ಕಪ್ಪು ಬಣ್ಣದವಳೆಂದು ನಿಂದಿಸುತ್ತಿದ್ದ ಆರೋಪ: ಪತಿಯ ಹತ್ಯೆ

Update: 2022-09-28 02:58 GMT

ಛತ್ತೀಸ್‍ಗಢ: ಕಪ್ಪು ಬಣ್ಣದವಳೆಂದು ಸದಾ ನಿಂದಿಸುತ್ತಿದ್ದ ಆರೋಪದಲ್ಲಿ ಪತಿಯನ್ನು ಮಹಿಳೆಯೊಬ್ಬಳು ಕೊಡಲಿಯಿಂದ ಹೊಡೆದು ಸಾಯಿಸಿದ ಘಟನೆ ಛತ್ತೀಸ್‍ಗಢದ ದರ್ಗ್ ಜಿಲ್ಲೆಯಲ್ಲಿ ನಡೆದಿದೆ.

ಅಮಲೇಶ್ವರ ಗ್ರಾಮದಲ್ಲಿ ಅನಂತ್ ಸೋನ್ವಾನಿ (40) ಎಂಬ ವ್ಯಕ್ತಿಯನ್ನು ಕೊಡಲಿಯಿಂದ ಹೊಡೆದು ಸಾಯಿಸಿದ ಆರೋಪದಲ್ಲಿ ಸಂಗೀತಾ ಸೋನ್ವಾನಿ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಉಪವಿಭಾಗ ಪೊಲೀಸ್ ಅಧಿಕಾರಿ ದೇವಾಂಶ್ ರಾಥೋಡ್ ಹೇಳಿದ್ದಾರೆ.

ಕೊಲೆಗೀಡಾದ ವ್ಯಕ್ತಿ ತನ್ನ ಪತ್ನಿಯನ್ನು ತುಚ್ಛವಾಗಿ ಕಾಣುತ್ತಿದ್ದ ಹಾಗೂ ಆಕೆಯ ಕಪ್ಪುಬಣ್ಣದ ಬಗ್ಗೆ ಹೀಯಾಳಿಸುತ್ತಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಹಿಂದೆ ಕೂಡಾ ಹಲವು ಬಾರಿ ಪತಿ- ಪತ್ನಿ ನಡುವೆ ಜಗಳವಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.

ರವಿವಾರ ರಾತ್ರಿ ಇದೇ ವಿಚಾರಕ್ಕೆ ಜಗಳವಾಗಿದ್ದು, ಕೋಪಗೊಂಡ ಸಂಗೀತಾ ತನ್ನ ಪತಿಯ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ, ಸ್ಥಳದಲ್ಲೇ ಹತ್ಯೆ ಮಾಡಿದಳು ಎಂದು ತಿಳಿದುಬಂದಿದೆ.

ಮರುದಿನ ಬೆಳಗ್ಗೆ ತನ್ನ ಪತಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರಿಗೆ ಮಹಿಳೆ ಮಾಹಿತಿ ನೀಡಿದ್ದಾಳೆ. ಆದರೆ ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿ ವಿವರಿಸಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News