ಪ್ರಧಾನಿ ಮೋದಿ ಕನಸಿನ ಹುಲಿ ಸಫಾರಿಗಾಗಿ 6421 ಮರಗಳನ್ನು ಕಡಿಯಲಾಗಿದೆ:‌ ಫಾರೆಸ್ಟ್ ಸರ್ವೇ ಆಫ್ ಇಂಡಿಯಾ

Update: 2022-10-02 05:37 GMT

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಪಖ್ರೋ ಕಲಾಘರ್ ಹುಲಿ ಮೀಸಲು ವಿಭಾಗದ ಅನುಷ್ಠಾನ ನೆಪದಲ್ಲಿ ಉತ್ತರಾಖಂಡದ ಕೋರ್ಬೆಟ್ ಅರಣ್ಯದಲ್ಲಿ 6421 ಮರಗಳನ್ನು ಕಡಿಯಲಾಗಿದೆ ಎಂಬ ಅಂಶ ಇದೀಗ ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ಮತ್ತು ಉತ್ತರಾಖಂಡ ಅರಣ್ಯ ಇಲಾಖೆ ನಡುವಿನ ವಿವಾದಕ್ಕೆ ಕಾರಣವಾಗಿದೆ ಎಂದು newindianexpress.com ವರದಿ ಮಾಡಿದೆ.

ಪ್ರಧಾನಿಯವರ ಕನಸಿನ ಪಖ್ರೋ ಟೈಗರ್ ಪ್ರಾಜೆಕ್ಟ್ ಗಾಗಿ ಕೊರ್ಬೆಟ್ ಮೀಸಲು ಅರಣ್ಯದಲ್ಲಿ 6421 ಮತಗಳನ್ನು ಕಡಿಯಲಾಗಿದೆ ಎಂದು ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ತನ್ನ ಸೆಪ್ಟೆಂಬರ್ 6ರ ವರದಿಯಲ್ಲಿ ಹೇಳಿದೆ. ಅಕ್ರಮವಾಗಿ ಮರಗಳನ್ನು ಕಡಿದಿರುವುದು ಮಾತ್ರವಲ್ಲದೇ, ಉತ್ತರಾಖಂಡ ಅರಣ್ಯ ಇಲಾಖೆ ಕೊರ್ಬೆಟ್ ಹುಲಿ ಮೀಸಲು ಅರಣ್ಯದಲ್ಲಿ 16.21 ಹೆಕ್ಟೇರ್ ಪ್ರದೇಶವನ್ನು ತೆರವುಗೊಳಿಸಿದೆ ಎಂದು ಎಫ್‍ಎಸ್‍ಐ ವಿವರಿಸಿದೆ.

ವನ್ಯ ಜೀವಿ ಸಂರಕ್ಷಕ ಗೌರವ್ ಕುಮಾರ್ ಬನ್ಸಾಲ್ ಅವರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಈ ಸಂಬಂಧ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್‍ಎಸ್‍ಐ ಸಮೀಕ್ಷೆ ನಡೆಸಿತ್ತು. ಅರಣ್ಯ ಸಮೀಕ್ಷೆಗೆ ಉತ್ತರಾಖಂಡ ಅರಣ್ಯ ಇಲಾಖೆ ಎಫ್‍ಎಸ್‍ಐಗೆ ಮನವಿ ಮಾಡಿಲ್ಲ. ಪರಿಸರ ಮತ್ತು ಅರಣ್ಯ ಸಚಿವಾಲಯ ಸಮೀಕ್ಷೆ ನಡೆಸುವಂತೆ ಎಫ್‍ಎಸ್‍ಐಗೆ ಕೋರಿತ್ತು ಎಂದು ಬನ್ಸಾಲ್ ಸ್ಪಷ್ಟಪಡಿಸಿದ್ದಾರೆ.

ದೇಶದ ಅತ್ಯುನ್ನತ ಸಮೀಕ್ಷಾ ಏಜೆನ್ಸಿಯ ಬಗ್ಗೆ ರಾಜ್ಯ ಅರಣ್ಯ ಇಲಾಖೆಗೆ ವಿಶ್ವಾಸ ಇಲ್ಲದಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

ಪಖ್ರೋ ಕಲಾಘಡ್ ಹುಲಿ ಅಭಯಾರಣ್ಯದಲ್ಲಿ ಅಕ್ರಮವಾಗಿ ಮರ ಕಡಿದಿರುವ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಉತ್ತರಾಖಂಡದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ವಿನೋದ್ ಸಿಂಘಲ್ ಆಗ್ರಹಿಸಿದ್ದಾರೆ. ವಿಸ್ತೃತ ವರದಿ ಇನ್ನೂ ಬಂದಿಲ್ಲ. ಈಗ ಬಂದಿರುವ ಈ ವರದಿಯಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿವೆ. ಇದನ್ನು ಒಪ್ಪಿಕೊಳ್ಳಬೇಕಿದ್ದರೆ ಅದನ್ನು ಬಗೆಹರಿಸುವ ಅಗತ್ಯವಿದೆ ಎಂದು ಸಿಂಘಲ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News