ಫಿಫಾ ವಿಶ್ವಕಪ್‌ ನಡೆಯುವ ಸ್ಥಳಗಳಲ್ಲಿ ಪ್ರವಾದಿ ಮುಹಮ್ಮದ್‌ರ ಹದೀಸ್‌ಗಳನ್ನು ಪ್ರದರ್ಶಿಸಿದ ಕತರ್

Update: 2022-11-06 07:40 GMT

ದೋಹಾ: 2022 ರ ವಿಶ್ವಕಪ್ ಫುಟ್‌ಬಾಲ್‌ ನ ಆತಿಥೇಯ ರಾಷ್ಟ್ರವಾದ ಕತರ್ ಫುಟ್ಬಾಲ್ ಅಭಿಮಾನಿಗಳ ಆಗಮನವನ್ನು ಸ್ವಾಗತಿಸಲು ತನ್ನ ಬೀದಿಗಳನ್ನು ಅಲಂಕರಿಸಿದೆ. ಈ ಹಿನ್ನೆಲೆಯಲ್ಲಿ ಗಲ್ಫ್ ದೇಶದಾದ್ಯಂತ ವಿವಿಧ ರಸ್ತೆಯ ಬದಿಗಳಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಹದೀಸ್ ಉಲ್ಲೇಖಗಳನ್ನು ಪ್ರದರ್ಶಿಸಿದೆ. ಪ್ರವಾದಿ ಬೋಧನೆಗಳನ್ನು ಮತ್ತು ನಡೆನುಡಿಗಳನ್ನು ಹದೀಸ್‌ ಎನ್ನಲಾಗುತ್ತದೆ.

ಹಲವಾರು ಸ್ಥಳೀಯ ಮಾಧ್ಯಮಗಳ ಪ್ರಕಾರ, ಪ್ರದರ್ಶನದಲ್ಲಿರುವ ಭಿತ್ತಿಚಿತ್ರಗಳು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್‌ಬಾಲ್ ಪಂದ್ಯಾವಳಿಯನ್ನು ವೀಕ್ಷಿಸಲು ಬರುವ ಫುಟ್‌ಬಾಲ್ ಅಭಿಮಾನಿಗಳಿಗೆ ಇಸ್ಲಾಂ ಧರ್ಮವನ್ನು ಪರಿಚಯಿಸುವ ಗುರಿಯನ್ನು ಹೊಂದಿವೆ.

ಪ್ರವಾದಿಯವರ ಹದೀಸ್ ಉಲ್ಲೇಖಗಳ ಲಿಪಿ ಮತ್ತು ಇಂಗ್ಲಿಷ್ ಅನುವಾದ ಕ್ಯಾಲಿಗ್ರಫಿಯನ್ನು ಒಳಗೊಂಡಿದೆ. ಭಿತ್ತಿಚಿತ್ರಗಳಲ್ಲಿ ಸಹಾನುಭೂತಿ, ದಾನ ನೀಡಲು ಪ್ರೇರಣೆಯ ಬಗೆಗಿನ ಹದೀಸ್‌ಗಳನ್ನು ಒಳಗೊಂಡಿವೆ.

"ಪ್ರತಿಯೊಂದು ಉತ್ತಮ ಕಾರ್ಯವು ದಾನವಾಗಿದೆ", "ಇತರರಿಗೆ ಕರುಣೆ ತೋರದವನನ್ನು ಕರುಣೆಯಿಂದ ನಡೆಸಿಕೊಳ್ಳಲಾಗುವುದಿಲ್ಲ" ಮತ್ತು "ನರಕಾಗ್ನಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ" ಮುಂತಾದ ಹಲವಾರು ಹದೀಸ್‌ ಗಳನ್ನು ಪ್ರದರ್ಶಿಸಲಾಗಿದೆ. ಪ್ರಪಂಚದಾದ್ಯಂತ ಬರುವ ಸಂದರ್ಶಕರೊಂದಿಗೆ ತನ್ನ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳಲು ಕತರ್ 2022 ರ ವಿಶ್ವಕಪ್‌ನ ಸಂದರ್ಭವನ್ನು ಸದುಪಯೋಗಪಡಿಸಿಕೊಂಡಿದೆ.

ಕತರ್‌ನಲ್ಲಿ ನಡೆಯಲಿರುವ 2022ರ FIFA ವಿಶ್ವಕಪ್‌ಗೆ ಕೆಲವೇ ವಾರಗಳು ಬಾಕಿಯಿದ್ದು, ನವೆಂಬರ್ 20 ರಿಂದ ಡಿಸೆಂಬರ್ 18 ರವರೆಗೆ ನಡೆಯಲಿದೆ.

ಈ ವರ್ಷದ ಆವೃತ್ತಿಯು ಮಧ್ಯಪ್ರಾಚ್ಯದಲ್ಲಿ ಆಯೋಜಿಸಲಾದ ಮೊದಲ ಪಂದ್ಯಾವಳಿಯಾಗಿದೆ, ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರದಲ್ಲಿ ಮೊದಲನೆಯದು ಮತ್ತು ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಯಲಿದೆ.

Similar News