ರಾಜ್ಯಪಾಲರನ್ನು ಕುಲಪತಿಯಾಗಿ ನೇಮಕ ವಿರೋಧಿಸಿ ರಾಜೀನಾಮೆ ನೀಡಿದ ಗುಜರಾತ್ ವಿದ್ಯಾಪೀಠದ 9 ಟ್ರಸ್ಟಿಗಳು

Update: 2022-10-18 12:01 GMT
Photo: Wikipedia

 ಅಹ್ಮದಾಬಾದ್: ʼರಾಜಕೀಯ ಒತ್ತಡʼ ದ ಕಾರಣ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ ಅವರನ್ನು ಗುಜರಾತ್ ವಿದ್ಯಾಪೀಠದ ಕುಲಪತಿಯನ್ನಾಗಿ ನೇಮಕಗೊಳಿಸಿದ್ದನ್ನು ವಿರೋಧಿಸಿ ಮಹಾತ್ಮ ಗಾಂಧೀಜಿಯಿಂದ ಸ್ಥಾಪಿತವಾದ ಈ ವಿದ್ಯಾಪೀಠದ 24 ಟ್ರಸ್ಟೀಗಳ ಪೈಕಿ 9 ಮಂದಿ ರಾಜೀನಾಮ ನೀಡಿದ್ದಾರೆ. ಆದರೆ ಈ ರಾಜೀನಾಮೆಗಳನ್ನು ಸ್ವೀಕರಿಸದೇ ಇರಲು ಅಹ್ಮದಾಬಾದ್ ಮೂಲದ ಈ ವಿವಿಯ ಆಡಳಿತ ಮಂಡಳಿ ನಿರ್ಧರಿಸಿದೆ.

ದೇವವ್ರತ ಅವರನ್ನು ಕುಲಪಯನ್ನಾಗಿ ನೇಮಕಗೊಳಿಸಿರುವುದು ರಾಜಕೀಯ ಒತ್ತಡದಿಂದಾಗಿ ಹಾಗೂ ಇದು ಗಾಂಧೀಜಿ ಪ್ರತಿಪಾದಿಸಿರುವ ಮೌಲ್ಯಗಳು ಮತ್ತು ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ರಾಜೀನಾಮೆ ನೀಡಿದ ಟ್ರಸ್ಟಿಗಳು ತಿಳಿಸಿದ್ದಾರಲ್ಲದೆ ರಾಜ್ಯಪಾಲರು ಕುಲಪತಿ ಹುದ್ದೆ ನಿರಾಕರಿಸುವ ಮೂಲಕ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಕೋರಿದ್ದಾರೆ.

ವಿವಿಯ ಈ ಹಿಂದಿನ ಕುಲಪತಿ, ಖ್ಯಾತ ಹೊರಾಟಗಾರ್ತಿ ಮತ್ತು ಗಾಂಧೀವಾದಿ ಇಳಾ ಭಟ್ಟ್ (89) ಅವರು ವಯೋ ಸಂಬಂಧಿತ ಕಾರಣಗಳನ್ನು ಮುಂದೊಡ್ಡಿ ರಾಜೀನಾಮೆ ನೀಡಿದ ನಂತರ ವಿವಿಯ ಆಡಳಿತ ಮಂಡಳಿ ರಾಜ್ಯಪಾಲರನ್ನು ಈ 102 ವರ್ಷ ಇತಿಹಾಸದ ಸಂಸ್ಥೆಯ 12ನೇ ಕುಲಪತಿಗಳನ್ನಾಗಿ ನೇಮಿಸಲು ನಿರ್ಧರಿಸಿತ್ತು. ರಾಜ್ಯಪಾಲರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು.

ರಾಜೀನಾಮೆ ನೀಡಿರುವ ಟ್ರಸ್ಟಿಗಳು ಬರೆದಿರುವ ಬಹಿರಂಗ ಪತ್ರದಲ್ಲಿ, ರಾಜ್ಯಪಾಲರನ್ನು ಕುಲಪತಿಗಳನ್ನಾಗಿ ನೇಮಕಗೊಳಿಸುವ ನಿರ್ಧಾರ  ಟ್ರಸ್ಟೀಗಳ ಮಂಡಳಿಯ ಸರ್ವಾನುಮತದ ನಿರ್ಣಯವಾಗಿರಲಿಲ್ಲ. ಮೇಲಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕಿದ್ದರೆ ಕುಲಪತಿ ನೇಮಕಾತಿ ಕುರಿತು ಸರಕಾರ ಅಸಮರ್ಥನೀಯ ಬೇಡಿಕೆಗಳನ್ನಿರಿಸಿತ್ತು ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News