ರಾಜಸ್ಥಾನ: ಅರ್ಚಕ, ಇತರರಿಂದ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ
ಜೈಪುರ, ಅ. 9: ರಾಜಸ್ಥಾನದ (Rajasthan) ಅಜ್ಮೀರ್ ಜಿಲ್ಲೆಯಲ್ಲಿ 25 ವರ್ಷದ ದಲಿತ (Dalit) ಮಹಿಳೆಯನ್ನು ಅರ್ಚಕ (priest) ಸೇರಿದಂತೆ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಆರೋಪಿ ಸಂಜಯ್ ಶರ್ಮಾ ಸಂತ್ರಸ್ತೆಯ ಕುಟುಂಬದ ಅರ್ಚಕ. ಆಕೆಯ ಕುಟುಂಬಕ್ಕೆ ಆಗಾಗ ಪ್ರಾರ್ಥನೆ ಸಲ್ಲಿಸುವ ಕಾರ್ಯವನ್ನು ಶರ್ಮಾ ಮಾಡುತ್ತಿದ್ದ. ಶರ್ಮಾ ಮಹಿಳೆಯ ಅತ್ಯಾಚಾರ ನಡೆಸಿದ್ದೂ ಅಲ್ಲದೆ, ಘಟನೆಯ ವೀಡಿಯೊವನ್ನು ಕೂಡ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಂಜಯ್ ಶರ್ಮಾ ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಾಗ ಮೊದಲ ಬಾರಿ ಅತ್ಯಾಚಾರ ಎಸಗಿದ್ದಾನೆ ಹಾಗೂ ವೀಡಿಯೊ ಮಾಡಿದ್ದಾನೆ. ಈ ವೀಡಿಯೊ ತೋರಿಸಿ ಸಂತ್ರಸ್ತೆಯಿಂದ ಹಣ ಸುಲಿಗೆ ಮಾಡಿದ್ದಾನೆ. ಅನಂತರ ಇತರರೊಂದಿಗೆ ಸೇರಿ ಮತ್ತೆ ಅತ್ಯಾಚಾರ ಎಸಗಿದ್ದಾನೆ ಎಂದು ಅಜ್ಮೀರ್ ಉತ್ತರದ ಪೊಲೀಸ್ ಅಧೀಕ್ಷಕ ಛಾವಿ ಶರ್ಮಾ ಅವರು ತಿಳಿಸಿದ್ದಾರೆ.
‘‘ಆರೋಪಿಗಳು ಕಳೆದ ಒಂದು ತಿಂಗಳು ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ ಹಾಗೂ ವಶದಲ್ಲಿ ಇರಿಸಿದ್ದಾರೆ’’ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಪತಿ ಹಾಗೂ ಮಕ್ಕಳನ್ನು ಹತ್ಯೆಗೈಯುವುದಾಗಿ, ವೀಡಿಯೊವನ್ನು ಬಹಿರಂಗಗೊಳಿಸುವುದಾಗಿ ಆರೋಪಿ ಮಹಿಳೆಗೆ ಬೆದರಿಕೆ ಒಡಿದ್ದಾನೆ. ವಶದಲ್ಲಿ ಇದ್ದಾಗ ಮಹಿಳೆಯ ದೇಹಕ್ಕೆ ಅಮಲು ಪದಾರ್ಥ ಚುಚ್ಚಿದ್ದಾನೆ. ‘‘ತನ್ನ ಮೇಲೆ ಎಷ್ಟು ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದಿಲ್ಲ’’ ಎಂದು ಮಹಿಳೆ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಪತ್ನಿ ಮನೆಗೆ ಬರದೇ ಇದ್ದಾಗ ಪತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅನಂತರ ಆರೋಪಿ ಸೆಪ್ಟಂಬರ್ 27ರಂದು ಮಹಿಳೆಯನ್ನು ಪೊಲೀಸ್ ಠಾಣೆಯ ಹೊರಗೆ ಬಿಟ್ಟು ಹೋಗಿದ್ದ.
ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಅಕ್ಟೋಬರ್ 7ರಂದು ಎಫ್‌ಐಆರ್ ದಾಖಲಿಸಲಾಗಿದೆ ಹಾಗೂ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.