ಕೊಪ್ಪ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಿ

Update: 2022-09-27 11:29 GMT

ಕೊಪ್ಪ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಬೀದಿನಾಯಿಗಳ ಹಾವಳಿ ಜೋರಾಗಿದ್ದು, ಅವುಗಳ ಉಪಟಳ ತಾಳಲಾರದೆ ಜನ ಭಯ ಭೀತರಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪ.ಪಂ. ಆಡಳಿತವು ಇದು ತಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ಮೌನವಾಗಿರುವುದು ಖೇದಕರ.

ಇತ್ತೀಚೆಗೆ ಕೊಪ್ಪದ ಶಾಲೆಯೊಂದರಲ್ಲಿ ಬೆಳಗಿನ ಪ್ರಾರ್ಥನೆಗೆ ನಿಂತಿದ್ದ ಮಕ್ಕಳ ಮೇಲೆ ಬೀದಿನಾಯಿ ಎರಗಿ ಕಚ್ಚಿದೆ. ಬೆಳಗ್ಗೆ ವಾಕಿಂಗ್  ಹೋಗುವವರು, ದ್ವಿಚಕ್ರ ವಾಹನ ಸವಾರರು ಬೀದಿನಾಯಿಗಳ ಹಾವಳಿಯಿಂದಾಗಿ ಆತಂಕದಿಂದಲೇ ಸಂಚರಿಸುವಂತಾಗಿದೆ. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಟ್ಟಣ ಪಂಚಾಯತ್ ನ್ನು ಒತ್ತಾಯಿಸಿದರೆ, ನಾಯಿಗಳನ್ನು ಕೊಲ್ಲುವುದು, ಹಿಡಿಯುವುದು ಸುಪ್ರೀಂ ಕೋರ್ಟ್ ಆದೇಶದಂತೆ ನಿಷಿದ್ಧ ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಆದರೆ ಬೀದಿನಾಯಿಗಳನ್ನು ಹಿಡಿದು ರೇಬೀಸ್ ವ್ಯಾಕ್ಸಿನ್ ಕೊಡಿಸುವುದು ಪಟ್ಟಣ ಪಂಚಾಯತ್ ಜವಾಬ್ದಾರಿ. ಇದರಿಂದ ಅವರು ನುಣುಚಿಕೊಳ್ಳುತ್ತಿರುವುದು ಖಂಡನೀಯ.

ಕೊಪ್ಪ ತಾಲೂಕಿನ ಅನೇಕ ಭಾಗಗಳಲ್ಲಿ ರೇಬೀಸ್ ರೋಗಪೀಡಿತ ನಾಯಿಗಳು ಹಲವಾರು ಜಾನುವಾರು ಮತ್ತು ನಾಗರಿಕರ ಮೇಲೆ ಎರಗಿ ಕಚ್ಚಿವೆ. ಹಿರೇಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ದನ ಕೂಡ ಸತ್ತಿದೆ. ಜಯಪುರದ ಕಟ್ಟೆಮನೆಯಲ್ಲಿ ಮತ್ತಿತರ ಕಡೆಗಳಲ್ಲಿ ಹುಚ್ಚುನಾಯಿಗಳ ಹಾವಳಿ ಹೆಚ್ಚಿದೆ.

ರೇಬೀಸ್ ಸರಿಯಾದ ಚುಚ್ಚುಮದ್ದು ಪಡೆಯದಿದ್ದಲ್ಲಿ ಮಾರಣಾಂತಿಕ. ಆದ್ದರಿಂದ ಬೀದಿನಾಯಿ, ಜಾನುವಾರುಗಳ ನಿಯಂತ್ರಣಕ್ಕೆ  ಪಟ್ಟಣ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಬೇಕು. ಆ ಮೂಲಕ ನಾಗರಿಕರನ್ನು ಅಪಾಯದಿಂದ ಪಾರು ಮಾಡಬೇಕು.
-ಎಂ.ಯೂಸುಫ್ ಪಟೇಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News