ನಿವೃತ್ತ ಅಧಿಕಾರಿಗಳಿಗೆ ಬೆಣ್ಣೆ; ನೌಕರರಿಗೆ...?

Update: 2022-11-25 18:16 GMT

ನಿವೃತ್ತಿಯ ನಂತರ ಸರಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ರಿಯಾಯಿತಿ ವಿಷಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿವೃತ್ತ ಅಧಿಕಾರಿಗಳು ಮತ್ತು ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಇತ್ಯಾದಿ ಸಾಮಾನ್ಯ ನೌಕರರ ನಡುವೆ ಸರಕಾರ ತೋರಿಸುತ್ತಿರುವ ತಾರತಮ್ಯ ಧೋರಣೆಯು ಅನೇಕರಲ್ಲಿ ಅಸಮಾಧಾನ ಉಂಟುಮಾಡಿದೆ.

ರಾಜ್ಯದಲ್ಲಿ ಈಶಾನ್ಯ ಮತ್ತು ವಾಯುವ್ಯ ಕರ್ನಾಟಕ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿ, 21.2.2018ರಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿ (ಸಂಖ್ಯೆ 1422), ಕೆಎಸ್ಸಾರ್ಟಿಸಿಯ ನಿವೃತ್ತ ಅಧಿಕಾರಿಗಳು ಮತ್ತು ನೌಕರರರಿಗೆ ಹೆಚ್ಚು ಕಡಿಮೆ ಸಮಾನ ರೀತಿಯ ಉಚಿತ ಪ್ರಯಾಣ ಮತ್ತು ಪಾಸುಗಳ ಕೊಡುಗೆ ನೀಡಲಾಗಿತ್ತು.
ಅದರಂತೆ ನೌಕರರು ಮತ್ತು ಅಧಿಕಾರಿಗಳು ನಿವೃತ್ತರಾದ ಐದು ವರ್ಷಗಳವರೆಗೆ ತಮ್ಮ ಪತ್ನಿ/ಪತಿಯ ಜೊತೆಯಲ್ಲಿ ಸಂಸ್ಥೆಯು ಕಾರ್ಯಾಚರಿಸುವ ಎಲ್ಲಾ ಸ್ಥಳಗಳಿಗೆ ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್ ಬಸ್ಸುಗಳಲ್ಲಿ ಕ್ಯಾಲೆಂಡರ್ ವರ್ಷಕ್ಕೊಮ್ಮೆಯಂತೆ ಐದು ಬಾರಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಜೊತೆಗೆ ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ನಗರ ಸಾರಿಗೆಯ ಉಚಿತ ಪಾಸುಗಳನ್ನು ಪಡೆಯಲು ಅವಕಾಶ ನೀಡಲಾಗಿತ್ತು.
ವಿಚಿತ್ರವೆಂದರೆ, ಅದೇ ದಿನ ಇನ್ನೊಂದು ಸುತ್ತೋಲೆಯನ್ನು ಹೊರಡಿಸಲಾಗಿದ್ದು (ಸಂಖ್ಯೆ 1423), ಅದರಂತೆ ಕೇವಲ ನಿವೃತ್ತ ಅಧಿಕಾರಿಗಳಿಗೆ ಮಾತ್ರ ಅನ್ವಯಿಸುವಂತೆ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ.
ಅದರಂತೆ ನಿವೃತ್ತ ಅಧಿಕಾರಿಗಳು ಪತಿ/ಪತ್ನಿಯರ ಜೊತೆಗೆ ರಾಜಹಂಸ, ಹವಾನಿಯಂತ್ರಿತ ಸೇರಿದಂತೆ ಎಲ್ಲಾ ಐಷಾರಾಮಿ ಬಸ್ಸುಗಳುಗಳಲ್ಲಿ 50 ಶೇ. ದರ ಪಾವತಿಸಿ, ಕೆಲವು ಶರತ್ತುಗಳಿಗೆ ಅನ್ವಯಿಸಿ ಪ್ರಯಾಣಿಸಬಹುದು. ಇದಕ್ಕೆ ಪ್ರಯಾಣದ ಮಿತಿಯಿಲ್ಲ. ಅವರು ವಾರ್ಷಿಕ 500ರೂ. ಸಂಸ್ಕರಣಾ ಶುಲ್ಕ ಪಾವತಿಸಿ ಪಾಸು ಮಾಡಿಸಬೇಕು.
ಈ ತಾರತಮ್ಯವು ನಿವೃತ್ತ ನೌಕರರಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿತ್ತು. ಈ ಸೌಲಭ್ಯವನ್ನು ತಮಗೂ ವಿಸ್ತರಿಸಬೇಕು ಎಂಬುದು ಅವರ ಬೇಡಿಕೆಯಾಗಿದ್ದು, ಹಲವಾರು ಬಾರಿ ಸರಕಾರವನ್ನು ಒತ್ತಾಯಿಸಿದ್ದರೂ, ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರಿಸಿಲ್ಲ ಮತ್ತು ಕಾರ್ಮಿಕ ಸಂಘಗಳೂ ನಿವೃತ್ತ ನೌಕರರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುದು ಅವರ ಅಳಲು.
ಸಾಮಾನ್ಯವೇ ಇರಲಿ, ಐಷಾರಾಮಿ ಬಸ್ಸೇ ಇರಲಿ, ಸಾಮಾನ್ಯ ಸೀಟಿನಲ್ಲಿ ಗಂಟೆಗಟ್ಟಲೆ ಕುಳಿತು, ವರ್ಷಗಟ್ಟಲೆ ಸಾವಿರಾರು ಮೈಲಿ ಬಸ್ಸು ಚಲಾಯಿಸಿದ ನಾವು, ಈಗ ಮುದಿತನದಲ್ಲೂ ಸಾಮಾನ್ಯ ಬಸ್ಸಿನಲ್ಲಿ ಪ್ರಯಾಣಿಸಬೇಕೆ? ಚಾಲಕರಾಗಿ ಸೇವೆ ಮಾಡಿದ ಹೆಚ್ಚಿನವರು ಈ ಪ್ರಾಯದಲ್ಲಿ ಬೆನ್ನುನೋವು, ಕಾಲುಸೆಳೆತ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಾಗಿ ಕಚೇರಿಯಲ್ಲೇ ಕಳೆದ, ಹೆಚ್ಚು ಸಂಬಳ ಪಡೆದ, ಹೆಚ್ಚು ಪಿಂಚಣಿ ಇರುವ ಅಧಿಕಾರಿಗಳಿಗೆ ಮಾತ್ರವೇ ಎಲ್ಲಾ ಬಸ್ಸುಗಳಲ್ಲಿ ಅವಕಾಶ ನೀಡಿರುವುದು ಸಾಮಾನ್ಯ ಕಾರ್ಮಿಕರ ಬಗ್ಗೆ ತೋರಿಸುವ ಅಸಡ್ಡೆಯಲ್ಲವೆ? ಎಂದು ನಿವೃತ್ತ ಚಾಲಕರೊಬ್ಬರು ಕೇಳುತ್ತಾರೆ.
ನಮ್ಮ ಮಕ್ಕಳು ಮದುವೆಯಾಗಿ ದೂರದೂರದ ಊರುಗಳಲ್ಲಿ ಇದ್ದಾರೆ. ಅಲ್ಲಿಗೆ ವರ್ಷಕ್ಕೊಮ್ಮೆ ಮಾತ್ರ ಹೋಗಬೇಕಾ? ನಮಗೂ ಅಧಿಕಾರಿಗಳ ಹಾಗೆ ಐವತ್ತು ಶೇಕಡಾ ದರದಲ್ಲಿ ಎಲ್ಲಾ ಬಸ್ಸುಗಳಲ್ಲಿ ಯಾವಾಗ ಬೇಕಾದರೂ ಅವರಿಗೆ ವಿಧಿಸಿದ ಶರತ್ತಿನಂತೆ ಪ್ರಯಾಣಿಸುವ ಅವಕಾಶ ನೀಡಬೇಕು. ಎಂಬುದು ಅವರ ಬೇಡಿಕೆ.
 ಸರಕಾರ ಈಗಲಾದರೂ ಕಳೆದ ನಾಲ್ಕು ವರ್ಷ ಗಳಿಂದ ನನೆಗುದಿಗೆ ಬಿದ್ದಿರುವ ನೌಕರರ ಈ ನ್ಯಾಯಬದ್ಧ ಬೇಡಿಕೆ ಈಡೇರಿಸಬಹುದೆ

Similar News