ಗುಜರಾತ್ ಚುನಾವಣೆ; ಬಿಜೆಪಿಯಲ್ಲಿ ಬ್ರಾಹ್ಮಣರ ಪ್ರಾತಿನಿಧ್ಯ ಹೆಚ್ಚಳ: ವರದಿ

Update: 2022-11-12 01:48 GMT

ಅಹ್ಮದಾಬಾದ್: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ (Bharatiya Janata Party - BJP) ಬಿಡುಗಡೆ ಮಾಡಿರುವ 160 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬ್ರಾಹ್ಮಣರಿಗೆ ಪ್ರಾತಿನಿಧ್ಯ ಹೆಚ್ಚಿರುವುದು ಕಂಡು ಬಂದಿದೆ ಎಂದು timesofindia.com ವರದಿ ಮಾಡಿದೆ.

2017ರ ಚುನಾವಣೆಯಲ್ಲಿ 182 ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಈಗ 160 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇವುಗಳ ಜಾತಿವಾರು ತುಲನಾತ್ಮಕ ವಿಶ್ಲೇಷಣೆ ಇಲ್ಲಿದೆ. ಕಳೆದ ಬಾರಿ 8 ಮಂದಿ ಬ್ರಾಹ್ಮಣರಿಗೆ ಟಿಕೆಟ್ ನೀಡಿದ್ದರೆ ಈ ಬಾರಿ ಇದು 13ಕ್ಕೆ ಹೆಚ್ಚಿದೆ. ಮತ್ತೊಂದು ಪ್ರಬಲ ಸಮುದಾಯವಾದ ಠಾಕೂರ್ ಸಮುದಾಯಕ್ಕೆ 9 ಟಿಕೆಟ್ ನೀಡಲಾಗಿದೆ. ಕಳೆದ ಬಾರಿ 15 ಮಂದಿ ಅವಕಾಶ ಪಡೆದಿದ್ದರು.

2017ರ ಚುನಾವಣೆಯಲ್ಲಿ ಬಿಜೆಪಿ 50 ಮಂದಿ ಪಾಟಿದಾರರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದರೆ ಈ ಬಾರಿ ಇದು 39ಕ್ಕೆ ಕುಸಿದಿದೆ. 2012ರ ಚುನಾವಣೆಯಲ್ಲಿ ಬಿಜೆಪಿ 52 ಮಂದಿ ಪಾಟೀದಾರರಿಗೆ ಅವಕಾಶ ನೀಡಿತ್ತು. ಜೈನ ಸಮುದಾಯಕ್ಕೆ ಪ್ರಾತಿನಿಧ್ಯ ಗಣನೀಯವಾಗಿ ಕುಸಿದಿದ್ದು, 2012ರಲ್ಲಿ 15 ಮಂದಿ ಜೈನ ಅಭ್ಯರ್ಥಿಗಳಿದ್ದರೆ ಈ ಪ್ರಮಾಣ 2017 ಹಾಗೂ 2022ರಲ್ಲಿ ನಾಲ್ಕು ಸ್ಥಾನಗಳಿಗೆ ಕುಸಿದಿದೆ.

ಅಹ್ಮದಾಬಾದ್ ನಗರದಲ್ಲಿ ಕಳೆದ ಚುನಾವಣೆಯಲ್ಲಿ ಒಬ್ಬ ಬ್ರಾಹ್ಮಣ ಆಭ್ಯರ್ಥಿಗೆ ಅವಕಾಶ ನೀಡಿದ್ದರೆ ಈ ಬಾರಿ ಮೂವರಿಗೆ ಟಿಕೆಟ್ ನೀಡಲಾಗಿದೆ.

ಇತರ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಗಣನೀಯವಾಗಿ ಕುಸಿದಿದ್ದು, ಕಳೆದ ಬಾರಿ 28 ಮಂದಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದರೆ ಈ ಬಾರಿ ಕೇವಲ ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಕೇವಲ 16 ಮಂದಿಗೆ ಅದೃಷ್ಟ ಲಭಿಸಿದೆ ಎಂದು  timesofindia.com ವರದಿ ಮಾಡಿದೆ.

Similar News