‘ಖೇಲ್ ರತ್ನ’ ಪ್ರಶಸ್ತಿ ಸ್ವೀಕರಿಸಿದ ಶರತ್ ಕಮಲ್

ಅರ್ಜುನ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಪ್ರದಾನ

Update: 2022-11-30 17:58 GMT

ಹೊಸದಿಲ್ಲಿ, ನ. 30: ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕಾಗಿ ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ಗೆ ಬುಧವಾರ ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಈ ವರ್ಷ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಮೂರು ಚಿನ್ನದ ಪದಕಗಳು ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಮಣಿಕಾ ಬಾತ್ರಾ ಬಳಿಕ, ಖೇಲ್ ರತ್ನ ಪ್ರಶಸ್ತಿ ಪಡೆದ ಎರಡನೇ ಟೇಬಲ್ ಟೆನಿಸ್ ಆಟಗಾರ ಅವರಾಗಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಖೇಲ್ ರತ್ನ, ಅರ್ಜುನ ಪ್ರಶಸ್ತಿ ಸೇರಿದಂತೆ ವಿವಿಧ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಿದರು.

ಹಾಕಿ ದಂತಕತೆ ಮೇಜರ್ ಧ್ಯಾನಚಂದ್ರ ಜನ್ಮದಿನದ ಸಂದರ್ಭದಲ್ಲಿ ಪ್ರತಿ ವರ್ಷ ಆಗಸ್ಟ್ 29ರಂದು ಈ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ಕಳೆದ ವರ್ಷ ಮತ್ತು ಈ ವರ್ಷ ಬೇರೆ ದಿನ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಕಿವಿಗಡಚಿಕ್ಕುವ ಕರತಾಡನದ ನಡುವೆ ಶರತ್ ಕಮಲ್ ರಾಷ್ಟ್ರಪತಿಯವರಿಂದ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು.

ಖೇಲ್ ರತ್ನ ಪ್ರಶಸ್ತಿಯು 25 ಲಕ್ಷ ರೂ. ನಗದು, ಒಂದು

ಪದಕ ಮತ್ತು ಮಾನಪತ್ರವನ್ನು ಒಳಗೊಂಡಿದೆ. ಅರ್ಜುನ

ಪ್ರಶಸ್ತಿಯು 15 ಲಕ್ಷ ರೂ. ನಗದು, ಒಂದು ಕಂಚಿನ ಪುತ್ಥಳಿ ಮತ್ತು ಒಂದು ಮಾನಪತ್ರವನ್ನು ಒಳಗೊಂಡಿದೆ.

ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖತ್ ಝರೀನ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಸೇರಿದಂತೆ 25 ಕ್ರೀಡಾಪಟುಗಳಿಗೆ ಈ ಬಾರಿ ಅರ್ಜುನ ಪ್ರಶಸ್ತಿಗಳನ್ನು ನೀಡಲಾಗಿದೆ.

ಖೇಲ್ ರತ್ನ ಪ್ರಶಸ್ತಿ ವಿತರಣೆಯ ಬಳಿಕ, ರಾಷ್ಟ್ರಪತಿಯವರು ಜೀವಮಾನದ ಸಾಧನೆಗಾಗಿ ಕ್ರೀಡಾಪಟುಗಳ ಕೋಚ್ಗಳಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಗಳನ್ನು ವಿತರಿಸಿದರು. ಈ ಬಾರಿಯ ‘ಜೀವಮಾನ ಸಾಧನೆ ದ್ರೋಣಾಚಾರ್ಯ ಪ್ರಶಸ್ತಿ’ಯನ್ನು ಕ್ರಿಕೆಟಿಗ ರೋಹಿತ್ ಶರ್ಮರ ಕೋಚ್ ದಿನೇಶ್ ಜವಾಹರ್ ಲಾಡ್, ಫುಟ್ಬಾಲ್ ಕೋಚ್ ಬಿಮಲ್ ಪ್ರಫುಲ್ಲ ಘೋಷ್ ಮತ್ತು ಕುಸ್ತಿ ಕೋಚ್ ರಾಜ್ ಸಿಂಗ್ ಅವರಿಗೆ ನೀಡಲಾಗಿದೆ.

ಸಾಮಾನ್ಯ ದ್ರೋಣಾಚಾರ್ಯ ಪ್ರಶಸ್ತಿಯನ್ನು ಜೀವನ್ಜೋತ್ ಸಿಂಗ್ ತೇಜ (ಬಿಲ್ಲುಗಾರಿಕೆ), ಮುಹಮ್ಮದ್ ಅಲಿ ಖಮರ್ (ಬಾಕ್ಸಿಂಗ್), ಸುಮಾ ಸಿದ್ಧಾರ್ಥ ಶಿರೂರ್ (ಪ್ಯಾರಾ ಶೂಟಿಂಗ್) ಮತ್ತು ಸುಜೀತ್ ಮಾನ್ (ಕುಸ್ತಿ) ಅವರಿಗೆ ನೀಡಲಾಗಿದೆ.

Similar News