ನೋಟು ರದ್ದತಿಯ ಹಿಂದೆ...!

Update: 2022-11-25 18:18 GMT

 ವಿಚಿತ್ರ ಆದರೂ ಸತ್ಯ! 2015ರಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್‌ಗೆ ಗೊತ್ತೇ ಇಲ್ಲದಂತೆ ಕೇಂದ್ರ ಸರಕಾರ 2,000 ರೂಪಾಯಿಯ ನೋಟು ಮುದ್ರಿಸಿತಂತೆ! ಅದೂ ಖಾಸಗಿ ಕಂಪೆನಿಯಲ್ಲಿ ಡೈರೆಕ್ಟರ್ ಆಗಿದ್ದ ಒಬ್ಬ ಖಾಸಗಿ ವ್ಯಕ್ತಿಯ ಹಸ್ತಾಕ್ಷರದಲ್ಲಿ ಹೊಸ 2,000 ಮತ್ತು 500ರ ನೋಟುಗಳನ್ನು ಕೇಂದ್ರ ಸರಕಾರ ಮುದ್ರಿಸಿತಂತೆ! 17ತಿಂಗಳ ನಂತರ ಆ ಖಾಸಗಿ ವ್ಯಕ್ತಿ (ಊರ್ಜಿತ್ ಪಟೇಲ್) ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನಿಯುಕ್ತಿಯಾಗಿದ್ದು! ಸಂವಿಧಾನವನ್ನೇ ಬುಡಮೇಲು ಮಾಡುವ ಇಂತಹ ಘೋರ ನಿರ್ಣಯ ಜಗತ್ತಿನ ಬೇರೆ ಯಾವುದೇ ಪ್ರಜಾಪ್ರಭುತ್ವದಲ್ಲಿ ನಡೆದಿರಲಿಕ್ಕಿಲ್ಲ. ಮೊನ್ನೆ ಸುಪ್ರೀಂ ಕೋರ್ಟಿನಲ್ಲಿ ನವೆಂಬರ್ 2016ರ ನೋಟ್ ರದ್ದತಿ ಕುರಿತ ವಿಚಾರಣೆಯಲ್ಲಿ ಈ ಭಯಂಕರ ವಿಷಯ ಹೊರಬಂದಿದೆ. ಆದರೂ ನಮ್ಮ ದೇಶದ ಗುಲಾಮಿ ಮಾಧ್ಯಮಗಳು ಈ ಕುರಿತು ಮೌನವಾಗಿರುವುದು ಪ್ರಜಾಪ್ರಭುತ್ವದ ಒಳ್ಳೆಯ ಲಕ್ಷಣವಲ್ಲ.

2015 ಜನವರಿಯಲ್ಲಿ ನೋಟು ರದ್ದತಿಯ ಪ್ರಸ್ತಾಪ ಕೇಂದ್ರ ಸರಕಾರ ರಿಸರ್ವ್ ಬ್ಯಾಂಕಿಗೆ ಕಳುಹಿಸಿದಾಗ ಆಗಿನ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ನೋಟು ರದ್ದತಿಗೆ ಸಂಪೂರ್ಣ ಅಸಮ್ಮತಿ ಸೂಚಿಸಿದರಂತೆ. ಅದಕ್ಕಾಗಿ ನಂತರ ರಘುರಾಮ್ ರಾಜನ್‌ರಿಗೆ ಗೊತ್ತೇ ಇಲ್ಲದಂತೆ ನೋಟ್ ರದ್ದತಿ ತಯಾರಿಯ ಮೊದಲನೇ ಹೆಜ್ಜೆಯಾಗಿ ಎಪ್ರಿಲ್ 2015ರಲ್ಲಿ ಹೊಸ ವಿನ್ಯಾಸದ ರೂ, 2,000 ಮತ್ತು 500ರ ನೋಟುಗಳನ್ನು ನಾಸಿಕ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಿಸುವ ಕೆಲಸ ಸುರುವಾಯಿತು. ಹೊಸ ನೋಟು ಪ್ರಿಂಟ್ ಮಾಡಿಸುವುದು ರಿಸರ್ವ್ ಬ್ಯಾಂಕ್ ಕೆಲಸವಾದರೂ ಅದರ ಗವರ್ನರರಿಗೆನೇ ಮಾಹಿತಿ ಕೊಡದೆ ಅವರನ್ನು ಬೈಪಾಸ್ ಮಾಡಿ ಹೊಸ ನೋಟುಗಳ ಪ್ರಿಂಟಿಂಗ್ ಕೆಲಸ ಶುರು ಮಾಡಲಾಯಿತು.
ಸರಕಾರ ಹೊಸ ನೋಟು ಪ್ರಿಂಟ್ ಮಾಡುವುದರಲ್ಲಿ ತಪ್ಪೇನೂ ಇಲ್ಲ ಬಿಡಿ. ಆದರೆ ವಿಚಿತ್ರವೆಂದರೆ ಈ ಹೊಸ ನೋಟುಗಳ ಮೇಲೆ ಹಾಲಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್‌ರ ಹಸ್ತಾಕ್ಷರ ಪ್ರಿಂಟ್ ಮಾಡುವ ಬದಲು ಯಾವುದೇ ಸರಕಾರಿ ಹುದ್ದೆಯಲ್ಲಿ ಇರದ ಒಂದು ಖಾಸಗಿ ಕಂಪೆನಿಯಲ್ಲಿ ನಿರ್ದೇಶಕರಾಗಿದ್ದ ಊರ್ಜಿತ್ ಪಟೇಲರ ಹಸ್ತಾಕ್ಷರವನ್ನು ಹೊಸ ನೋಟುಗಳ ಮೇಲೆ ಪ್ರಿಂಟ್ ಮಾಡಲಾಯಿತು. ಇದು ಸಂವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. ಆ ಊರ್ಜಿತ್ ಪಟೇಲರನ್ನು ಅಧಿಕೃತವಾಗಿ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನಿಯುಕ್ತಿ ಮಾಡಿದ್ದು ಅವರ ಹಸ್ತಾಕ್ಷರದಲ್ಲಿ ಹೊಸ ನೋಟು ಪ್ರಿಂಟ್ ಆದ 17 ತಿಂಗಳ ನಂತರವೇ, ಅಂದರೆ ನವೆಂಬರ್ 2016ರ ನೋಟು ರದ್ದತಿಗಿಂತ ಕೇವಲ ಎರಡು ತಿಂಗಳ ಮೊದಲು!
ಇಷ್ಟೊಂದು ದೊಡ್ಡ ಷಡ್ಯಂತ್ರ ಮಾಡುವ ಅಗತ್ಯ ಆಗಿನ ಕೇಂದ್ರ ಸರಕಾರಕ್ಕೆ ಏನಿತ್ತು? ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿ ತೀರಿಕೊಂಡಿದ್ದಾರೆ ನಿಜ. ಆದರೆ ಇದನ್ನು ಸಂಪೂರ್ಣವಾಗಿ ನಿರ್ದೇಶಿಸಿದ್ದು ಯಾರು?. ಹಾಗಾಗಿ ಸುಪ್ರೀಂ ಕೋರ್ಟಿನಲ್ಲಿ ಈಗ ನಡೆಯು ತ್ತಿರುವ ವಿಚಾರಣೆಯಲ್ಲಿ ಮೋದಿ ಸರಕಾರವೇ ತಮ್ಮ ಅಸಾಂವಿಧಾನಿಕ ನಡೆಯ ಕುರಿತು ವಿವರಣೆ ಕೊಡಬೇಕಿದೆ! ಯಾಕೆಂದರೆ ಅವೈಜ್ಞಾನಿಕ ನೋಟು ರದ್ದತಿಯಿಂದ 200ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಲ್ಲದೆ, ಲಕ್ಷಾಂತರ ಉದ್ಯಮಗಳು ಬಂದ್ ಆಗಿ ಕೋಟ್ಯಂತರ ಜನರು ನಿರುದ್ಯೋಗಿಯಾಗಿ ನಮ್ಮ ಜಿಡಿಪಿ ಸರ್ವಕಾಲಿಕ ತಳಮಟ್ಟಕ್ಕೆ ಕುಸಿಯಿತು. ನೋಟು ರದ್ದತಿಯ ವಿಷಯ ಆರ್‌ಬಿಐ ಗವರ್ನರ್‌ಗೆ ಗೊತ್ತಿಲ್ಲದಿದ್ದರೂ ನಾಸಿಕ್ ಸೆಕ್ಯುರಿಟಿ ಪ್ರಿಂಟಿಂಗ್ ಪ್ರೆಸ್‌ನ ಸಾವಿರಾರು ನೌಕರರಿಗೆ 17 ತಿಂಗಳ ಮೊದಲೇ ಗೊತ್ತಾಗಿತ್ತು, ಜತೆಗೆ ಒಬ್ಬ ಖಾಸಗಿ ವ್ಯಕ್ತಿ ಮುಂದಿನ ಆರ್‌ಬಿಐ ಗವರ್ನರ್ ಆಗಲಿದ್ದಾರೆ ಎಂಬ ಗುಪ್ತ ಮಾಹಿತಿ ಕೂಡ ಅವರಿಗೆ ಆಗಲೇ ಗೊತ್ತಾಗಿ ಬಿಟ್ಟಿತ್ತು. ಅವರ ಮೂಲಕ ದೇಶದ ಕಪ್ಪುಹಣದಾರರಿಗೆಲ್ಲಾ ಈ ಗೌಪ್ಯ ವಿಷಯ ಗೊತ್ತಾಗಿ ಅವರೆಲ್ಲಾ ತಮ್ಮ ಕಪ್ಪುಹಣ ಬಿಳಿ ಮಾಡದೆ ಇರುತ್ತಾರೆಯೇ? ಹಾಗಾದರೆ ಯಾರ ಕಪ್ಪುಹಣ ಬಯಲಿಗೆಳೆಯಲು ನೋಟು ರದ್ದತಿ ಮಾಡಿದ್ದು?

Similar News