ನು ಮಂಜೂರುಗೊಳಿಸಲು ತಾತ್ವಿಕ ಒಪ್ಪಿಗೆ ನೀಡಿತ್ತು.

2009 ರಲ್ಲಿ ರಾಜ್ಯ ಸರಕಾರ ಕಂಪೆನಿಯ ಹೊಸ ಪ್ರಸ್ತಾವನೆಯನ್ನು ಕೇಂದ್ರದ ಮುಂದಿರಿಸಿತ್ತು ಹಾಗೂ ಇದಕ್ಕೆ ಫೆಬ್ರವರಿ 2009 ರಲ್ಲಿ ಅನುಮೋದನೆ ದೊರಕಿತ್ತು.

ಸುಪ್ರೀಂ ಕೋರ್ಟಿನ ಮಾರ್ಚ್ 2008 ತೀರ್ಪಿನಂತೆ ಆರು ವರ್ಗಗಳ ಅರಣ್ಯಗಳ ನಿವ್ವಳ ಪ್ರಸ್ತುತ ಮೌಲ್ಯ(ಎನ್‍ಪಿವಿ) ನಿಗದಿಪಡಿಸುವ ಕುರಿತು ಹೇಳಲಾಗಿತ್ತು. ಕಛ್ ಜಮೀನನ್ನು ಇಕೋ ಕ್ಲಾಸ್ 2 (ತಲಾ ಹೆಕ್ಟೇರಿಗೆ ರೂ 7.30 ಲಕ್ಷ) ಮತ್ತು ಇಕೋ ಕ್ಲಾಸ್ 4 (ಹೆಕ್ಟೇರಿಗೆ ತಲಾ ರೂ 4.30 ಲಕ್ಷ ಎನ್‍ಪಿವಿ) ಎಂದು ವರ್ಗೀಕರಿಸಲಾಗಿತ್ತು.

ಆದರೆ ಡಿಸೆಂಬರ್ 2008 ರಲ್ಲಿ ಭುಜ್ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ತಮ್ಮ ವರದಿಯಲ್ಲಿ ಕಛ್ ಪೂರ್ವದ ಅರಣ್ಯ ಜಮೀನಿನಲ್ಲಿ ಮ್ಯಾಂಗ್ರೋವ್ ತುಂಬಿದೆ ಹಾಗೂ ಅದು ಸಮತಟ್ಟು ಪ್ರದೇಶವಾಗಿದ್ದರೂ ಅದನ್ನು ಇಕೋ ಕ್ಲಾಸ್ 4 ಎಂದು ವರ್ಗೀಕರಿಸಿ 2008.42 ಹೆಕ್ಟೇರಿಗೆ ಎನ್‍ಪಿವಿ ಪ್ರಕಾರ ರೂ 87.97 ಕೋಟಿ ಪಡೆದುಕೊಳ್ಳಲಾಗಿತ್ತು ಎಂದು ವರದಿ ಹೇಳಿದ್ದರು.

ವಾಸ್ತವವಾಗಿ ಈ ಜಮೀನು ಇಕೋ ಕ್ಲಾಸ್ 2 ಅಡಿಯಲ್ಲಿ ಬರಬೇಕಿದ್ದರೂ ಅದನ್ನು ಇಕೋ ಕ್ಲಾಸ್ 4 ಎಂದು ವರ್ಗೀಕರಿಸಿದ್ದರಿಂದ ಸರಕಾರಕ್ಕೆ ಕಡಿಮೆ ಮೊತ್ತ ದೊರಕಿದೆ ಎಂದು ಸಮಿತಿ ಹೇಳಿದೆ.

ಇದನ್ನೂ ಓದಿ: ಎನ್‍ಆರ್‌ಸಿಯಿಂದ ಕೈಬಿಡಲಾಗಿದ್ದ ಅಸ್ಸಾಂ ಮಹಿಳೆಯ ಗಡಿಪಾರಿಗೆ ಸುಪ್ರೀಂ ತಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News