ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆ, ದ್ವಿಶತಕ ಸಿಡಿಸಿದ ವೆಸ್ಟ್‌ಇಂಡೀಸ್ ಆಟಗಾರ ಕಾರ್ನ್‌ವಾಲ್

Update: 2022-10-06 15:20 GMT

 ನ್ಯೂಯಾರ್ಕ್, ಅ.6: ವೆಸ್ಟ್‌ಇಂಡೀಸ್ ಕ್ರಿಕೆಟಿಗ ರಹಕೀಮ್ ಕಾರ್ನ್‌ವಾಲ್ ಅಮೆರಿಕದಲ್ಲಿ ನಡೆದ ಟ್ವೆಂಟಿ-20 ಪಂದ್ಯವೊಂದರಲ್ಲಿ ದ್ವಿಶತಕ ಸಿಡಿಸುವ ಮೂಲಕ ಒಂದು ಅಪರೂಪದ ಸಾಧನೆ ಮಾಡಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲಿಗನಾಗಿದ್ದಾರೆ.

ಅಟ್ಲಾಂಟ ಓಪನ್ ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಅಟ್ಲಾಂಟ ಫೈಯರ್ ಪರ ಆಡಿದ ಕಾರ್ನ್‌ವಾಲ್ ಕೇವಲ 77 ಎಸೆತಗಳಲ್ಲಿ 22 ಭರ್ಜರಿ ಸಿಕ್ಸರ್ ಹಾಗೂ 17 ಬೌಂಡರಿಗಳ ಸಹಿತ ಔಟಾಗದೆ 205 ರನ್ ಗಳಿಸಿದರು.

ಕಾರ್ನ್‌ವಾಲ್ ತನ್ನ ಬಿರುಸಿನ ಇನಿಂಗ್ಸ್‌ನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ.

ಈ ಮಾಹಿತಿಯನ್ನು ಖ್ಯಾತ ಸಂಖ್ಯಾಶಾಸ್ತ್ರಜ್ಞ ಮೋಹನ್‌ದಾಸ್ ಮೆನನ್ ಅವರು ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ. "ಅಟ್ಲಾಂಟ ಓಪನ್ ಎಂದೇ ಕರೆಯಲ್ಪಡುವ ಅಮೆರಿಕದ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಅಟ್ಲಾಂಟ ಫೈಯರ್ ಪರ ಆಡುತ್ತಿರುವ ವೆಸ್ಟ್‌ಇಂಡೀಸ್‌ನ ರಹಕೀಮ್ ಕಾರ್ನ್‌ವಾಲ್ 266.23ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 77 ಎಸೆತಗಳಲಿ ಔಟಾಗದೆ 205 ರನ್ ಗಳಿಸಿದ್ದು, ಇದರಲ್ಲಿ 22 ಸಿಕ್ಸರ್ ಹಾಗೂ 17 ಬೌಂಡರಿಗಳಿವೆ. ವಿಜೇತ ತಂಡಕ್ಕೆ 75,000 ಡಾಲರ್ ಬಹುಮಾನ ಮೊತ್ತ ಸಿಗಲಿದೆ'' ಎಂದು ಮೆನನ್ ಟ್ವೀಟಿಸಿದ್ದಾರೆ.

ಅಟ್ಲಾಂಟ ಫೈಯರ್ 1 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದ್ದು, ಎದುರಾಳಿ ಸ್ಕ್ವಾರ್ ಡ್ರೈವ್ ತಂಡವನ್ನು 8 ವಿಕೆಟಿಗೆ 154 ರನ್‌ಗೆ ನಿಯಂತ್ರಿಸಿ 172 ರನ್‌ನಿಂದ ಭರ್ಜರಿ ಜಯ ದಾಖಲಿಸಿತ್ತು. ಸ್ಪಿನ್ ಬೌಲಿಂಗ್ ಮಾಡಬಲ್ಲ ಕಾರ್ನ್‌ವೆಲ್ ಈ ಪಂದ್ಯದಲ್ಲಿ ಬೌಲಿಂಗ್ ಮಾಡಲಿಲ್ಲ.

ಇದುವರೆಗೆ ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಆಡದ ಕಾರ್ನ್‌ವಾಲ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು. ಗಜಗಾತ್ರದ ಕಾರ್ನ್‌ವಾಲ್ ಫೀಲ್ಡಿಂಗ್‌ನಲ್ಲಿ ಅಷ್ಟಾಗಿ ಮಿಂಚದಿದ್ದರೂ ತಮ್ಮ ಬ್ಯಾಟಿಂಗ್ ಮೂಲಕ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯದ ಆ್ಯರೊನ್ ಫಿಂಚ್ ಗರಿಷ್ಠ ವೈಯಕ್ತಿಕ ಸ್ಕೋರ್(172 ರನ್)ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಪರವಾಗಿ 66 ಎಸೆತಗಳಲ್ಲಿ 175 ರನ್ ಗಳಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News