×
Ad

ವಿವಾದಿತ ಸಂಭಾಜಿ ಭಿಡೆ ಪಾದ ಮುಟ್ಟಿ ನಮಸ್ಕರಿಸಿದ ಪ್ರಕರಣ: 'ಪರಿಚಯವಿರಲಿಲ್ಲ' ಎಂದ ಸುಧಾ ಮೂರ್ತಿ

Update: 2022-11-10 18:06 IST

ಸಾಂಗ್ಲಿ: ಇತ್ತೀಚೆಗೆ ವಿವಾದಿತ ಬಲಪಂಥೀಯ ನಾಯಕ ಮತ್ತು ಶಿವ ಪ್ರತಿಷ್ಠಾನದ ಸ್ಥಾಪಕ ಸಂಭಾಜಿ ರಾವ್‌ ಭಿಡೆ ಅವರ ಕಾಲಿಗೆ ನಮಸ್ಕರಿಸಿ ಅವರಿಂದ ಖ್ಯಾತ ಲೇಖಕಿ, ಸಮಾಜ ಸೇವಕಿ ಹಾಗೂ ಇನ್ಫೋಸಿಸ್‌ ಸಹ-ಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಆಶೀರ್ವಾದ ಪಡೆಯುತ್ತಿರುವ ಚಿತ್ರಗಳು ವೈರಲ್‌ ಆದ ನಂತರ ಸುಧಾಮೂರ್ತಿ ಸಾಕಷ್ಟು ಜನರಿಂದ ಟೀಕೆಗೊಳಗಾಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಸುಧಾ ಮೂರ್ತಿ, ತಾವು ಆ ಕಾರ್ಯಕ್ರಮದಲ್ಲಿ ಭಿಡೆ ಅವರನ್ನು ಭೇಟಿಯಾದಾಗ ಅವರು ಯಾರೆಂದು ತಿಳಿದಿರಲಿಲ್ಲ ಎಂದಿದ್ದಾರೆ.

ʻʻವೈಯಕ್ತಿಕವಾಗಿ ಅವರ ಪರಿಚಯ ನನಗಿರಲಿಲ್ಲ. ಅವರು ಹಿರಿಯರಾಗಿದ್ದರು ಹಾಗೂ ಹಿರಿಯರ ಪಾದಕ್ಕೆರಗಿ ನಮಸ್ಕರಿಸುವುದು ನಮ್ಮ ಸಂಸ್ಕೃತಿ. ಅವರ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ನನಗೆ ತಿಳಿದಿಲ್ಲ. ನಾವು ಸ್ವಲ್ಪ ಹೊತ್ತು ಮಾತನಾಡಬಹುದೇ ಎಂದು ಕಾರ್ಯಕ್ರಮದ ವೇಳೆ ಅವರು ನನ್ನನ್ನು ಕೇಳಿದರು. ಆದರೆ ನಾನು ತುಂಬಾ ಬ್ಯುಸಿಯಾಗಿದ್ದೇನೆ ಎಂದು ಅವರಿಗೆ ತಿಳಿಸಿದೆ,ʼʼ ಎಂದು ಸುಧಾ ಮೂರ್ತಿ ಸ್ಪಷ್ಟೀಕರಣ ನೀಡಿದ್ದಾರೆ.

 ಭೀಮಾ ಕೋರೆಗಾಂವ್‌ನಲ್ಲಿ 2018 ರಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಕಲ್ಲು ತೂರಾಟಕ್ಕೆ ಪ್ರೇರೇಪಿಸಿದ ಆರೋಪ ಎದುರಿಸುತ್ತಿರುವ ಭಿಡೆ ಇತ್ತೀಚೆಗಷ್ಟೇ ಬಿಂದಿ ಧರಿಸದೇ ಇದ್ದ ಪತ್ರಕರ್ತೆಯೊಬ್ಬರನ್ನು ತರಾಟೆಗೆ ತೆಗೆದುಕೊಂಡು ಬಿಂದಿ ಧರಿಸಿ ಪ್ರಶ್ನೆ ಕೇಳಿದರೆ ಮಾತ್ರ ಉತ್ತರಿಸುವುದಾಗಿ ಹೇಳಿ ವಿವಾದಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Similar News