ಕಳ್ಳತನ ಮಾಡಿದ ಚಿನ್ನಾಭರಣವನ್ನು ಕೊರಿಯರ್ ಮೂಲಕ ವಾಪಾಸು ಮಾಡಿದ ಕಳ್ಳರು !

Update: 2022-11-02 03:06 GMT

ಗಾಝಿಯಾಬಾದ್: ಕಳ್ಳತನ ಮಾಡಿದ ವಸ್ತುಗಳನ್ನು ಕಳ್ಳರು ಕೊರಿಯರ್ ಮೂಲಕ ವಾಪಾಸು ಕಳುಹಿಸಿದ ಸ್ವಾರಸ್ಯಕರ ಘಟನೆ ವರದಿಯಾಗಿದೆ.

ಉತ್ತರಪ್ರದೇಶದ ಗಾಝಿಯಾಬಾದ್‍ನ ರಾಜ್‍ನಗರದ ಫಾರ್ಚೂನ್ ಅಪಾರ್ಟ್‍ಮೆಂಟ್‍ನಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳರು ವಾಪಾಸು ಕಳುಹಿಸಿದ್ದು ಕೇವಲ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು!

ಈ ಕುಟುಂಬದವರು ಅ.23ರಂದು ದೀಪಾವಳಿ ಹಿನ್ನೆಲೆಯಲ್ಲಿ ಹುಟ್ಟೂರಿಗೆ ತೆರಳಿದ್ದವರು. 27ರಂದು ಸಂಜೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂತು. ಆ ಬಳಿಕ ಮನೆಯ ಮಾಲಕರಾದ ಪ್ರೀತಿ ಸಿರೋಹಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ನಂದಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಸಕ್ತಿಯ ವಿಷಯವೆಂದರೆ ಈ ಪ್ರಕರಣದ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾದ ಬಳಿಕ ಅ. 31ರಂದು ಸಂತ್ರಸ್ತರಿಗೆ ಬಂದ ಕೊರಿಯರ್‌ ನಲ್ಲಿ, ಮನೆಯಲ್ಲಿ ಕಳ್ಳತನವಾದ ಚಿನ್ನಾಭರಣಗಳು ಇದ್ದವು. "ಕಳುಹಿಸಿದವರ ವಿಳಾಸ ನೋಡಿದಾಗ ರಾಜದೀಪ್ ಜ್ಯುವೆಲ್ಲರ್ಸ್, ಸರಾಫ್ ಬಝಾರ್, ಹಾಪುರ ಎಂಬ ವಿಳಾಸ ಇತ್ತು. ಇದನ್ನು ತೆರೆದು ನೋಡಿದಾಗ ನಮ್ಮದೇ ಪೆಟ್ಟಿಗೆಯಲ್ಲಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಇದ್ದವು. ಉಳಿದ ಆಭರಣ ಇನ್ನಷ್ಟೇ ಪತ್ತೆಯಾಗಬೇಕಿದೆ" ಎಂದು ಪ್ರೀತಿ ಸಿರೋಹಿ ಅವರ ಮಗ ಹರ್ಷ ವಿವರಿಸಿದ್ದಾರೆ.

ಘಟನೆ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News