ಅಗತ್ಯ ಬಿದ್ದರೆ ಬಿಜೆಪಿ ಕಾರ್ಯಕರ್ತರಿಗೆ ಥಳಿಸಿ: ಜಾರ್ಖಂಡ್ ಕಾಂಗ್ರೆಸ್ ಮುಖಂಡ ಬಂಧು ಟಿರ್ಕೆ

ವಿವಾದದಲ್ಲಿ ಸಿಲುಕಿಕೊಂಡ ಜಾರ್ಖಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ

Update: 2022-11-08 05:56 GMT

ರಾಂಚಿ: ಅಗತ್ಯ ಬಿದ್ದರೆ ಬಿಜೆಪಿ ಕಾರ್ಯಕರ್ತರನ್ನು ಥಳಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಜಾರ್ಖಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಂಧು ಟಿರ್ಕೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ಕೇಸರಿ ಪಕ್ಷದ ವಿರುದ್ಧ, ಜಾರ್ಖಂಡ್ ಸಿಎಂ ಹೇಂಮತ್ ಸೊರೇನ್ ಅವರಿಗೆ ಕಾನೂನು ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವ ವಿರುದ್ಧ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಖಂಡಿಸಿ ರಾಜಭವನದ ಬಳಿ ಯುಪಿಎ ಸದಸ್ಯರು ಹಮ್ಮಿಕೊಂಡಿದ್ದ ಧರಣಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಬಂಧು ಟಿರ್ಕೆ ಕಾರ್ಯಕರ್ತರಿಗೆ ಈ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಇದಕ್ಕೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಯುಪಿಎ ಬೆಂಬಲಿಗರು ತಪ್ಪಿಯೂ ಬಿಜೆಪಿ ಕಾರ್ಯಕರ್ತರನ್ನು ಮುಟ್ಟಬೇಡಿ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಘುವರ್‍ದಾಸ್ ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಹಾಗೂ ಹಣದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕಾನೂನು ಜಾರಿ ನಿರ್ದೇಶನಾಲಯ ಸೊರೇನ್‍ಗೆ ನೋಟಿಸ್ ನೀಡಿತ್ತು. ಪೂರ್ವನಿಯೋಜಿತ ಕಾರ್ಯಕ್ರಮದ ಕಾರಣ ನೀಡಿ ಸೊರೇನ್ ವಿಚಾರಣೆಗೆ ಹಾಜರಾಗಿರಲಿಲ್ಲ. ಕೇಂದ್ರ ತನಿಖಾ ಏಜೆನ್ಸಿಯ ಎದುರು ಹಾಜರಾಗಲು ಮೂರು ವಾರಗಳ ಕಾಲಾವಕಾಶವನ್ನು ಅವರು ಕೋರಿದ್ದಾರೆ.

ರಾಜ್ಯದಲ್ಲಿ ಸೊರೇನ್ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ ಯಶಸ್ವಿಯಾಗದು ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯೊ ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದಾರೆ. ಟಿರ್ಕೆ ತಮ್ಮ ಭಾಷಣದಲ್ಲಿ, "ತನಿಖೆಗೆ ನಮ್ಮ ವಿರೋಧ ಇಲ್ಲ. ಆದರೆ ರಾಜಕೀಯ ದ್ವೇಷದಿಂದ ಇದನ್ನು ಮಾಡಿದರೆ ಸೂಕ್ತ ಪ್ರತ್ಯುತ್ತರ ನೀಡಬೇಕಾಗುತ್ತದೆ. ಬಿಜೆಪಿ ಕಾರ್ಯಕರ್ತರ ಅಕ್ರಮ ಬಯಲುಗೊಳಿಸಿ ಹಾಗೂ ಅಗತ್ಯ ಬಿದ್ದರೆ ಹೊಡೆಯಿರಿ" ಎಂದು ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News