ಮೂರನೇ ಹಾಕಿ ಟೆಸ್ಟ್ : ವಿಶ್ವದ ನಂ.1 ತಂಡ ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಜಯ

Update: 2022-11-30 17:53 GMT

ಅಡಿಲೇಡ್, ನ.30: ಹೋರಾಟಕಾರಿ ಪ್ರದರ್ಶನ ನೀಡಿದ ಭಾರತ ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಬುಧವಾರ ನಡೆದ ಮೂರನೇ ಹಾಕಿ ಟೆಸ್ಟ್ ಪಂದ್ಯದಲ್ಲಿ ವಿಶ್ವದ ನಂ.1 ತಂಡ ಆಸ್ಟ್ರೇಲಿಯವನ್ನು 4-3 ಅಂತರದಿಂದ ಮಣಿಸಿ ಶಾಕ್ ನೀಡಿದೆ.

ಆಸ್ಟ್ರೇಲಿಯ ವಿರುದ್ಧ ಭಾರತದ ಅಪರೂಪದ ಗೆಲುವು ಇದಾಗಿದೆ. ಈ ಗೆಲುವಿನ ಮೂಲಕ ಭಾರತವು 5 ಪಂದ್ಯಗಳ ಸರಣಿಯಲ್ಲಿ ಸ್ಪರ್ಧೆಯಲ್ಲಿ ಉಳಿದಿದೆ. ಪ್ರಸಕ್ತ ಆಸ್ಟ್ರೇಲಿಯವು ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ. ಭಾರತವು ಮೊದಲೆರಡು ಟೆಸ್ಟ್ ಪಂದ್ಯಗಳನ್ನು 4-5 ಹಾಗೂ 4-7 ಅಂತರದಿಂದ ಕಳೆದುಕೊಂಡಿತ್ತು. ನಾಲ್ಕನೇ ಪಂದ್ಯವು ಶನಿವಾರ ಹಾಗೂ ಕೊನೆಯ ಪಂದ್ಯವು ರವಿವಾರ ನಡೆಯಲಿದೆ.

ಭಾರತದ ಪರ ಹರ್ಮನ್ಪ್ರೀತ್ ಸಿಂಗ್(12ನೇ ನಿಮಿಷ), ಅಭಿಷೇಕ್(47ನೇ ನಿಮಿಷ), ಶಂಶೇರ್ ಸಿಂಗ್(57ನೇ ನಿಮಿಷ) ಹಾಗೂ ಆಕಾಶ್ದೀಪ್ ಸಿಂಗ್(60ನೇ ನಿಮಿಷ)ತಲಾ ಒಂದು ಗೋಲು ಗಳಿಸಿದರು.

ಆಸ್ಟ್ರೇಲಿಯದ ಪರ ಜಾಕ್ ವೆಲ್ಚ್(25ನೇ ನಿಮಿಷ), ನಾಯಕ ಅರಾನ್ ಝಲೆವ್ಸ್ಕಿ(32ನೇ ನಿಮಿಷ) ಹಾಗೂ ನಥಾನ್ ಎಫ್ರಾಮಸ್(59ನೇ ನಿಮಿಷ)ತಲಾ ಒಂದು ಗೋಲು ದಾಖಲಿಸಿದರು.

12ನೇ ನಿಮಿಷದಲ್ಲಿ ನಾಯಕ ಹರ್ಮನ್ಪ್ರೀತ್ ಪೆನಾಲ್ಟಿ ಕಾರ್ನರ್ ರನ್ನು ಗೋಲಾಗಿ ಪರಿವರ್ತಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. 20ನೇ ನಿಮಿಷದಲ್ಲಿ ಭಾರತದ ಹಿರಿಯ ಗೋಲ್ಕೀಪರ್ ಶ್ರೀಜೇಶ್ ಆಸ್ಟ್ರೇಲಿಯಕ್ಕೆ ಗೋಲು ನಿರಾಕರಿಸಿದರು. ಆಸ್ಟ್ರೇಲಿಯವು 25ನೇ ನಿಮಿಷದಲ್ಲಿ ಸ್ಕೋರನ್ನು ಸಮಬಲಗೊಳಿಸಿತು. ವೆಲ್ಶ್ ಸರಣಿಯಲ್ಲಿ 3ನೇ ಗೋಲು ಗಳಿಸಿದರು. ನಾಯಕ ಝಲೆವ್ಸ್ಕಿ 32ನೇ ನಿಮಿಷದಲ್ಲಿ ಆತಿಥೇಯ ತಂಡಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಅಭಿಷೇಕ್ 47ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರನ್ನು ಸಮಬಲಕ್ಕೆ ತಂದರು. ಶಂಶೇರ್ 57ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ನೀಡಿದರು. ಆದರೆ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. ಆಸ್ಟ್ರೇಲಿಯ 59ನೇ ನಿಮಿಷದಲ್ಲಿ ಗೋಲು ಗಳಿಸಿ ತಿರುಗೇಟು ನೀಡಿತು. ಪಂದ್ಯ ಮುಗಿಯಲು ಕೆಲವೇ ಸೆಕೆಂಡ್ ಬಾಕಿ ಇರುವಾಗ ಆಕಾಶ್ದೀಪ್ ಸಿಂಗ್ ಗೋಲು ಗಳಿಸಿ ಭಾರತಕ್ಕೆ ರೋಚಕ ಜಯ ತಂದರು.

Similar News