ಸೈಬರ್ ಕೇಸ್‌ಗಳ ಬಗ್ಗೆ ಸ್ವಯಂ ಜಾಗೃತಿ ಇರಲಿ
ಮಾನ್ಯರೇ,
ದಿನೇ ದಿನೇ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯಾರದ್ದೋ ಮೋಸದಾಟಕ್ಕೆ ಯಾರೋ ಬಲಿಯಾಗುತ್ತಿದ್ದಾರೆ. ಇದೊಂದು ‘ಕತ್ತಲೆಯಾಟ’ ಎಂದು ಕರೆಯಬಹುದು. ಈಗಾಗಲೇ ಸಿಬಿಐ, ಆಯಾ ರಾಜ್ಯಗಳ ಪೊಲೀಸರ ಸಹಾಯ ಪಡೆದು ಕಾರ್ಯಾಚರಣೆ ನಡೆಸಿ ಅನೇಕ ಮಂದಿ ಆರೋಪಿಗಳನ್ನು ಬಂಧಿಸಿದೆ. ಈ ಜಾಲವು ಬೇರೆ ಬೇರೆ ರೂಪಗಳಲ್ಲಿ ಕಾರ್ಯಾಚರಿಸುತ್ತಿದ್ದು, ಹೀಗಾಗಿ ಇದನ್ನು ಸಂಪೂರ್ಣವಾಗಿ ಕಟ್ಟಿ ಹಾಕಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ಮಾತ್ರವಲ್ಲ, ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಈ ಸೈಬರ್ ವಂಚನಾ ಜಾಲ ಕಾರ್ಯಾಚರಿಸುತ್ತಿದ್ದು ಇದೀಗ ಸಿಬಿಐ ಈ ಜಾಲದ ವಿರುದ್ಧ ಕಾರ್ಯಾಚರಣೆಗಿಳಿದಿರುವುದು ಸ್ವಾಗತಾರ್ಹ. ಸದ್ಯ 5 ಜಿ ಯುಗ. ಈಗಿನ ಕಾಲಘಟ್ಟದಲ್ಲಿ ಇಂಟರ್‌ನೆಟ್, ತಂತ್ರಜ್ಞಾನದ ಬಳಕೆ ಹೆಚ್ಚಾಗಿರುವುದರಿಂದ ಸೈಬರ್ ವಂಚಕರ ಹಾವಳಿ ಮಿತಿಮೀರಿದೆ. ಸೈಬರ್ ಅಪರಾಧಗಳನ್ನು ಪತ್ತೆಹಚ್ಚಲು ಪ್ರತ್ಯೇಕ ಠಾಣೆಗಳನ್ನು ನಿರ್ಮಿಸಲಾಗಿದೆ. ಈ ಠಾಣೆಯ ಮೂಲಕ ಹಾಗೂ ಇತರ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸೈಬರ್ ಅಪರಾಧದ ವಿರುದ್ಧ ಜಾಗೃತಿ ಅಭಿಯಾನವನ್ನು ಮಾಡಬೇಕಾಗಿದೆ. ಸೈಬರ್ ವಂಚನೆಗೊಳಗಾದವರು ತಮಗಾದ ಅನ್ಯಾಯವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಬಹಳ ಕಡಿಮೆ. ಸಾಲನೀಡುವ ಆ್ಯಪ್‌ಗಳ ಮೋಸ, ಸೈಬರ್ ಅಶ್ಲೀಲತೆ, ಸೈಬರ್ ಹಿಂಬಾಲಿಕೆ, ಸೈಬರ್ ಮಾನಹಾನಿಯಂತಹ ವ್ಯಕ್ತಿಗಳ ವಿರುದ್ಧದ ಅಪರಾಧ, ಆನ್‌ಲೈನ್ ಜೂಜು, ಬೌದ್ಧಿಕ ಆಸ್ತಿ ಉಲ್ಲಂಘನೆ, ಫಿಶಿಂಗ್, ಕ್ರೆಡಿಟ್ ಕಾರ್ಡ್ ವಂಚನೆಗಳಂತಹ ಅಪರಾಧ ಕೇಸ್‌ಗಳು ಹೆಚ್ಚಾಗುತ್ತಿದೆ.
ಹೀಗಾಗಿ ಕಾನೂನು ಅರಿವು, ಮಾಹಿತಿ ಇದ್ದರೆ ಅಂತಹವರು ನ್ಯಾಯ ಪಡೆಯಲು ಸಹಕಾರಿಯಾಗುತ್ತದೆ. ಜಾಗೃತಿ ಅನ್ನುವುದು ನಿಂತ ನೀರಲ್ಲ. ಅದನ್ನು ಸರಣಿ ರೂಪದಲ್ಲಿ ತಾಲೂಕು, ಜಿಲ್ಲಾವಾರು ಮಾಡಬೇಕಾದ ಅವಶ್ಯಕತೆ ಇದೆ. ಹೀಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾನೂನು ವೇದಿಕೆಗಳು ಈ ಕುರಿತು ಗಂಭೀರವಾಗಿ ಚಿಂತಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸಬೇಕಾಗಿದೆ. ಅಲ್ಲದೆ ಜನರು ಕೂಡಾ ಸ್ವಯಂ ಜಾಗೃತಿ ವಹಿಸಿಕೊಳ್ಳಬೇಕಾಗಿದೆ.