ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ.7.5ರಿಂದ ಶೇ.6.5ಕ್ಕೆ ತಗ್ಗಿಸಿದ ವಿಶ್ವಬ್ಯಾಂಕ್

Update: 2022-10-06 17:48 GMT

 ಹೊಸದಿಲ್ಲಿ,ಅ.6: ವಿಶ್ವಬ್ಯಾಂಕ್ ಗುರುವಾರ ಪ್ರಸಕ್ತ ಹಣಕಾಸು ವರ್ಷ (2022-23)ಕ್ಕೆ ಭಾರತದ ಆರ್ಥಿಕ ಬೆಳವಣಿಗೆಯನ್ನು ತಾನು ಕಳೆದ ಜೂನ್‌ನಲ್ಲಿ ಅಂದಾಜಿಸಿದ್ದ ಶೇ.7.5ರಿಂದ ಶೇ.6.5ಕ್ಕೆ ತಗ್ಗಿಸಿದೆ. ಹದಗೆಡುತ್ತಿರುವ ಅಂತರರಾಷ್ಟ್ರೀಯ ಪರಿಸ್ಥಿತಿಯು ಇದಕ್ಕೆ ಕಾರಣವೆಂದು ಅದು ಹೇಳಿದೆ.

ಮುಂದಿನ ಹಣಕಾಸು ವರ್ಷ (2023-24)ದಲ್ಲಿ ಭಾರತೀಯ ಆರ್ಥಿಕತೆಯು ಶೇ.7ರವರೆಗೆ ಬೆಳೆಯುವ,ಆದರೆ 2024-25ರಲ್ಲಿ ಶೇ.6.1ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ವಿಶ್ವಬ್ಯಾಂಕ್ ದಕ್ಷಿಣ ಏಶ್ಯಾ ಕುರಿತ ತನ್ನ ದ್ವೈವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಇದರೊಂದಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿಶ್ವಬ್ಯಾಂಕ್ ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಮೂರನೇ ಸಲ ಪರಿಷ್ಕರಿಸಿದೆ.

ಆದಾಗ್ಯೂ ಭಾರತವು ಕೋವಿಡ್ ಪರಿಣಾಮದಿಂದ ವಿಶ್ವದ ಇತರ ದೇಶಗಳಿಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಮಾ.31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯು ಶೇ.8.7ರ ಬೆಳವಣಿಗೆಯನ್ನು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News