×
Ad

ಭಾರತ- ನೇಪಾಳ ಗಡಿ 72 ಗಂಟೆ ಬಂದ್ : ಕಾರಣ ಏನು ಗೊತ್ತೇ ?

Update: 2022-11-06 07:18 IST

ಮಹಾರಾಜ್‍ಗಂಜ್ (ಉತ್ತರ ಪ್ರದೇಶ): ನೆರೆಯ ದೇಶ ನೇಪಾಳದಲ್ಲಿ ಈ ತಿಂಗಳ 20ರಂದು ಸಾರ್ವತ್ರಿಕ ಮತದಾನ ನಡೆಯುವ ಹಿನ್ನೆಲೆಯಲ್ಲಿ ಸಮಾಜ ಘಾತುಕ ಶಕ್ತಿಗಳು ಗಡಿದಾಟದಂತೆ ಎಚ್ಚರ ವಹಿಸುವ ದೃಷ್ಟಿಯಿಂದ ಭಾರತ- ನೇಪಾಳ ಗಡಿ (India-Nepal border)ಯನ್ನು ಚುನಾವಣೆಗೆ 72 ಗಂಟೆಗಳ ಮೊದಲು ಮುಚ್ಚಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಕಟಿಸಿದ್ದಾರೆ.

ನೇಪಾಳದ ಪ್ರಜಾಪ್ರತಿನಿಧಿ ಸಭೆಗೆ ನಡೆಯುವ ಚುನಾವಣೆ ಸಂಬಂಧ ನೇಪಾಳದ ರೂಪಾಂದೇಹಿ ಜಿಲ್ಲೆಯಲ್ಲಿ ಶನಿವಾರ ನಡೆದ ಉಭಯ ದೇಶಗಳ ಉನ್ನತ ಅಧಿಕಾರಿಗಳ ಸಭೆಯ ಬಳಿಕ ಮಹಾರಾಜ್‍ಗಂಜ್ ಜಿಲ್ಲಾಧಿಕಾರಿ ಸತೇಂದ್ರ ಕುಮಾರ್ ಅವರು ಈ ವಿಷಯವನ್ನು ತಿಳಿಸಿದರು. 

"ನವೆಂಬರ್ 17ರಿಂದ ನವೆಂಬರ್ 20ರ ಮಧ್ಯರಾತ್ರಿವರೆಗೆ 72 ಗಂಟೆಗಳ ಕಾಲ ಗಡಿಯನ್ನು ಮುಚ್ಚುವ ನಿರ್ಧಾರವನ್ನು ಉಭಯ ದೇಶಗಳ ನೆರೆ ಜಿಲ್ಲೆಗಳ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ" ಎಂದು ಹೇಳಿದರು.

ಉಭಯ ದೇಶಗಳ ಸ್ಥಳೀಯಾಡಳಿತ, ಪೊಲೀಸ್, ಸಶಸ್ತ್ರಸೀಮಾ ಬಲ, ಸೇನೆ, ಕಸ್ಟಮ್ಸ್, ಇಮಿಗ್ರೇಶನ್ ಮತ್ತು ಇತರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವಿಧ್ವಂಸಕ ಕೃತ್ಯಗಳನ್ನು ಉಂಟು ಮಾಡಬಹುದಾದ ಶಕ್ತಿಗಳ ವಿರುದ್ಧ ಗಡಿಯುದ್ದಕ್ಕೂ ಕಣ್ಗಾವಲು ಇಡಲು ಹೆಚ್ಚುವರಿ ಭದ್ರತೆ ವ್ಯವಸ್ಥೆಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಉತ್ತರ ಪ್ರದೇಶವು ನೇಪಾಳ ಜತೆ 599.3 ಕಿಲೋಮೀಟರ್ ಗಡಿಯನ್ನು ಹೊಂದಿದ್ದು, ಫಿಲಿಬಿಟ್, ಲಖೀಂಪುರ ಖೇರಿ, ಬಹರೀಚ್, ಸ್ರವಸ್ಟಿ, ಬಲರಾಂಪುರ, ಸಿದ್ಧಾರ್ಥನಗರ ಮತ್ತು ಮಹಾರಾಜ್‍ಗಂಜ್ ಜಿಲ್ಲೆಗಳಲ್ಲಿ ಇದು ಹರಡಿದೆ. ಈ ಬಗ್ಗೆ newindianexpress.com ವರದಿ ಮಾಡಿದೆ. 

Similar News