ವಕೀಲರ ಪ್ರತಿಭಟನೆ ವರ್ಗಾವಣೆ ಪಟ್ಟಿಯಿಂದ ನ್ಯಾಯಮೂರ್ತಿ ನಿಖಿಲ್ ಕಾರಿಯಲ್‌ರನ್ನು ಕೈಬಿಟ್ಟ ಕೊಲೀಜಿಯಂ

Update: 2022-11-24 17:31 GMT

ಹೊಸದಿಲ್ಲಿ, ನ. 24: ವಕೀಲರ ತೀವ್ರ ಪ್ರತಿಭಟನೆಯ ಬಳಿಕ ಸುಪ್ರೀಂ ಕೋರ್ಟ್‌ನ ಕೋಲೀಜಿಯಂ (Collegium)ಗುರುವಾರ ವರ್ಗಾವಣೆಗೆ ಶಿಫಾರಸು ಮಾಡಿದ ಉಚ್ಚ ನ್ಯಾಯಾಲಯದ 7 ನ್ಯಾಯಾಧೀಶರ ಪಟ್ಟಿಯಿಂದ ಗುಜರಾತ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನಿಖಿಲ್ ಕಾರಿಯಲ್ (Khil Karial)ಅವರ ಹೆಸರನ್ನು ಕೈ ಬಿಟ್ಟಿದೆ.

ಕಾರಿಯಲ್ ಅವರನ್ನು ಪಾಟ್ನಾ (Patna)ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಕೊಲೀಜಿಯಂ ಶಿಫಾರಸು ಮಾಡಿದ ಬಳಿಕ ಗುಜರಾತ್ ಉಚ್ಚ ನ್ಯಾಯಾಲಯದ ವಕೀಲರ ಸಂಘಟನೆಯ ಸದಸ್ಯರು ಕಳೆದ ವಾರ ಪ್ರತಿಭಟನೆ ನಡೆಸಿದ್ದರು ಹಾಗೂ ನವೆಂಬರ್ 17ರಂದು ಕೆಲಸದಿಂದ ದೂರವಿರಲು ನಿರ್ಧರಿಸಿದ್ದರು.

‘‘ನ್ಯಾಯಮೂರ್ತಿ ಕಾರಿಯಲ್ ಅವರು ಅತ್ಯುತ್ತಮ, ನೇರ ಹಾಗೂ ಪಕ್ಷಪಾತ ರಹಿತ ನ್ಯಾಯಮೂರ್ತಿಯಾಗಿದ್ದು, ಅವರ ಸಮಗ್ರತೆ ಹಾಗೂ ಪ್ರಾಮಾಣಿಕತೆಯನ್ನು ಸಂಪೂರ್ಣ ಬಾರ್ ಅಸೋಸಿಯನ್ ಒಕ್ಕೊರಲಿನಿಂದ ದೃಢೀಕರಿಸುತ್ತದೆ’’ ಎಂದು ಸಂಘಟನೆಯ ನಿಲುವಳಿ ಹೇಳಿತ್ತು.

ಈ ನಡುವೆ ತೆಲಂಗಾಣ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಭಿಷೇಕ್ ರೆಡ್ಡಿ (Abhishek Reddy)ಅವರನ್ನು ಪಾಟ್ನಾ ಉಚ್ಚ ನ್ಯಾಯಾಲಯಕ್ಕೆ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯದ ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿ ಟಿ. ರಾಜಾ (T. Raja)ಅವರನ್ನು ರಾಜಸ್ಥಾನ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ತೆಲಂಗಾಣ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯದ ವಕೀಲರು ಕೂಡ ಪ್ರತಿಭಟನೆಗೆ ಕೈಜೋಡಿಸಿದ್ದರು.

ಗುಜರಾತ್ ಹಾಗೂ ತೆಲಂಗಾಣ ಬಾರ್ ಅಸೋಸಿಯೇಶನ್‌ನ ಸದಸ್ಯರ ನಿಯೋಗ ಸೋಮವಾರ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ (D.Y. Chandrachud)ಅವರನ್ನು ಭೇಟಿಯಾಗಿ ತಮ್ಮ ಅಹವಾಲು ತಿಳಿಸಿದರು. ಭೇಟಿಯ ಬಳಿಕ ಚಂದ್ರ ಚೂಡ ಅವರು, ತಮ್ಮ ಆಕ್ಷೇಪವನ್ನು ಕೊಲೀಜಿಯಂ ಪರಿಶೀಲಿಸಲಿದೆ ಎಂದು ಭರವಸೆ ನೀಡಿದ್ದರು. 

ಅಲ್ಲದೆ, ಮುಷ್ಕರ ನಿಲ್ಲಿಸುವಂತೆ ಸೂಚಿಸಿದ್ದರು. ಕೊಲೀಜಿಯಂ ಗುರುವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕಾರಿಯಲ್ ಅವರ ಹೆಸರಿಲ್ಲ. ಆದರೆ, ಈ ಹಿಂದೆ ಪ್ರಸ್ತಾವಿಸಿದಂತೆ ರಾಜಾ ಹಾಗೂ ರೆಡ್ಡಿ ಅವರನ್ನು ವರ್ಗಾವಣೆ ಮಾಡಲು ಶಿಫಾರಸು ಮಾಡಿದೆ.

Similar News