GIM-ಬಿಜೆಪಿ ಸರಕಾರ ಹೇಳುತ್ತಿರುವ ಮೂರು ಸುಳ್ಳುಗಳು

Update: 2022-11-08 19:32 GMT

2010ರಲ್ಲಿ 3.94 ಲಕ್ಷ ಕೋಟಿ ರೂ., 2012ರಲ್ಲಿ 6.77 ಲಕ್ಷ ಕೋಟಿ ರೂ. ಮತ್ತು 2016ರ 'ಜಿಮ್'ನಲ್ಲಿ 3.05 ಲಕ್ಷ ಕೋಟಿ ರೂ. ಭರವಸೆಗಳನ್ನು 'ಜಿಮ್' ದಿನದಲ್ಲೇ ಹೂಡಿಕೆದಾರರು ಘೋಷಿಸಿದ್ದರು. ಆ ಘೋಷಣೆಗಳು ಹುಸಿಯಾಗಿದ್ದವು ಮತ್ತು ಅವುಗಳಲ್ಲಿ ಶೇ. 10ರಷ್ಟು ವಾಸ್ತವಕ್ಕೆ ಬರಲಿಲ್ಲ ಎಂಬುದು ನಿಜ. ಹಾಗೆಯೇ ಬೊಮ್ಮಾಯಿಯವರ 'ಜಿಮ್'ನಲ್ಲಿ ನಡೆದಿರುವುದೂ ಹುಸಿ ಘೋಷಣೆಗಳೇ. ಹೀಗಾಗಿ ಹುಸಿ ಘೋಷಣೆಗಳ ಲೆಕ್ಕ ಹಿಡಿದರೂ ಬೊಮ್ಮಾಯಿಯವರ 'ಜಿಮ್' ಹಿಂದಿನ 'ಜಿಮ್'ಗಳಿಗಿಂತ ಕಳಪೆ ಎನ್ನುವುದೇ ಸತ್ಯ.



ಇತ್ತೀಚೆಗೆ ತಾನೇ ಮುಕ್ತಾಯವಾದ GIM- Global Investors Meet-ಜಾಗತಿಕ ಹೂಡಿಕೆದಾರರ ಸಮ್ಮೇಳನದ ಬಗ್ಗೆ ಬೊಮ್ಮಾಯಿಯವರ ಬಿಜೆಪಿ ಸರಕಾರ ಅಕ್ಷರಶಃ ಬಂಡವಾಳವಿಲ್ಲದ ಬಡಾಯಿ ಮಾಡುತ್ತಿದೆ. ಈ ಐದನೇ ಹೂಡಿಕೆದಾರರ ಸಮ್ಮೇಳನದಲ್ಲಿ ದೇಶಿ ಮತ್ತು ವಿದೇಶಿ ಹೂಡಿಕೆದಾರರು ಕರ್ನಾಟಕದಲ್ಲಿ 10 ಲಕ್ಷ ಕೋಟಿ ರೂ. ಹೂಡಿಕೆಯ ಭರವಸೆಯನ್ನು ನೀಡಿದ್ದಾರೆ ಎಂದು ಘೋಷಿಸಿಕೊಂಡಿದೆ. ಇದು ಈವರೆಗಿನ ಜಿಮ್ ಸಮ್ಮೇಳನಗಳಲ್ಲೇ ಅತಿ ಹೆಚ್ಚು ಹಾಗೂ ಮತ್ತಿದು ಬೊಮ್ಮಾಯಿಯವರ ದೂರದರ್ಶಿತ್ವಕ್ಕೆ ಸಂಕೇತ ಎಂದೆಲ್ಲಾ ಭಟ್ಟಂಗಿಗಳು ಆಧಾರವಿಲ್ಲದೆ ಹೊಗಳುತ್ತಿದ್ದಾರೆ.

ಇದರ ಜೊತೆಗೆ ಈವರೆಗೆ 'ಜಿಮ್' ಸಮ್ಮೇಳನಗಳಲ್ಲಿ ನೀಡಿದ ಭರವಸೆಗಳಲ್ಲಿ ಶೇ. 40 ಕೂಡ ಕನ್ವರ್ತ್- ವಾಸ್ತವದಲ್ಲಿ ಹರಿದುಬರುತ್ತಿರಲಿಲ್ಲ. ಆದರೆ ಈ ಬಾರಿ ಕೊಟ್ಟ ಭರವಸೆಗಳಲ್ಲಿ ಶೇ. 80ರಷ್ಟು ವಾಸ್ತವವಾಗುತ್ತದೆ ಎಂಬ ಇನ್ನೊಂದು ಸುಳ್ಳನ್ನು ಸ್ವಯಂ ಬೊಮ್ಮಾಯಿಯವರೇ ಹೇಳುತ್ತಿದ್ದಾರೆ.

ಅಲ್ಲದೆ ಈ 'ಜಿಮ್' ಸಮ್ಮೇಳನದಿಂದಾಗಿ ಮೊದಲು ಕೇವಲ 5 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬಿಜೆಪಿ ಸರಕಾರ ಕೊಚ್ಚಿಕೊಳ್ಳುತ್ತಿದೆ.

ದುರದೃಷ್ಟವಶಾತ್ ಈ ಸರಕಾರದ ಬೊಗಳೆಗಳನ್ನು ಮಾಧ್ಯಮಗಳು ಕಿಂಚಿತ್ತೂ ಪರಿಶೀಲಿಸದೆ, ವಿಶ್ಲೇಷಿಸದೆ ಬಹುಪಾಲು ಮಾಧ್ಯಮಗಳು ಸತ್ಯವೆಂಬಂತೆ ಪ್ರಕಟಿಸುತ್ತಿವೆ. ಆದರೆ ಸರಕಾರವೇ ನೀಡುತ್ತಿರುವ ಹೇಳಿಕೆಗಳು, ಅಂಕಿಅಂಶಗಳು, ಭಾರತದ ಮತ್ತು ಜಗತ್ತಿನಲ್ಲಿರುವ ಆರ್ಥಿಕ ಪರಿಸ್ಥಿತಿ ಮತ್ತು ಹೂಡಿಕೆಯ ವಾತಾವರಣವನ್ನು ಗಮನಿಸಿದರೆ ಅವೆಲ್ಲಾ ಎಷ್ಟು ಸುಳ್ಳು ಎಂಬುದು ಗೊತ್ತಾಗುತ್ತದೆ.

ಸುಳ್ಳು-1

ಹೇಳಿಕೆ - 'ಜಿಮ್'ನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ 10 ಲಕ್ಷ ಕೋಟಿ ರೂ.
ವಾಸ್ತವ- 'ಜಿಮ್'ನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ ಕೇವಲ 1.57 ಲಕ್ಷ ಕೋಟಿ ರೂ. 

ಮಂತ್ರಿ ಮುರುಗೇಶ್ ನಿರಾಣಿಯವರೇ ನೀಡಿರುವ ಹೇಳಿಕೆಯ ಪ್ರಕಾರ 10 ಲಕ್ಷ ಕೋಟಿ ರೂ. ಭರವಸೆ ಬಂದಿರುವುದು ಮೂರು ದಿನ ನಡೆದ 'ಜಿಮ್' -ಜಾಗತಿಕ ಹೂಡಿಕೆದಾರರ ಸಮ್ಮೇಳನದಿಂದ ಅಲ್ಲ. ಬದಲಿಗೆ 'ಜಿಮ್'ಗೆ ಮುಂಚೆ ಈ ವರ್ಷದ ಜನವರಿಯಿಂದ 'ಜಿಮ್'ವರೆಗೆ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡುವುದಾಗಿ ನೀಡಿರುವ ಭರವಸೆ 8,24,784 ಕೋಟಿ ರೂ. ಗಳು. 'ಜಿಮ್' ಸಮ್ಮೇಳನದಲ್ಲಿ ನೀಡಲಾದ ಭರವಸೆ ಕೇವಲ 1,57,000 ಕೋಟಿ ರೂ. (https://www.businesstoday.in/latest/economy/story/karnataka-minister-announces-investments-worth-rs-15-lakh-crore-proposed-at-global-meet-351969&2022&11&05) ಹಾಗೂ 'ಜಿಮ್'ನಲ್ಲಿ ಹೊಸದಾಗಿ ನೀಡಿರುವ ಹೂಡಿಕೆಯ ಭರವಸೆಗಳು ಕೇವಲ ಎರಡೇ ಎರಡು ಮಾತ್ರ

ಹಳೆಯ ಹಾಗೂ ಹೊಸ ಭರವಸೆಗಳನ್ನೆಲ್ಲಾ ಒಟ್ಟು ಸೇರಿಸಿರುವ ಬಿಜೆಪಿ ಸರಕಾರ 'ಜಿಮ್' ನಿಂದ 9.81 ಲಕ್ಷ ಕೋಟಿ ರೂ. ಬಂಡವಾಳದ ಭರವಸೆ ಹರಿದು ಬಂದಿದೆ ಎಂದು ಪ್ರಕಟಿಸಿದೆ. ಇದು ಗಣಿತದ ಗಾರುಡಿಯೇ ವಿನಾ ಹೂಡಿಕೆಯ ಪವಾಡವಲ್ಲ! ಆದರೆ ಈ ಮೊದಲು ಬಿಜೆಪಿ ಸರಕಾರ 'ಜಿಮ್'ನಿಂದಲೇ 5 ಲಕ್ಷ ಕೋಟಿ ರೂ. ಹೆಚ್ಚುವರಿ ಬಂಡವಾಳ ನಿರೀಕ್ಷಿಸಿತ್ತು. ಆದರೆ ಈಗ 'ಜಿಮ್'ನಿಂದ ಬಂದಿರು ವುದು ಕೇವಲ 1.5 ಲಕ್ಷ ಕೋಟಿ ರೂ.!. ಅಂದರೆ ಬೊಮ್ಮಾಯಿ ಸರಕಾರದ ನಿರೀಕ್ಷೆಯ ಶೇ. 25ರಷ್ಟು ಭರವಸೆಗಳು ಕೂಡ 'ಜಿಮ್'ನಿಂದ ಬಂದಿಲ್ಲ. ಹಾಗಿದ್ದಲ್ಲಿ ಇದೊಂದು ಯಶಸ್ವಿ ಸಮ್ಮೇಳನ ಎಂದು ಬಿಜೆಪಿ ಹೇಳುವುದು, ಅದನ್ನೇ ಮಾಧ್ಯಮಗಳು ಬರೆಯುವುದು ಎಷ್ಟು ಹಾಸ್ಯಾಸ್ಪದವಾಗಿದೆಯಲ್ಲವೇ?

ಇದಕ್ಕೆ ಹೋಲಿಸಿದರೆ 2010ರಲ್ಲಿ 3.94 ಲಕ್ಷ ಕೋಟಿ ರೂ., 2012ರಲ್ಲಿ 6.77 ಲಕ್ಷ ಕೋಟಿ ಮತ್ತು 2016ರ 'ಜಿಮ್'ನಲ್ಲಿ 3.05 ಲಕ್ಷ ಕೋಟಿ ರೂ. ಭರವಸೆಗಳನ್ನು 'ಜಿಮ್' ದಿನದಲ್ಲೇ ಹೂಡಿಕೆದಾರರು ಘೋಷಿಸಿದ್ದರು. ಆ ಘೋಷಣೆಗಳು ಹುಸಿಯಾಗಿದ್ದವು ಮತ್ತು ಅವುಗಳಲ್ಲಿ ಶೇ. 10ರಷ್ಟು ವಾಸ್ತವಕ್ಕೆ ಬರಲಿಲ್ಲ ಎಂಬುದು ನಿಜ. ಹಾಗೆಯೇ ಬೊಮ್ಮಾಯಿಯವರ 'ಜಿಮ್'ನಲ್ಲಿ ನಡೆದಿರುವುದೂ ಹುಸಿ ಘೋಷಣೆಗಳೇ. ಹೀಗಾಗಿ ಹುಸಿ ಘೋಷಣೆಗಳ ಲೆಕ್ಕ ಹಿಡಿದರೂ ಬೊಮ್ಮಾಯಿಯವರ 'ಜಿಮ್' ಹಿಂದಿನ 'ಜಿಮ್'ಗಳಿಗಿಂತ ಕಳಪೆ ಎನ್ನುವುದೇ ಸತ್ಯ.

ಸುಳ್ಳು-2

ಹೇಳಿಕೆ- 'ಜಿಮ್'ನಲ್ಲಿ ಹೂಡಿಕೆದಾರರು ನೀಡುವ ಭರವಸೆಗಳಲ್ಲಿ ಈ ಬಾರಿ ಶೇ. 80conversion ಆಗಿ ವಾಸ್ತವಕ್ಕೆ ಬರಲಿದೆ.
ವಾಸ್ತವ : ಈ ಬಾರಿಯ 'ಜಿಮ್'ನಲ್ಲಿ ನೀಡಲಾದ ಭರವಸೆಗಳಲ್ಲಿ ಶೇ. 5ರಷ್ಟು conversion ಆದರೆ ಹೆಚ್ಚು..

ಉದಾಹರಣೆಗೆ ಸರಕಾರವೇ ನೀಡಿರುವ ಅಂಕಿಅಂಶಗಳ ಪ್ರಕಾರ : - 2010ರಲ್ಲಿ ಯಡಿಯೂರಪ್ಪನವರ ಕಾಲದಲ್ಲಿ ರೂ. 3.94 ಲಕ್ಷ ಕೋಟಿಗೆ MoU  
ಆಯಿತೆಂದು ಬಿಜೆಪಿ ಕೊಚ್ಚಿಕೊಂಡರೂ ವಾಸ್ತವಕ್ಕೆ ಬಂದದ್ದು ಶೇ. 14ಕ್ಕಿಂತ ಕಡಿಮೆ. ಅವೂ 'ಜಿಮ್'ನಿಂದ ಬಂದವಲ್ಲ. -2012ರಲ್ಲಿ ನಡೆದ 'ಜಿಮ್'ನಲ್ಲಿ 6.77 ಲಕ್ಷ ಕೋಟಿ MoU ಗಳಾದರೂ ವಾಸ್ತವಕ್ಕೆ ಬಂದದ್ದು ಶೇ. 8ಕ್ಕಿಂತ ಕಡಿಮೆ. - 2016 ರಲ್ಲಿ 3.05 ಲಕ್ಷ ಕೋಟಿಗೆ MoU ಆದರೂ ವಾಸ್ತವಕ್ಕೆ ಬಂದದ್ದು ಶೇ. 15ಕ್ಕಿಂತ ಕಡಿಮೆ. 'ಜಿಮ್'ಗಳಲ್ಲಿ ಹೂಡಿಕೆದಾರರು ಮಾಡುವ ಘೋಷಣೆಗಳು ನಿರ್ಧಾರಗಳಲ್ಲ. ಒಂದು ಆಶಯಾತ್ಮಕ ಹೇಳಿಕೆಯಷ್ಟೆ. ಅಲ್ಲಿಂದ ಅದು ವಾಸ್ತವವಾಗಲು ಅದು ನಾಲ್ಕು ಹಂತಗಳನ್ನು ಹಾದು ಹೋಗಬೇಕಾಗುತ್ತದೆ. 'ಜಿಮ್'ಗಳಲ್ಲಿ ಹೂಡಿಕೆದಾರರು ಘೋಷಣೆ ಮಾಡಿದ ಮೇಲೆ ಅದರ ಬಗ್ಗೆ ಸರಕಾರ ಅವರ ಜೊತೆ MoU ಮಾಡಿಕೊಳ್ಳುವುದು ಮೊದಲನೇ ಹಂತ.ಅವುಗಳಿಗೆ ಸರಕಾರದ ಉನ್ನತ ಸಮಿತಿಯು ಕಾನೂನಾತ್ಮಕ ಅನುಮೋದನೆ ಪಡೆಯುವುದು (Approval) ಎರಡನೇ ಹಂತ. ಇವೆರಡು ಹಂತ ದಾಟಲು 5-6 ತಿಂಗಳುಗಳು ಬೇಕು. ಆದರೂ ಇವೆರಡು ಸರಕಾರಕ್ಕೆ - ಸುಳ್ಳು ಹೇಳುವವರಿಗೆ ಸುಲಭದ ಹಂತಗಳೇ .. ಆದರೆ ಮೂರನೇ ಹಂತ ಜಮೀನು, ಸೈಟು, ರಿಯಾಯಿತಿ ಒಪ್ಪಂದ. ಅದಾದ ನಂತರ ನಾಲ್ಕನೇ ಹಂತ- ವಿವಿಧ ಹಂತದ ಹೂಡಿಕೆ, ನಿರ್ಮಾಣ ಮತ್ತು ಉತ್ಪಾದನೆ. ಈ ಕೊನೆ ಎರಡು ಹಂತಗಳ ತನಕ ಶೇ. 80ರಷ್ಟು MoUಗಳು ಬರುವುದೇ ಇಲ್ಲ.

ಏಕೆಂದರೆ 'ಜಿಮ್'ನಲ್ಲಿ ಹೂಡಿಕೆ ಭರವಸೆ ನೀಡುವ ಬಂಡವಾಳಿಗರು ಹೂಡಿಕೆ ಮಾಡುವುದು ಅವರ ಲಾಭ ಖಾತರಿಯಾಗಿದ್ದರೆ ಮತ್ತು ಲಾಭದ ದರ ಹೆಚ್ಚಿದ್ದರೆ ಮಾತ್ರ. ಸಮಾಜ ಸೇವೆಗೂ ಅಲ್ಲ. ಉದ್ಯೋಗ ಸೃಷ್ಟಿಸಲೂ ಅಲ್ಲ. ಹೀಗಾಗಿ ಜಗತ್ತಿನ ಇತರೆಡೆಗಳಲ್ಲಿ ಇದಕ್ಕಿಂತ ಹೆಚ್ಚಿನ ಲಾಭದ ಅವಕಾಶಗಳಿವೆ ಎಂದಾದರೆ ಮತ್ತು ಕಾನೂನಿನ ತೊಡಕುಗಳು ಇಲ್ಲವೆಂದಾದರೆ ಹೂಡಿಕೆ ಮಾಡುವ ಭರವಸೆ ನೀಡಿದ್ದರೂ ಇಲ್ಲಿಂದ ಬೇರೆಡೆಗೆ ಹಾರುತ್ತವೆ. ಬೊಮ್ಮಾಯಿಯವರೇ ಹೇಳಿದರೆ ಇವು Non-Binding understanding.

ಅದಲ್ಲದೆ, ಇದೀಗ ಕೋವಿಡ್ ನಂತರದಲ್ಲಿ ಜಗತ್ತಿನಾದ್ಯಂತ ಆರ್ಥಿಕ ಹಿಂದ್ಸರಿತದ (Recession) ವಾತಾವರಣವಿದೆ. ದೇಶೀಯ ಮಾರುಕಟ್ಟೆಯಲ್ಲೂ, ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆಯ ಕುಸಿತವಿದೆ. ಏಕೆಂದರೆ ಜನರಲ್ಲಿ ಕೊಳ್ಳುವ ಶಕ್ತಿಯಿಲ್ಲ. 'ಜಿಮ್' ನೀಡಿರುವ ಮುನ್ಸೂಚನೆಯ ಪ್ರಕಾರ ಇನ್ನು ಎರಡು ಮೂರು ವರ್ಷಗಳು ಭಾರತವನ್ನೂ ಒಳಗೊಂಡಂತೆ ಎಲ್ಲಾ ದೇಶಗಳಲ್ಲೂ ಬೇಡಿಕೆಯ ಕುಸಿತವಿರುತ್ತದೆ ಮತ್ತು ಅದರಿಂದಾಗಿ ಆರ್ಥಿಕ ಅನಾರೋಗ್ಯವಿರುತ್ತದೆ.

ಅರ್ಥಾತ್ ಹೂಡಿಕೆಯ ಮೇಲೆ ಲಾಭವು ಖಾತರಿಯಿರುವುದಿಲ್ಲ. ಹೀಗಾಗಿ ಕೇವಲ ಲಾಭದ ದುರಾಸೆ ಮಾತ್ರ ಇರುವ ಈ ಹೂಡಿಕೆದಾರರು ಈಗ ಉತ್ಸಾಹದಿಂದ ಎಲ್ಲಿಯೂ ಹೂಡಿಕೆ ಮಾಡುತ್ತಿಲ್ಲ.
ಭಾರತದಲ್ಲಂತೂ ಸೆಪ್ಟಂಬರ್ ತಿಂಗಳಲ್ಲಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸರಕಾರವು ಈ ದೇಶದ ಖಾಸಗಿ ಉದ್ಯಮಿಗಳು ಹೂಡಿಕೆ ಮಾಡುವುದನ್ನು ಉತ್ತೇಜಿಸಲು ತೆರಿಗೆ ಕಡಿಮೆ ಮಾಡಿದೆವು, ಉತ್ಪಾದನೆ ಆಧಾರಿತ ಸೌಲಭ್ಯಗಳನ್ನು ನೀಡಿದೆವು (PLI- Production Linked Incentives) ..ಹೀಗೆ ಎಷ್ಟೆಲ್ಲಾ ಉತ್ತೇಜನ ನೀಡಿದರೂ ನಮ್ಮ ದೇಶದ ಬಂಡವಾಳಿಗರು ಹೂಡಿಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದ್ದರು.

(https://www.deccanherald.com/business/fm-sitharaman-compares-india-inc-to-hanuman-asks-why-it-is-hesitant-to-invest-in-manufacturing-1144674.html)

 ನಿರುತ್ಸಾಹದ ಛಾಯೆ ಈ ಬಾರಿಯ 'ಜಿಮ್' ಮೇಲೂ ಬಿದ್ದಿರುವುದು ಸ್ಪಷ್ಟ. ಏಕೆಂದರೆ ಕನಿಷ್ಠ ಪಕ್ಷ ಕಳೆದ 'ಜಿಮ್'ಗಳಲ್ಲಿ 3 ಲಕ್ಷ ಕೋಟಿ, 7 ಲಕ್ಷ ಕೋಟಿ ಮತ್ತು 4 ಲಕ್ಷ ಕೋಟಿ ರೂ.ಗಳಷ್ಟು ಭರವಸೆಯಾದರೂ ಬಂದಿದ್ದವು.ಆದರೆ ಈ ಬಾರಿ ಭರವಸೆ ಬಂದಿರುವುದೇ ಅವುಗಳ ಕಾಲು ಭಾಗ - ಕೇವಲ 1.5 ಲಕ್ಷ ಕೋಟಿ ರೂ. ಮಾತ್ರ. ಇದು ಇಂದು ಜಗತ್ತಿನಲ್ಲಿರುವ Investors Confidence- ಹೂಡಿಕೆದಾರರ ವಿಶ್ವಾಸಕ್ಕೆ ಒಂದು ಸಂಕೇತವಾಗಿದ್ದಲ್ಲಿ...
...ಈ ಬಾರಿಯ 'ಜಿಮ್'ನ Investors Confidence ದರ ಕೂಡ ಹಿಂದಿನ 'ಜಿಮ್'ಗಳ ಕಾಲು ಭಾಗ ಅರ್ಥಾತ್ ಶೇ. 5ಕ್ಕಿಂತ ಜಾಸ್ತಿ ಆಗಲಾರದು. ಅಂದರೆ ಹೆಚ್ಚೆಂದರೆ ರೂ. 5-10 ಸಾವಿರ ಕೋಟಿಗಳ ಬಂಡವಾಳ ಹೂಡಿಕೆ! ರೂ.1.5 ಲಕ್ಷ ಕೋಟಿಯೂ ಅಲ್ಲ!!

ಸುಳ್ಳು-3

ಹೇಳಿಕೆ - 'ಜಿಮ್'ನಿಂದಾಗಿ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ.
ವಾಸ್ತವ: 6 ಲಕ್ಷವಿರಲಿ 6 ಸಾವಿರ ಉದ್ಯೋಗವೂ ಸೃಷ್ಟಿಯಾಗದು ..
 
ಸರಕಾರದ ಪ್ರಕಾರ 'ಜಿಮ್'ನಿಂದಾಗಿ 5 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಈಗ ರೂ. 9.82 ಲಕ್ಷ ಕೋಟಿಯಾಗಿದೆ. ಆದ್ದರಿಂದ ಮೊದಲು ಅಂದುಕೊಂಡಂತೆ 'ಜಿಮ್'ನಿಂದ 5 ಲಕ್ಷ ಉದ್ಯೋಗಗಳ ಬದಲಿಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
ಆದರೆ ಈಗಾಗಲೇ ನೋಡಿದಂತೆ 'ಜಿಮ್'ನಲ್ಲಿ ಹೂಡಿಕೆಯ ಭರವಸೆ ಬಂದಿರುವುದು ರೂ. 9.82 ಲಕ್ಷ ಕೋಟಿಯಲ್ಲ. ಕೇವಲ 1.5 ಲಕ್ಷ ಕೋಟಿ ರೂ. ಹಾಗೂ ಆರ್ಥಿಕ ಹಿಂದ್ಸರಿತದಿಂದಾಗಿ ಅದರ conversion ಶೇ. 5-10ನ್ನು ಮೀರುವುದು ಕಷ್ಟ. ಅಂದರೆ ಹೆಚ್ಚೆಂದರೆ ರೂ. 5-10 ಸಾವಿರ ಕೋಟಿ ಹೂಡಿಕೆ. ಹೀಗಾಗಿ ಸರಳ ಗಣಿತದ ಪ್ರಕಾರವೂ ಉದ್ಯೋಗ ಸೃಷ್ಟಿಯಾಗುವುದು ಕೆಲವು ಸಾವಿರಗಳನ್ನು ಮೀರುವುದಿಲ್ಲ.

ಅದರ ಜೊತೆಗೆ, ಸರಕಾರವೇ ಹೇಳುತ್ತಿರುವಂತೆ ಅತಿ ಹೆಚ್ಚಿನ ಹೂಡಿಕೆಯ ಪ್ರಸ್ತಾವಗಳು ಬಂದಿರುವುದು ಗ್ರೀನ್ ಹೈಡ್ರೋಜನ್, ನವೀಕರಿಸಬಹುದಾದ ಇಂಧನಗಳ ಕ್ಷೇತ್ರಗಳಲ್ಲಿ. ಇವೆರಡೂ ಕೂಡ ಉದ್ಯೋಗಗಳನ್ನು ಸೃಷ್ಟಿ ಮಾಡುವ ಕ್ಷೇತ್ರಗಳಲ್ಲ. ಅದರಲ್ಲೂ ಗ್ರೀನ್ ಹೈಡ್ರೋಜನ್ ಕ್ಷೇತ್ರವು ಅತಿ ಹೆಚ್ಚು ಬಂಡವಾಳ ಹೂಡಿಕೆಯನ್ನು ಕೇಳುವ ಮತ್ತು ಅತಿ ಕಡಿಮೆ ಉದ್ಯೋಗಗಳನ್ನು ಅದರಲ್ಲೂ ಅತಿ ಪರಿಣಿತ ಉದ್ಯೋಗಗಳನ್ನು ಸೃಷ್ಟಿಸುವ ಕ್ಷೇತ್ರ. ಅಂದರೆ ಇದರಿಂದ ಹೆಚ್ಚು ಉದ್ಯೋಗಗಳೂ ಸೃಷ್ಟಿಯಾಗುವುದಿಲ್ಲ. ಸ್ಥಳೀಯರಿಗೂ ದಕ್ಕುವುದಿಲ್ಲ.

ಇದರ ಜೊತೆಗೆ ಗ್ರೀನ್ ಹೈಡ್ರೋಜನ್ ಸಂಗ್ರಹಣೆ ಅತ್ಯಂತ ಅಪಾಯಕಾರಿ ಹಾಗೂ ರಿಸ್ಕಿ ಉದ್ಯಮ. ಈ ರಿಸ್ಕಿನ ಕಾರಣಕ್ಕೆ ಯಾವ ದೇಶಗಳಲ್ಲಿ ಕಠಿಣವಾದ ಪರಿಸರ ಕಾನೂನಿರುತ್ತದೋ ಅಲ್ಲಿ ಇಂತಹ ಉದ್ಯಮಗಳು ಕಾರ್ಮಿಕರ, ಸ್ಥಳಿಯ ನಿವಾಸಿಗಳ ಹಾಗೂ ಪರಿಸರದ ಸುರಕ್ಷತೆಗೆ ಹೆಚ್ಚು ವೆಚ್ಚ ಮಾಡಬೇಕಿರುತ್ತದೆ. ಅಕಸ್ಮಾತ್ ಅವಘಡಗಳು ಸಂಭವಿಸಿದರೆ ಅಲ್ಲಿನ ಕಾನೂನುಗಳ ಪ್ರಕಾರ ತಮ್ಮ ಲಾಭದ ಅತಿ ದೊಡ್ಡ ಭಾಗವನ್ನು ಜುಲ್ಮಾನೆಯಾಗಿ ತೆರಬೇಕಿರುತ್ತದೆ. ಹೀಗಾಗಿ ಇಂತಹ ರಿಸ್ಕಿ ಕಾರ್ಖಾನೆಗಳನ್ನು ಹೂಡಲು ಅವು ಭಾರತದಂತಹ ದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಹೀಗೆ ಹೇಗೆ ನೋಡಿದರೂ, ಸರಕಾರವು ಹೇಳುತ್ತಿರುವುದೆಲ್ಲಾ ನಿಜ ಎಂದಿಟ್ಟುಕೊಂಡರೂ ಈ ಬಗೆಯ ಹೂಡಿಕೆಗಳಿಂದ ಈ ದೇಶಕ್ಕಾಗಲೀ, ಜನರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ರಿಸ್ಕೇ ಹೆಚ್ಚು. ಇದರ ಜೊತೆಗೆ ಇನ್ನೊಂದು ಅಪಾಯವೂ ಇದೆ. ಸರಕಾರವು ಈ ಉದ್ದೇಶಕ್ಕೆ 50,000 ಎಕರೆ ರೈತರ ಜಮೀನನ್ನು ಕಸಿಯುವುದಾಗಿ ಹೇಳಿದೆ. ಇವತ್ತು ಒಂದು ಎಕರೆ ಜಮೀನಿನ ಮೇಲೆ ಆರೆಂಟು ಜನರ ಜೀವನೋಪಾಯ ನಡೆಯುತ್ತದೆ ಎಂದು ಲೆಕ್ಕ ಹಿಡಿದರೂ ..ಈ ಹೂಡಿಕೆಗಳು 2 ಲಕ್ಷಕ್ಕೂ ಹೆಚ್ಚು ರೈತಾಪಿಯ ಉದ್ಯೋಗ-ಜೀವನ ಕಸಿದು.... ಕೆಲವು ಸಾವಿರ ಮೇಲ್ವರ್ಗದ ಸುಶಿಕ್ಷಿತ ತಂತ್ರಜ್ಞರಿಗೆ ಉದ್ಯೋಗ ಸೃಷ್ಟಿಸಬಹುದು.. ಮೇಲಾಗಿ, ಈವರೆಗಿನ ಹೂಡಿಕೆದಾರರ ಪ್ರವೃತ್ತಿ ನೋಡಿದರೆ ಅಗತ್ಯಕ್ಕಿಂತ ಹೆಚ್ಚು ಜಮೀನನ್ನು ವಶಪಡಿಸಿಕೊಂಡು ಅದರಲ್ಲಿ ರಿಯಲ್ ಎಸ್ಟೇಟ್ ಅಥವಾ ಇನ್ನಿತರ ದಂಧೆಗಳನ್ನು ನಡೆಸುವ ಇರಾದೆಯು ಸ್ಪಷ್ಟವಾಗಿದೆ. ಯಾವ ಉದ್ದೇಶಕ್ಕೆ ಸರಕಾರದಿಂದ ಜಮೀನು ಪಡೆಯುತ್ತಾರೋ ಅದೇ ಉದ್ದೇಶಕ್ಕೆ ನಿರ್ದಿಷ್ಟ ಅವಧಿಯಲ್ಲೇ ಬಳಕೆಯಾಗುವುದೇ ಇಲ್ಲ. ಸರಕಾರ ನಿರ್ದಿಷ್ಟ ಅವಧಿಯಲ್ಲಿ ಜಮೀನನ್ನು ಬಳಸದಿದ್ದರೆ ವಾಪಸ್ ಪಡೆಯುವುದಾಗಿ ವೀರಾವೇಶದ ಘೋಷಣೆ ಮಾಡಿದ್ದರೂ ಈವರೆಗೆ ಅಂತಹ ಒಂದು ಉದಾಹರಣೆ ನಮ್ಮ ಮುಂದಿಲ್ಲ. ಇದಕ್ಕೆ ಕಣ್ಣ ಮುಂದಿರುವ ನಿದರ್ಶನ ನೈಸ್ ಕಂಪೆನಿಗೆ ಬೆಂಗಳೂರು -ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸರಕಾರ ಕೊಟ್ಟ 21,000 ಎಕರೆ ಭೂಮಿ. ಆಗ ಈ ನೈಸ್ ಕಂಪೆನಿ ಬೆಂಗಳೂರು-ಮೈಸೂರು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ, ಬೇರೆ ಪರ್ಯಾಯ ಮಾರ್ಗಗಳಿಲ್ಲ. ಆದ್ದರಿಂದ ತಾನು ಬೆಂಗಳೂರಿಂದ ಮೈಸೂರಿಗೆ ಒಂದು ಎಕ್ಸ್ ಪ್ರೆಸ್ ರಸ್ತೆ ಮತ್ತು ಐದು ಟೌನ್‌ಶಿಪ್‌ಗಳನ್ನು ಕಟ್ಟುವುದಾಗಿ ಹೇಳಿದ ನೈಸ್ ಕಂಪೆನಿಗೆ KIADB ಸರಕಾರದ 7,000 ಎಕರೆ ಮತ್ತು ಸಣ್ಣರೈತಾಪಿಗಳ 13,000 ಎಕರೆ ಜಮೀನನ್ನು ವಶಪಡಿಸಿಕೊಳ್ಳುವುದಾಗಿ 1999ರಲ್ಲಿ ನೋಟಿಸು ಕೊಟ್ಟಿತು. ಅದಾಗಿ 23 ವರ್ಷಗಳಾಗಿವೆ. ಸರಕಾರವೇ ಬೆಂಗಳೂರಿನಿಂದ ಮೈಸೂರಿಗೆ 10 ಲೇನಿನ ಎಕ್ಸ್‌ಪ್ರೆಸ್ ರಸ್ತೆ ನಿರ್ಮಿಸಿದೆ. ಬೆಂಗಳೂರಿನಿಂದ ಮೈಸೂರು ವರೆಗಿನ ರೈಲ್ವೆ ಲೈನ್ ಡಬಲ್ ಆಗಿ ವಿದ್ಯುದ್ದೀಕರಣಗೊಂಡಿದೆ. ಮತ್ತು ಕನಕಪುರದ ಮೂಲಕ ಮೈಸೂರು ಸೇರುವ ಪರ್ಯಾಯ ರಸ್ತೆಯು ರಾಷ್ಟ್ರೀಯ ಹೆದ್ದಾರಿ ದರ್ಜೆಗೆ ಏರಿದೆ. ಹೀಗಾಗಿ ಈಗ ನೈಸ್ ಯೋಜನೆಯ ಅಗತ್ಯವೇ ಇಲ್ಲವಾಗಿದೆ. ಆದ್ದರಿಂದಲೇ ಕಳೆದ 23 ವರ್ಷದಿಂದ ಇಲ್ಲಿ ರಸ್ತೆ ನಿರ್ಮಾಣವನ್ನೇ ಪ್ರಾರಂಭಿಸಿಲ್ಲ. ಆದರೂ ಈವರೆಗೆ ರೈತರ ಜಮೀನು ವಾಪಸಾಗಿಲ್ಲ. ಆಗ ಕೇವಲ ಎಕರೆಗೆ ರೂ. 6 ಲಕ್ಷ ಕೊಟ್ಟು ಖರೀದಿಸಲಾಗಿತ್ತು. ಈಗ ಅದರ ಬೆಲೆ ರೂ. 6 ಕೋಟಿಯಾಗಿದೆ ಅಥವಾ ರೈತರು ಕೃಷಿ ಮಾಡಿಕೊಳ್ಳಲು ಕೂಡಾ ಜಮೀನನ್ನು ಅಭಿವೃದ್ಧಿ ಪಡಿಸುವ ಹಾಗಿಲ್ಲ. ಒಟ್ಟಿನಲ್ಲಿ ನೈಸ್ ಮತ್ತು ಸರಕಾರದ ದಂಧೆಗೆ ಈ ಯೋಜನೆಗೆ ಜಮೀನು ವಶವಾದ ರೈತರ ಬದುಕು ಬಲಿಯಾಗಿದೆ. ಹೀಗಾಗಿ ಸರಕಾರದ ಯಾವ ಭರವಸೆಗಳೂ ನಿಜವಲ್ಲ. ಒಟ್ಟಾರೆಯಾಗಿ 'ಜಿಮ್' ಎಂಬುದು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಉದ್ಯೋಗ ಸೃಷ್ಟಿಸುವುದೂ ಇಲ್ಲ.

ಬದಲಿಗೆ ಚುನಾವಣೆಗೆ ಮುನ್ನ ಬಿಜೆಪಿಯು ಜನರಲ್ಲಿ ಪ್ರಗತಿ-ಅಭಿವೃದ್ಧಿಯ ಭ್ರಾಂತಿ ಮೂಡಿಸುತ್ತದೆ. ಆದ್ದರಿಂದ ಈ 'ಜಿಮ್' ಎಂಬುದು ತನ್ನ ಭ್ರಷ್ಟಾಚಾರ ಹಾಗೂ ತಾನು ಮೂಡಿಸಿರುವ ಸಾಮಾಜಿಕ ಅಸ್ಥಿರತೆ, ಆರ್ಥಿಕ ದುಸ್ಥಿತಿ, ನಿರುದ್ಯೋಗ ಇತ್ಯಾದಿಗಳನ್ನು ಮುಚ್ಚಿಕೊಳ್ಳಲು...ಬಿಜೆಪಿ ಸರಕಾರವು ನಡೆಸಿದ ಒಂದು ಚುನಾವಣಾ ಗಿಮಿಕ್ ಹೊರತು ಮತ್ತೇನು ಅಲ್ಲ ಎಂಬುದು ಸುಸ್ಪಷ್ಟ .. ಅಲ್ಲವೇ?

Similar News