ಕೇಂದ್ರದ ತೆರಿಗೆ ದರೋಡೆಯನ್ನು ಸಮರ್ಥಿಸಿಕೊಂಡು ಸದನದಲ್ಲಿ ಎಚ್‌ಡಿಕೆ ಹೇಳಿದ ಮೂರು ಮಹಾ ಸುಳ್ಳುಗಳು

ಜೆಡಿಎಸ್ ಮಾತ್ರ ಕರ್ನಾಟಕದ ಹಿತಾಸಕ್ತಿಯನ್ನು ಎತ್ತಿಹಿಡಿಯುತ್ತದೆ ಎಂದೆಲ್ಲಾ ಪ್ರತಿಪಾದಿಸುತ್ತಿದ್ದ ಜೆಡಿಎಸ್‌ನ ಅಧ್ಯಕ್ಷ ಕುಮಾರಸ್ವಾಮಿಯವರು, ಬಿಜೆಪಿಯೊಡನೆ ಕೂಡಾವಳಿ ಮಾಡಿಕೊಂಡ ಮೇಲೆ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಕರ್ನಾಟಕದ ಆರ್ಥಿಕತೆ, ಸಾಂಸ್ಕೃತಿಕ ಅನನ್ಯತೆ, ಸಾಮಾಜಿಕ ಸೌಹಾರ್ದ ಮತ್ತು ಅಸ್ಮಿತೆಗಳ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್‌ಗಳು ನಡೆಸುತ್ತಿರುವ ಆಕ್ರಮಣಗಳನ್ನು ಎಗ್ಗಿಲ್ಲದೆ ಸಮರ್ಥಿಸುತ್ತಿದ್ದಾರೆ. ಮೊನ್ನೆ ಮೊನ್ನೆ ಕೆರಗೋಡಿನಲ್ಲಿ ಮಂಡ್ಯದ ಸೌಹಾರ್ದ ಸಾಮಾಜಿಕ ಹಂದರದ ಮೇಲೆ ಆರೆಸ್ಸೆಸ್ ನಡೆಸಿದ ಆಕ್ರಮಣಕ್ಕೆ ಕೇಸರಿ ಶಾಲನ್ನೇ ಹಾಕಿಕೊಂಡು ನಾಯಕತ್ವ ವಹಿಸಿದ್ದ ಕುಮಾರಸ್ವಾಮಿಯವರು ಇದೀಗ ಸದನದಲ್ಲಿ ಕೂಡಾ ಮೋದಿ ಸರಕಾರದ ಅನ್ಯಾಯಗಳ ಸಮರ್ಥನೆಯನ್ನು ವೀರಾವೇಶದಿಂದ ಮುಂದುವರಿಸಿದ್ದಾರೆ.

Update: 2024-02-21 04:34 GMT
Editor : Thouheed | Byline : ಶಿವಸುಂದರ್

ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದರೆ ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ. ಜೆಡಿಎಸ್ ಮಾತ್ರ ಕರ್ನಾಟಕದ ಹಿತಾಸಕ್ತಿಯನ್ನು ಎತ್ತಿಹಿಡಿಯುತ್ತದೆ ಎಂದೆಲ್ಲಾ ಪ್ರತಿಪಾದಿಸುತ್ತಿದ್ದ ಜೆಡಿಎಸ್‌ನ ಅಧ್ಯಕ್ಷ ಕುಮಾರಸ್ವಾಮಿಯವರು, ಬಿಜೆಪಿಯೊಡನೆ ಕೂಡಾವಳಿ ಮಾಡಿಕೊಂಡ ಮೇಲೆ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಕರ್ನಾಟಕದ ಆರ್ಥಿಕತೆ, ಸಾಂಸ್ಕೃತಿಕ ಅನನ್ಯತೆ, ಸಾಮಾಜಿಕ ಸೌಹಾರ್ದ ಮತ್ತು ಅಸ್ಮಿತೆಗಳ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್‌ಗಳು ನಡೆಸುತ್ತಿರುವ ಆಕ್ರಮಣಗಳನ್ನು ಎಗ್ಗಿಲ್ಲದೆ ಸಮರ್ಥಿಸುತ್ತಿದ್ದಾರೆ.

ಮೊನ್ನೆ ಮೊನ್ನೆ ಕೆರಗೋಡಿನಲ್ಲಿ ಮಂಡ್ಯದ ಸೌಹಾರ್ದ ಸಾಮಾಜಿಕ ಹಂದರದ ಮೇಲೆ ಆರೆಸ್ಸೆಸ್ ನಡೆಸಿದ ಆಕ್ರಮಣಕ್ಕೆ ಕೇಸರಿ ಶಾಲನ್ನೇ ಹಾಕಿಕೊಂಡು ನಾಯಕತ್ವ ವಹಿಸಿದ್ದ ಕುಮಾರಸ್ವಾಮಿಯವರು ಇದೀಗ ಸದನದಲ್ಲಿ ಕೂಡಾ ಮೋದಿ ಸರಕಾರದ ಅನ್ಯಾಯಗಳ ಸಮರ್ಥನೆಯನ್ನು ವೀರಾವೇಶ ದಿಂದ ಮುಂದುವರಿಸಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಹಾಗೂ ಕರ್ನಾಟಕದ ಅಸ್ಮಿತೆಗೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯಕ್ಕೆ ಭಾರತದ ಸಂವಿಧಾನದಷ್ಟೇ ಇತಿಹಾಸವಿದೆ. ಆ ಅನ್ಯಾಯದಲ್ಲಿ ಕಾಂಗ್ರೆಸ್ ಪಕ್ಷದ್ದೂ ಪಾಲಿದೆ.

ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದಾಗ ಇಂದಿನ ಬಿಜೆಪಿಯಷ್ಟು ತೀವ್ರವಾಗಿ ಹಾಗೂ ಸಮಗ್ರವಾಗಿ ಹಾಗೂ ಆಕ್ರಮಣಕಾರಿಯಾಗಿ ದಾಳಿ ನಡೆಸಿರಲಿಲ್ಲ ವಾದರೂ, ಅದಕ್ಕೆ ಬೇಕಾದ ಭೂಮಿಕೆ ತಯಾರಾದದ್ದು ಮಾತ್ರ ಕಾಂಗ್ರೆಸ್ ಕಾಲದಲ್ಲೇ. ಹೀಗಾಗಿ ‘ನನ್ನ ತೆರಿಗೆ, ನನ್ನ ಹಕ್ಕು’ ಅಭಿಯಾನ ನ್ಯಾಯೋಚಿತವೇ ಆಗಿದ್ದರೂ ಕಾಂಗ್ರೆಸ್ ಪಕ್ಷ ತನ್ನ ಹಿಂದಿನ ಗ್ರಹಿಕೆ ಮತ್ತು ಧೋರಣೆಯನ್ನು ಬದಲಿಸಿಕೊಳ್ಳದಿದ್ದರೆ ಈ ಹೋರಾಟ ನೈಜ ಪರಿಹಾರವನ್ನು ಕೊಡುವುದಿಲ್ಲ. ಅದಕ್ಕಾಗಿ ಕರ್ನಾಟಕದ ಜನತೆ ಕಾಂಗ್ರೆಸನ್ನೂ ಆಗ್ರಹಿಸಲೇ ಬೇಕು.

ಆದರೆ ಈಗ ಅಧಿಕಾರದಲ್ಲಿರುವುದು ಮೋದಿ ನೇತೃತ್ವದ ಸರ್ವಾಧಿಕಾರಿ, ಏಕಪಕ್ಷ ಪ್ರತಿಪಾದಕ ಫ್ಯಾಶಿಸ್ಟ್ ಬಿಜೆಪಿ ಸರಕಾರ. ಅದರಲ್ಲೂ ಕಳೆದ ಹತ್ತು ವರ್ಷಗಳಲ್ಲಂತೂ ಮೋದಿ ಸರಕಾರ ಕರ್ನಾಟಕವನ್ನೂ ಒಳಗೊಂಡಂತೆ ಎಲ್ಲಾ ರಾಜ್ಯಗಳನ್ನು ಹಿಂದಿನ ಯಾವ ಸರಕಾರಗಳು ಮಾಡದಷ್ಟು ಸುಲಿಗೆ ಮಾಡುತ್ತಿದೆ. ಅದು ಕೇಂದ್ರದಿಂದ ರಾಜ್ಯಗಳಿಗೆ ಸಲ್ಲಬೇಕಿರುವ ತೆರಿಗೆ ಪಾಲಿನ ವಿಷಯದಲ್ಲಿ ಮಾಡುತ್ತಿರುವ ಹಗಲು ದರೋಡೆಯಲ್ಲಿ ಎದ್ದುಕಾಣುತ್ತಿದೆ. ಆ ಕಾರಣಕ್ಕಾಗಿಯೇ ದಕ್ಷಿಣದ ಎಲ್ಲಾ ರಾಜ್ಯಗಳೂ ಮೋದಿ ಸರಕಾರದ ತೆರಿಗೆ ದರೋಡೆಯ ವಿರುದ್ಧ ಸಮರ ಸಾರಿವೆ.

ಇಂತಹ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಪಕ್ಷ ಸಹಜವಾಗಿಯೇ ತನ್ನ ಮೋದಿ ನಿಷ್ಠ ಹಾಗೂ ಕರ್ನಾಟಕ ದ್ರೋಹದ ನೀತಿಯನ್ನು ಪಾಲಿಸುತ್ತಾ ಸಾಕಷ್ಟು ಸುಳ್ಳು, ಅರ್ಧ ಸತ್ಯಗಳನ್ನು ಪ್ರಚಾರ ಮಾಡುತ್ತಿವೆ.

ಆದರೆ ಪ್ರಾದೇಶಿಕ ಪಕ್ಷ, ಕರ್ನಾಟಕದ ಹಿತಾಸಕ್ತಿಯನ್ನು ಕಾಯುವ ಏಕೈಕ ಪಕ್ಷವೆಂದು ಹೇಳಿಕೊಳ್ಳುವ ಜೆಡಿಎಸ್??

ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿಯವರು ಬಿಜೆಪಿಗಿಂತ ಆಕ್ರಮಣಶೀಲವಾಗಿ ಮೋದಿ ಸರಕಾರ ಮಾಡುತ್ತಿರುವ ಕರ್ನಾಟಕದ ದರೋಡೆಯ ಸಮರ್ಥನೆಗೆ ನಿಂತುಬಿಟಿದ್ದಾರೆ. ಅದರಲ್ಲೂ ಮೋದಿ ಸರಕಾರ ಕರ್ನಾಟಕಕ್ಕೆ ಜಿಎಸ್‌ಟಿ ಪಾಲು, ಕೇಂದ್ರ ತೆರಿಗೆಯ ಪಾಲು ಹಾಗೂ ಅನುದಾನಗಳ ಪಾಲಿನಲ್ಲಿ ದ್ರೋಹ ಬಗೆದು ಕಳೆದ ಏಳು ವರ್ಷಗಳಲ್ಲಿ 1,86,000 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂಬ ಕಾಂಗ್ರೆಸ್‌ನ ಆಪಾದನೆಯನ್ನು ಬಿಜೆಪಿಗಳಿಗಿಂತ ತೀವ್ರವಾಗಿ ಅಲ್ಲಗೆಳೆದು ‘‘ಮೋದಿ ಸರಕಾರದಿಂದ ಕರ್ನಾಟಕಕ್ಕೆ ಬಿಡಿಗಾಸಿನ ಅನ್ಯಾಯವೂ ಆಗಿಲ್ಲ. ಬದಲಿಗೆ ಕಾಂಗ್ರೆಸ್ ಕಾಲಕ್ಕಿಂತ ಹೆಚ್ಚು ನ್ಯಾಯವೇ ಆಗಿದೆ’’ ಎಂದು ಸದನದಲ್ಲಿ ಎಗ್ಗಿಲ್ಲದೆ ವಾದ ಮಂಡಿಸಿದ್ದಾರೆ. ಅದನ್ನು ಸಮರ್ಥಿಸಿಕೊಳ್ಳಲು ಮೂರು ಮಹಾ ಸುಳ್ಳುಗಳನ್ನು ಹೇಳಿದ್ದಾರೆ.

(ಆಸಕ್ತರು ಕುಮಾರಸ್ವಾಮಿಯವರು ಸದನದಲ್ಲಿ ಮಂಡಿಸಿದ ಸಂಪೂರ್ಣ ವಾದವನ್ನು ಕೆಳಗಿನ ವೀಡಿಯೊದಲ್ಲಿ ಅದರಲ್ಲೂ ತೆರಿಗೆ ವಂಚನೆಯಾಗಿಲ್ಲ ಎಂಬ ವಾದವನ್ನು 32ನೇ ನಿಮಿಷದಿಂದ ಗಮನಿಸಬಹುದು: https://www.youtube.com/watch?v=q0rf3Xw0s1s&t=2339)

ಎಚ್‌ಡಿಕೆ ಸುಳ್ಳು-1- ಕೇಂದ್ರ ತೆರಿಗೆಯ ಪಾಲಿನಲ್ಲಿ ರಾಜ್ಯಕ್ಕೆ ಶೇ.58 ಪಾಲು ಸಿಗುತ್ತಿದೆ.

ಕುಮಾರ ಸ್ವಾಮಿಯವರು ಸದನದಲ್ಲಿ ಮಂಡಿಸಿದ ವಾದದ ಪ್ರಕಾರ: ಜಿಎಸ್‌ಟಿ ಜಾರಿಯಾದ ಮೇಲೆ 1,000 ರೂ. ಜಿಎಸ್‌ಟಿ ಕರ್ನಾಟಕದಲ್ಲಿ ಸಂಗ್ರಹವಾದರೆ ಅದರಲ್ಲಿ ರಾಜ್ಯದ ಎಸ್‌ಜಿಎಸ್‌ಟಿ ಪಾಲು 500 ರೂ. ಇಲ್ಲಿಯೇ ಉಳಿಯುತ್ತೆ. ಇನ್ನು ಕೇಂದ್ರಕ್ಕೆ ತಲುಪುವ ಸಿಜಿಎಸ್‌ಟಿ 500 ರೂ.ಗಳಲ್ಲಿ ಶೇ. 42ರಷ್ಟನ್ನು ಅಂದರೆ 210 ರೂ.ಗಳನ್ನು ರಾಜ್ಯಗಳಿಗೆ ಹಂಚುತ್ತದೆ. ಅಂದರೆ ಕೇಂದ್ರ ಕೇವಲ 290 ರೂ.ಗಳನ್ನು ಉಳಿಸಿಕೊಂಡು ಮಿಕ್ಕಿದ್ದನ್ನೆಲ್ಲಾ ರಾಜ್ಯಗಳಿಗೆ ಕೊಟ್ಟುಬಿಡುತ್ತದೆ. ಹೀಗಾಗಿ ಕರ್ನಾಟಕಕ್ಕೆ ಶೇ. 58 ರಷ್ಟು ಪಾಲು ವಾಪಸ್ ಬರುತ್ತದೆ.

ಭಾರತದ ತೆರಿಗೆ ವ್ಯವಸ್ಥೆಯ ಬಗ್ಗೆ ಸಾಮಾನ್ಯ ಜ್ಞಾನ ಇದ್ದವರು ಕೂಡ ಕುಮಾರಸ್ವಾಮಿಯವರ ಲೆಕ್ಕ ತಪ್ಪು ಎಂದು ಸುಲಭವಾಗಿ ಹೇಳಬಹುದು.

ಜಿಎಸ್‌ಟಿ ಜಾರಿಗೆ ಬರುವ ಮುನ್ನ ರಾಜ್ಯಗಳು ಮಾರಾಟ ತೆರಿಗೆ, ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ ಇತ್ಯಾದಿಗಳ ಮೂಲಕ ರಾಜ್ಯಗಳ ತೆರಿಗೆಯನ್ನು ಸಂಗ್ರಹಿಸುತ್ತಿದ್ದವು. ಅದರಲ್ಲಿ ಕೇಂದ್ರಕ್ಕೆ ಪಾಲಿರುತ್ತಿರಲಿಲ್ಲ. ಜಿಎಸ್‌ಟಿ ಜಾರಿಗೆ ಬರುವ ಮುನ್ನ ಎಕ್ಸೈಸ್ ತೆರಿಗೆ, ಸೇವಾ ತೆರಿಗೆಗಳು ರಾಜ್ಯಗಳಿಂದ ಕೇಂದ್ರವು ಸಂಗ್ರಹಿಸುತ್ತಿದ್ದ ಪರೋಕ್ಷ ತೆರಿಗೆಗಳಾಗಿದ್ದವು. ಇದಲ್ಲದೆ ಕೇಂದ್ರವು ಮಾತ್ರ ಸಂಗ್ರಹಿಸುವ ಅಧಿಕಾರವುಳ್ಳ ಪ್ರತ್ಯಕ್ಷ ತೆರಿಗೆಗಳಾದ ಆದಾಯ ತೆರಿಗೆ, ಕಾರ್ಪೊರೇಟ್ ಆದಾಯ ತೆರಿಗೆ, ಕಸ್ಟಮ್ಸ್ ತೆರಿಗೆಗಳೂ ಕೇಂದ್ರದ ಬೊಕ್ಕಸಕ್ಕೆ ಸೇರುತ್ತವೆ.

ಇವೆಲ್ಲವೂ ಸೇರಿ ಒಟ್ಟಾರೆ ಕೇಂದ್ರ ತೆರಿಗೆ ಸಂಗ್ರಹ ಎಂದಾಗುತ್ತದೆ. ಅವುಗಳಲ್ಲಿ ರಾಜ್ಯಕೆ ಸಾಂವಿಧಾನಿಕ ಪಾಲಿರುತ್ತದೆ. ಆ ಪಾಲು ಎಷ್ಟೆಂಬುದನ್ನು ಸಾಂವಿಧಾನಿಕ ಸಂಸ್ಥೆಯಾದ ಹಣಕಾಸು ಆಯೋಗವು ತೀರ್ಮಾನಿಸುತ್ತದೆ. ಹೀಗಾಗಿ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲಿರುತ್ತದೆ. ಆ ಲೆಕ್ಕಾಚಾರದಲ್ಲಿ ರಾಜ್ಯಗಳ ತೆರಿಗೆಯು ಸೇರುವುದಿಲ್ಲ.

ಜಿಎಸ್‌ಟಿ ಜಾರಿಯಾದ ಮೇಲೆ ರಾಜ್ಯಗಳು ತಮ್ಮ ರಾಜ್ಯದ ಆರ್ಥಿಕ ವಹಿವಾಟುಗಳ ಮೇಲೆ ಹಾಕುತ್ತಿದ್ದ ವಾಣಿಜ್ಯ ತೆರಿಗೆ, ಮಾರಾಟ ತೆರಿಗೆ, ಮನರಂಜನಾ ತೆರಿಗೆಗಳು ಮತ್ತು ಕೇಂದ್ರವು ರಾಜ್ಯಗಳ ವಹಿವಾಟುಗಳ ಮೇಲೆ ವಿಧಿಸುತ್ತಿದ್ದ ಎಕ್ಸೈಸ್ ತೆರಿಗೆ ಮತ್ತು ಸೇವಾ ತೆರಿಗೆಗಳಲ್ಲೆವೂ ಜಿಎಸ್‌ಟಿಯಲ್ಲಿ ವಿಲೀನಗೊಂಡು ಒಂದೇ ತೆರಿಗೆಯಾಯಿತು. ಅದನ್ನು ವಿಧಿಸುವಾಗ ಅದರ ಅರ್ಧ ಭಾಗ ಸಿಜಿಎಸ್‌ಟಿ (ಸೆಂಟ್ರಲ್ ಜಿಎಸ್‌ಟಿ) ಅಂದರೆ ಕೇಂದ್ರದ ಪಾಲಿನ ತೆರಿಗೆ ಹಾಗೂ ಎಸ್‌ಜಿಎಸ್‌ಟಿ (ಸ್ಟೇಟ್ ಜಿಎಸ್‌ಟಿ) ರಾಜ್ಯದ ಪಾಲಿನ ತೆರಿಗೆ ಎಂದು ವಿಂಗಡನೆಯಾಗುತ್ತವೆ.

ಹೀಗಾಗಿ ಕೇಂದ್ರದ ತೆರಿಗೆ ಪಾಲನ್ನು ಲೆಕ್ಕಾಚಾರ ಮಾಡುವಾಗ ಎಸ್‌ಜಿಎಸ್‌ಟಿಯನ್ನು ಸೇರಿಸುವುದಿಲ್ಲ. ಏಕೆಂದರೆ ಅದು ರಾಜ್ಯದ ತೆರಿಗೆ. ಕೇಂದ್ರದ ತೆರಿಗೆಯ ಪಾಲನ್ನು ಲೆಕ್ಕಾಚಾರ ಮಾಡುವಾಗ ಎಸ್‌ಜಿಎಸ್‌ಟಿಯನ್ನು ಬಿಟ್ಟು ಸಿಜಿಎಸ್‌ಟಿಯನ್ನು ಮಾತ್ರ ಲೆಕ್ಕಿಸಬೇಕು.

ಹೀಗಾಗಿ 1,000 ರೂ. ಜಿಎಸ್‌ಟಿಯಲ್ಲಿ ರಾಜ್ಯದ ತೆರಿಗೆಯಾದ 500 ರೂ. ಅಂದರೆ ಶೇ. 50 ರಾಜ್ಯಕ್ಕೆ ವಾಪಸ್ ಬರುತ್ತೆ ಎನ್ನುವುದು ಮತ್ತು ಎಸ್‌ಜಿಎಸ್‌ಟಿಯನ್ನು ಕೇಂದ್ರದ ತೆರಿಗೆಗಳ ಪಾಲಿನ ಭಾಗವೆಂದು ಲೆಕ್ಕ ಹಾಕುವುದು ಕುಚೋದ್ಯ ಮತ್ತು ತಪ್ಪು.

ಇನ್ನು ಕೇಂದ್ರದ ತೆರಿಗೆ ಪಾಲು ಬರೀ ಸಿಜಿಎಸ್‌ಟಿ ಮಾತ್ರವಲ್ಲ. ಈಗಾಗಲೇ ಹೇಳಿದಂತೆ ರಾಜ್ಯಗಳ ಆರ್ಥಿಕ ವಹಿವಾಟುಗಳ ಮೇಲೆ ಮತ್ತು ಆದಾಯವಂತರ ಮೇಲೆ ಕೇಂದ್ರಕ್ಕೆ ಮಾತ್ರ ವಿಧಿಸುವ ಅಧಿಕಾರವಿರುವ ವೈಯಕ್ತಿಕ ಆದಾಯ ತೆರಿಗೆಗಳು ಮತ್ತು ಕಾರ್ಪೊರೇಟ್ ಆದಾಯ ತೆರಿಗೆಗಳು ಸೇರಿಕೊಳ್ಳುತ್ತವೆ. ಇವೆಲ್ಲವೂ ಸೇರಿ ಕೇಂದ್ರೀಯ ತೆರಿಗೆಗಳಾಗುತ್ತವೆ. ಕೇವಲ ಸಿಜಿಎಸ್‌ಟಿಯಲ್ಲ. ಎಸ್‌ಜಿಎಸ್‌ಟಿಯಂತೂ ಅಲ್ಲವೇ ಅಲ್ಲ.

ಈ ಕೇಂದ್ರೀಯ ತೆರಿಗೆಯನ್ನು ಎರಡು ಭಾಗ ಮಾಡುತ್ತಾರೆ. ಒಂದು ರಾಜ್ಯಗಳ ಜೊತೆಗೆ ಹಂಚಿಕೊಳ್ಳುವ ನಿಧಿ- ಡಿವಿಸಬಲ್ ಪೂಲ್. ಇನ್ನೊಂದು ರಾಜ್ಯಗಳ ಜೊತೆಗೆ ಹಂಚಿಕೊಳ್ಳದ, ಕೇಂದ್ರ ತನ್ನ ವೆಚ್ಚಗಳಿಗೆ ಮಾತ್ರ ಇರಿಸಿಕೊಳ್ಳುವ -ಇನ್‌ಡಿವಿಸಬಲ್ ಪೂಲ್.

ಚರ್ಚೆಯಾಗಬೇಕಿರುವುದು ಡಿವಿಸಬಲ್ ಪೂಲ್‌ನಲ್ಲಿ ರಾಜ್ಯಗಳ ಪಾಲು ಕೇಂದ್ರದ ಒಟ್ಟಾರೆ ತೆರಿಗೆಯಲ್ಲಿ ಎಷ್ಟಿರಬೇಕು ಎನ್ನುವುದು?

ಅನ್ಯಾಯ ಇಲ್ಲಿಂದ ಶುರುವಾಗುತ್ತದೆ. ಏಕೆಂದರೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಹೊಣೆಗಾರಿಕೆ ಶೇ. 70ರಷ್ಟು. ಕೇಂದ್ರದ್ದು ಶೇ. 30ರಷ್ಟು. ಆದರೆ ರಾಜ್ಯಗಳ ಆದಾಯ ಶೇ. 30ರಷ್ಟು. ಕೇಂದ್ರದ್ದು ಶೇ. 70 ರಷ್ಟು. ಇದು ಮೋದಿ ಕಾಲದಿಂದ ಪ್ರಾರಂಭವಾಗಿದ್ದಲ್ಲ. ಅದರ ಮೂಲ ನಮ್ಮ ಸಂವಿಧಾನದಲ್ಲೂ, ಆ ನಂತರ ಅಧಿಕಾರ ಮಾಡಿದ ಕಾಂಗ್ರೆಸನ್ನೂ ಒಳಗೊಂಡಂತೆ ಎಲ್ಲಾ ಪಕ್ಷಗಳಲ್ಲೂ ಇದೆ.

ಯುಪಿಎ ಸರಕಾರದ ಅವಧಿಯಲ್ಲಿ ಕೇಂದ್ರದ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ಶೇ. 35-38ರಷ್ಟನ್ನು ವರ್ಗಾಯಿಸಲಾಗುತ್ತಿತ್ತು. ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಮಾಣವನ್ನು ಶೇ. 50ಕ್ಕೆ ಏರಿಸಬೇಕೆಂದು 14ನೇ ಹಣಕಾಸಿನ ಆಯೋಗವನ್ನು ಆಗ್ರಹಿಸಿದ್ದರು. ಆದರೆ ಮೋದಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗ ತಾನು ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಡುವುದರಿಂದ ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಶೇ. 32ರಿಂದ ಶೇ. 42ಕ್ಕೆ ಏರಿಸುವುದಾಗಿ ಘೋಷಿಸಿದ್ದರು.

ಆದರೆ ಇದರ ಬಗ್ಗೆ ನಡೆದಿರುವ ಅಧಿಕೃತ ಅಧ್ಯಯನಗಳು ಸ್ಪಷ್ಟಪಡಿಸುವಂತೆ ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರ ಯಾವ ವರ್ಷವೂ ಶೇ. 35ಕ್ಕಿಂತ ಜಾಸ್ತಿ ವರ್ಗಾವಣೆ ಮಾಡಲೇ ಇಲ್ಲ. ಅಷ್ಟು ಮಾತ್ರವಲ್ಲ, ರಾಜ್ಯಗಳ ಜೊತೆಗೆ ಹಂಚಿಕೊಳ್ಳಬೇಕಾದ ಡಿವಿಸಬಲ್ ಪೂಲ್‌ನ ಗಾತ್ರವನ್ನೇ ಕಡಿತಗೊಳಿಸುತ್ತಾ ಬಂತು. ಅದಕ್ಕೆ ಅದು ಕೇಂದ್ರದ ತೆರಿಗೆಗಿಂತ ಕೇಂದ್ರವು ರಾಜ್ಯಗಳ ಜೊತೆ ಹಂಚಿಕೊಳ್ಳದ ಸೆಸ್ ಮತ್ತು ಸರ್ಚಾರ್ಜ್‌ಗಳ ಪಾಲನ್ನು ಹೆಚ್ಚಿಸುತ್ತಾ ಹೋಯಿತು.

ಆದರೆ ಈ ಬಗ್ಗೆಯೂ ಕುಮಾರಸ್ವಾಮಿಯವರು ಹಸಿಹಸಿ ಸುಳ್ಳುಗಳನ್ನು ಹೇಳಿದ್ದಾರೆ.

ಎಚ್‌ಡಿಕೆ ಸುಳ್ಳು-2- ಸೆಸ್ ಹೇರಿಕೆ ಶುರುವಾದದ್ದು 2017ರಿಂದ-ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಕೊಡಲು

ಭಾರತದ ತೆರಿಗೆ ಇತಿಹಾಸದ ಬಗ್ಗೆ ಪ್ರಾಥಮಿಕ ಜ್ಞಾನ ಇದ್ದವರಿಗೂ ಇದು ಸುಳ್ಳೆಂಬುದು ಸ್ಪಷ್ಟವಾಗಿ ಗೊತ್ತು. ಕೇಂದ್ರವು ತಾನು ಹಾಕುವ ಪರೋಕ್ಷ ತೆರಿಗೆಗಳ ಮೇಲೆ ನಿರ್ದಿಷ್ಟ ಉದ್ದೇಶಕ್ಕಾಗಿ ಮತ್ತು ನಿರ್ದಿಷ್ಟ ಕಾಲಾವಧಿಗಾಗಿ ಹಾಕುವ ಮೇಲ್ತೆರಿಗೆಯನ್ನು ಸೆಸ್ ಎಂದೂ, ಪ್ರತ್ಯಕ್ಷ ತೆರಿಗೆಯ ಮೇಲೆ ಹಾಕುವ ಮೇಲ್ತೆರಿಗೆಯನ್ನು ಸರ್ಚಾರ್ಜ್ ಎಂದೂ ಕರೆಯುತ್ತಾರೆ. ಇದನ್ನು ವಿಧಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆಯೇ ವಿನಾ ರಾಜ್ಯ ಸರಕಾರಗಳಿಗಿಲ್ಲ.

ಇದು 1965ರಲ್ಲೇ ಶುರುವಾಯಿತು. 2017ರಿಂದಲ್ಲ. ರಸ್ತೆ ಸೆಸ್, ಶಿಕ್ಷಣ ಸೆಸ್, ಪೆಟ್ರೋಲಿಯಂ ಸೆಸ್, ಮೂಲಭೂತ ಸೌಕರ್ಯ ಸರ್ಚಾರ್ಜ್, ಇತ್ಯಾದಿಗಳು ಆಗಿನಿಂದಲೂ ಇದ್ದವು. 2017ರಿಂದ ಜಿಎಸ್‌ಟಿ ಪರಿಹಾರ ನಿಧಿ ಸೆಸ್ ಕೂಡ ಆ ಪಟ್ಟಿಗೆ ಸೇರಿಕೊಂಡಿತು ಅಷ್ಟೆ.

1999ರಲ್ಲಿ ಬಿಜೆಪಿ ನೇತೃತ್ವದ ಮೊದಲ ಸರಕಾರ ಅಧಿಕಾರಕ್ಕೆ ಬರುವವರೆಗೆ ಅದನ್ನು ರಾಜ್ಯಗಳ ಜೊತೆಗೂ ಹಂಚಿಕೊಳ್ಳಲಾಗುತ್ತಿತ್ತು. ಆದರೆ ವಾಜಪೇಯಿ ಸರಕಾರ ಸಂವಿಧಾನಕ್ಕೆ 80ನೇ ತಿದ್ದುಪಡಿಯನ್ನು ತಂದು ಸೆಸ್ ಮತ್ತು ಸರ್ಚಾರ್ಜ್‌ಗಳನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಿಲ್ಲ ಎಂಬ ಶಾಸನವನ್ನು ಮಾಡಿತು. ಅದನ್ನು ಆಗಿನ ವಿರೋಧ ಪಕ್ಷಗಳು ದೊಡ್ಡ ವಿರೋಧ ಮಾಡದೆ ಒಪ್ಪಿಕೊಂಡವೆಂಬುದು ಅಷ್ಟೇ ಮುಖ್ಯ ವಿಷಯ.

ಆದರೆ ಆಗಲೂ ಸೆಸ್-ಸರ್ಚಾರ್ಜ್ ಗಳು ಕೇಂದ್ರ ಸರಕಾರದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಕೇವಲ ಶೇ. 10ರಷ್ಟು ಮಾತ್ರ ಇರುತ್ತಿತ್ತು. ಹೀಗಾಗಿ ಕೇಂದ್ರದ ತೆರಿಗೆ ಪಾಲಿನಲ್ಲಿ ಮತ್ತು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾದ ಡಿವಿಸಬಲ್ ಪೂಲ್‌ನಲ್ಲಿ ಹೆಚ್ಚು ಕೊರತೆ ಉಂಟಾಗುತ್ತಿರಲಿಲ್ಲ.

ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಒಟ್ಟಾರೆ ಕೇಂದ್ರದ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಜೊತೆ ಹಂಚಿಕೊಳ್ಳುವ ಅಗತ್ಯವಿಲ್ಲದ ಇನ್‌ಡಿವಿಸಬಲ್ ಪೂಲ್‌ಗೆ ಸೇರಿಕೊಳ್ಳುವ ಸೆಸ್ ಮತ್ತು ಸರ್ಚಾರ್ಜ್‌ನ ಪಾಲು ಶೇ. 10ರಿಂದ ಶೇ. 28ಕ್ಕೆ ಏರಿದೆ. ಅಂದರೆ ಕೇಂದ್ರದ ತೆರಿಗೆಯ ಪಾಲು ಹಾಗೂ ಆದ್ದರಿಂದ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಜೊತೆ ಹಂಚಿಕೊಳ್ಳುವ ಡಿವಿಸಬಲ್ ಪೂಲ್‌ನ ಪಾಲು ಶೇ. 28ರಷ್ಟು ಕಡಿತವಾಗುತ್ತಾ ಬಂದಿದೆ.

ಉದಾಹರಣೆಗೆ 15ನೇ ಹಣಕಾಸು ಅವಧಿಯಾಗಿರುವ 2021-26ರಲ್ಲಿ ಕೇಂದ್ರದ ತೆರಿಗೆಯ ಪಾಲು ಒಟ್ಟಾರೆಯಾಗಿ 135 ಲಕ್ಷ ಕೋಟಿ ರೂ.ಗಳು ಎಂದು ಅಂದಾಜು ಮಾಡಲಾಗಿದೆ. ಸೆಸ್ ಮತ್ತು ಸರ್ಚಾರ್ಜ್‌ಗಳು ಇಲ್ಲದಿದ್ದರೆ ಇದರಲ್ಲಿ ಶೇ. 42ರಷ್ಟು ಎಂದರೆ 56.7 ಲಕ್ಷ ಕೋಟಿ ರೂ. ರಾಜ್ಯಗಳ ಪಾಲಾಗುತ್ತಿತ್ತು. ಆದರೆ ಇದರಲ್ಲಿ ಶೇ. 28ರಷ್ಟು ಸೆಸ್ ಮತ್ತು ಸರ್ಚಾರ್ಜ್ ಆಗಿರುವುದರಿಂದ ಕೇಂದ್ರದ ತೆರಿಗೆ ಸಂಗ್ರಹ ಕೇವಲ 97 ಲಕ್ಷ ಕೋಟಿ ರೂ. ಎಂದು ಮಾತ್ರ ಲೆಕ್ಕ. ಹೀಗಾಗಿ ರಾಜ್ಯಗಳಿಗೆ ಸಿಗುವುದು ರೂ. 135 ಲಕ್ಷ ಕೋಟಿಯಲ್ಲಿ ಶೇ. 41 ಭಾಗವಲ್ಲ. ಬದಲಿಗೆ ರೂ. 97 ಲಕ್ಷ ಕೋಟಿಯಲ್ಲಿ ಶೇ. 41ರಷ್ಟು ಎಂದರೆ ಕೇವಲ ರೂ. 39.77 ಲಕ್ಷ ಕೋಟಿ ಮಾತ್ರ ದಕ್ಕುತ್ತದೆ.

ಅಂದರೆ ರಾಜ್ಯಗಳಿಗೆ ಸೆಸ್ ಮತ್ತು ಸರ್ಚಾರ್ಜ್‌ಗಳ ಪಾಲನ್ನು ಮೋದಿ ಸರಕಾರ ಕುತಂತ್ರದಿಂದ ಹೆಚ್ಚಿಸಿಕೊಂಡಿರುವ ಕಾರಣಕ್ಕಾಗಿ ಕರ್ನಾಟಕವನ್ನು ಒಳಗೊಂಡಂತೆ ಎಲ್ಲಾ ರಾಜ್ಯಗಳಿಗೆ 18 ಲಕ್ಷ ಕೋಟಿ ವಂಚನೆಯಾಗಿದೆ.

ಒಂದು ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿಯವರ ಕಣ್ಣಿಗೆ ಇದು ಏಕೆ ಕಾಣುತ್ತಿಲ್ಲ?

ಎಚ್‌ಡಿಕೆ ಸುಳ್ಳು-3- ಬಿಜೆಪಿ ನೇಮಿಸಿದ 15ನೇ ಹಣಕಾಸು ಆಯೋಗ ರಾಜ್ಯಕ್ಕೆ ನ್ಯಾಯ ಒದಗಿಸಿದೆ.

ಹಣಕಾಸು ಆಯೋಗಗಳು ಕೇಂದ್ರ ಡಿವಿಸಬಲ್ ಪೂಲ್‌ನಿಂದ ರಾಜ್ಯಗಳಿಗೆ ಒಟ್ಟಾರೆಯಾಗಿ ಎಷ್ಟು ಪ್ರಮಾಣ ವರ್ಗಾವಣೆಯಾಗಬೇಕು ಎಂದು ತೀರ್ಮಾನಿಸುತ್ತವೆ. ಆನಂತರ ಕೇಂದ್ರ ಸರಕಾರ ವಿಧಿಸುವ ಮಾರ್ಗ ದರ್ಶನದ ಅನ್ವಯ ಯಾವ್ಯಾವ ರಾಜ್ಯಗಳಿಗೆ ಎಷ್ಟೆಷ್ಟು ಪಾಲೆಂಬುದನ್ನು ತೀರ್ಮಾನಿಸುತ್ತವೆ. ಕುಮಾರಸ್ವಾಮಿಯವರ ಪ್ರಕಾರ ಕಾಂಗ್ರೆಸ್ ಕಾಲದಲ್ಲಿ ನೇಮಕವಾದ 14ನೇ ಆಯೋಗಕ್ಕಿಂತ ಬಿಜೆಪಿ ಕಾಲದಲ್ಲಿ ನೇಮಕವಾದ 15 ನೇ ಆಯೋಗದಿಂದ ರಾಜ್ಯಕ್ಕೆ ಹೆಚ್ಚು ನ್ಯಾಯ ಒದಗಿದೆಯಂತೆ!

ಆದರೆ ಅವರೇ ಒಪ್ಪಿಕೊಳ್ಳುವಂತೆ 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಶೇ. 4.71ರಷ್ಟು ಪಾಲು ನಿಗದಿಯಾಗಿತ್ತು. ಬಿಜೆಪಿ ಕಾಲದ 15 ನೇ ಹಣಕಾಸು ಆಯೋಗ ಕರ್ನಾಟಕದ ಪಾಲನ್ನು ಶೇ. 4.71ರಿಂದ ಶೇ. 3.6ಕ್ಕೆ ಇಳಿಸಿದೆ. ಆದರೂ ಕುಮಾರಸ್ವಾಮಿಯವರು 3.6 ಎನ್ನುವುದು 4.7ಕ್ಕಿಂತ ಜಾಸ್ತಿ ಎಂದು ಪ್ರತಿಪಾದಿಸುತ್ತಿದ್ದಾರೆ!

ಕರ್ನಾಟಕಕ್ಕೆ ಆಗಿರುವ ಈ ಅನ್ಯಾಯಕ್ಕೆ ಪ್ರಧಾನ ಕಾರಣ 1971ಕ್ಕೆ ಹೋಲಿಸಿದಲ್ಲಿ ಕರ್ನಾಟಕದ ಜನಸಂಖ್ಯಾ ಏರಿಕೆ ಪ್ರಮಾಣ ಕುಸಿದಿರುವುದು. ಮತ್ತು ಹಣಕಾಸು ಹಂಚಿಕೆಯ ಮಾನದಂಡದಲ್ಲಿ ಜನಸಂಖ್ಯೆಯ ಗಾತ್ರಕ್ಕೆ ನೀಡಲಾಗಿರುವ ತೂಕ.

1971 ಮತ್ತು 2011ರ ನಡುವೆ ಕರ್ನಾಟಕದ ಜನಸಂಖ್ಯೆಯ ಏರಿಕೆಯ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ. ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಆ ಪ್ರಮಾಣದಲ್ಲಿ ಕುಸಿದಿಲ್ಲ. ಹೀಗಾಗಿ ಸಹಜವಾಗಿ ಬಡತನ ಮತ್ತು ಜನಸಂಖ್ಯೆಯು ಹಣಕಾಸು ಹಂಚಿಕೆಯ ಮಾನದಂಡವಾದಾಗ ಜನಸಂಖ್ಯೆ ನಿಯಂತ್ರಿಸಿರುವ ಕರ್ನಾಟಕ ಶಿಕ್ಷೆಗೊಳಗಾಗುತ್ತದೆ. ಅದನ್ನು ಕಡಿಮೆ ಮಾಡುವ ಉದ್ದೇಶದಿಂದಲೇ 14ನೇ ಹಣಕಾಸು ಆಯೋಗ 1971ರ ಜನಸಂಖ್ಯೆಗೆ ಶೇ. 17.5ರಷ್ಟು ತೂಕವನ್ನು ಮತ್ತು 2011ಕ್ಕೆ ಶೇ. 10ರಷ್ಟು ತೂಕವನ್ನು ನೀಡಿತ್ತು. ಆದರೆ 15ನೇ ಹಣಕಾಸು ಆಯೋಗ 1971ರ ಜನಸಂಖ್ಯೆಯ ಪ್ರಮಾಣವನ್ನು ಸಂಪೂರ್ಣವಾಗಿ ಕೈಬಿಟ್ಟು ಕೇವಲ 2011ರ ಜನಸಂಖ್ಯೆಯ ಪ್ರಮಾಣವನ್ನು ಮಾತ್ರ ಪರಿಗಣಿಸಿದೆ ಮತ್ತು ಅದಕ್ಕೆ ಶೇ. 15ರಷ್ಟು ತೂಕವನ್ನು ನೀಡಿದೆ. ಅಂದರೆ 2011ರ ಜನಸಂಖ್ಯೆಗೆ 14ನೇ ಹಣಕಾಸು ಆಯೋಗ ಶೇ. 10ರಷ್ಟು ಮಾತ್ರ ತೂಕವನ್ನು ನೀಡಿದ್ದರೆ 15ನೇ ಹಣಕಾಸಿನ ಆಯೋಗ ಶೇ. 15ರಷ್ಟು ಅಂದರೆ ಶೇ. 5ರಷ್ಟು ಹೆಚ್ಚಿನ ತೂಕವನ್ನು ನೀಡಿ ಅನ್ಯಾಯವೆಸಗಿದೆ.

ಕರ್ನಾಟಕದ ಪಾಲು ಶೇ. 4.71ರಿಂದ ಶೇ. 3.6ಕ್ಕೆ ಇಳಿಯಲು ಇದು ಪ್ರಧಾನವಾದ ಕಾರಣ. ಆದರೆ ಕುಮಾರ ಸ್ವಾಮಿಯವರು 14ನೇ ಹಣಕಾಸು ಆಯೋಗವು ಜನಸಂಖ್ಯೆಗೆ ಶೇ. 27.5ರಷ್ಟು ತೂಕವನ್ನು ನೀಡಿತ್ತು. ಆದರೆ 15ನೇ ಹಣಕಾಸಿನ ಆಯೋಗ ಕೇವಲ ಶೇ. 15ರಷ್ಟು ತೂಕ ಮಾತ್ರ ನೀಡಿದ್ದು ಕರ್ನಾಟಕಕ್ಕೆ ಪೂರಕ ಎಂದು ಉಲ್ಟಾ ವಾದವನ್ನು ಮುಂದಿಡುತ್ತಿದ್ದಾರೆ. ಅದು ನಿಜವಾಗಿದ್ದ ಪಕ್ಷದಲ್ಲಿ ಕರ್ನಾಟಕದ ಪಾಲು ಕಡಿಮೆಯಾಗಿದ್ದೇಕೆ???

ಇವೆಲ್ಲವೂ ರಾಜಕೀಯ ಆರ್ಥಿಕತೆಯ ಸಾಮಾನ್ಯ ಜ್ಞಾನವಿದ್ದವರಿಗೂ ಅರ್ಥವಾಗುವ ವಿಷಯ. ಆದರೆ ಕುಮಾರಸ್ವಾಮಿಯವರು ರಾಜಕೀಯದಲ್ಲಿ ಪಳಗಿದವರು. ಮುಖ್ಯಮಂತ್ರಿಯಾಗಿದ್ದವರು. ಅವರು ಇವೆಲ್ಲವನ್ನೂ ಚೆನ್ನಾಗಿಯೇ ಕಾಣಬಲ್ಲರು. ಆದರೂ ಹಗ್ಗವನ್ನು ಹಾವೆಂದು, ಹಾವನ್ನು ಹಗ್ಗವೆಂದು ಜನರನ್ನು ನಂಬಿಸಲು ಹೊರಟಿದ್ದಾರೆ.

ಈ ಉದ್ದೇಶಪೂರ್ವಕ ಕುರುಡನ್ನು ಬಿಜೆಪಿ ಕುರುಡು ಎಂದು ಕರೆಯಬೇಕೋ? ಅಥವಾ ಕುರ್ಚಿ ಕುರುಡು ಎಂದು ಕರೆಯಬೇಕೋ? ಈ ಕುರುಡನ್ನು ಕಳೆಯಲು ಏನು ಮಾಡಬೇಕು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News