×
Ad

ರೂ. 2000 ನೋಟುಗಳೆಲ್ಲಾ ಎಲ್ಲಿ ಹೋದವು?: ಆರ್‌ಟಿಐ ಉತ್ತರ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

Update: 2022-11-10 16:51 IST

ಹೊಸದಿಲ್ಲಿ: ಇತ್ತೀಚಿಗಿನ ದಿನಗಳಲ್ಲಿ 2000 ಮುಖಬೆಲೆಯ ಕರೆನ್ಸಿ ನೋಟುಗಳು ಹೆಚ್ಚು ಚಲಾವಣೆಯಲ್ಲಿಲ್ಲದೇ ಇರುವುದು ಹಲವರ ಗಮನಕ್ಕೆ ಬಂದಿರಬಹುದು. ಹಾಗಾದರೆ ಈ 2000 ಮುಖಬೆಲೆಯ ನೋಟುಗಳೆಲ್ಲ ಎಲ್ಲಿ ಹೋದವು ಎಂಬುದಕ್ಕೆ ಆರ್‌ಟಿಐ (RTI) ಉತ್ತರವೊಂದು ದೊರಕಿದೆ.

ಈ ಮಾಹಿತಿಯ ಪ್ರಕಾರ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಕಳೆದ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ 2000 ಮುಖಬೆಲೆಯ ನೋಟುಗಳನ್ನು ಮುದ್ರಿಸಿಲ್ಲ.

ಆರ್‌ಬಿಐ ಅಡಿ ಕಾರ್ಯಾಚರಿಸುವ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟ್‌ ಮುದ್ರಣ್‌ನಿಂದ ದೊರೆತ ಉತ್ತರದ ಪ್ರಕಾರ 2019-20, 2020-21 ಹಾಗೂ 2021-22 ರಲ್ಲಿ ಮುದ್ರಿಸಲಾದ ರೂ 2000 ನೋಟುಗಳ ಸಂಖ್ಯೆ ʻ0ʼ ಆಗಿದೆ.

ದೇಶದಲ್ಲಿ ಚಲಾವಣೆಯಲ್ಲಿರುವ ರೂ. 2000 ನೋಟುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಆರ್‌ಟಿಐ ಉತ್ತರದಲ್ಲಿ ತಿಳಿಸಲಾಗಿದೆಯಲ್ಲದೆ ಈ ಮುಖಬೆಲೆಯ ನೋಟುಗಳನ್ನು ಚಲಾವಣೆಯಲ್ಲಿ ಕಡಿಮೆ ಮಾಡುವ  ಕುರಿತಂತೆ ಯೋಜಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಆರ್ಥಿಕ ವರ್ಷ 2016-17 ರಲ್ಲಿ ಈ ಮುಖಬೆಲೆಯ  3,542.991 ಮಿಲಿಯನ್‌ ನೋಟುಗಳನ್ನು ಮುದ್ರಿಸಲಾಗಿದ್ದರೆ 2017-18 ರಲ್ಲಿ 111.507 ನೋಟುಗಳು ಹಾಗೂ 2018-19 ರಲ್ಲಿ 46.690 ಮಿಲಿಯನ್‌ ನೋಟುಗಳನ್ನು ಮುದ್ರಿಸಲಾಗಿದೆ.

ನವೆಂಬರ್‌ 8, 2016 ರಲ್ಲಿ ಕೇಂದ್ರ ಸರ್ಕಾರ  ಆಗ ಚಲಾವಣೆಯಲ್ಲಿದ್ದ ರೂ 500 ಮತ್ತು ರೂ 1000 ಕರೆನ್ಸಿ ನೋಟುಗಳನ್ನು ಅಮಾನ್ಯೀಕರಣಗೊಳಿಸಿದ ನಂತರ ರೂ 2000 ನೋಟುಗಳನ್ನು ಮುದ್ರಿಸಲಾಗಿತ್ತು.

ಇದನ್ನೂ ಓದಿ: ತಂದೆಗಾಗಿ ತನ್ನ ಕಿಡ್ನಿಯೊಂದನ್ನು ದಾನ ಮಾಡಿಲಿರುವ ಲಾಲು ಪ್ರಸಾದ್‌ ಯಾದವ್‌ ಪುತ್ರಿ: ವರದಿ

Similar News