ಮುಂಬೈನಲ್ಲಿ ಕೊರಿಯನ್ ಯೂಟ್ಯೂಬರ್ ಗೆ ಕಿರುಕುಳ; ವಿಡಿಯೋ ವೈರಲ್

Update: 2022-12-01 06:01 GMT

ಮುಂಬೈ: ದಕ್ಷಿಣ ಕೊರಿಯಾದ ಯೂಟ್ಯೂಬರ್ (South Korean YouTuber) ನೇರ ಪ್ರಸಾರ ಮಾಡುವಾಗ ಆಕೆಗೆ ಕಿರುಕುಳ ನೀಡಿದ ಕಾರಣಕ್ಕೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಅಂತರ್ಜಾಲದಲ್ಲಿ ಹಂಚಿಕೆಯಾಗಿರುವ ವಿಡಿಯೋವೊಂದರಲ್ಲಿ ಕಳೆದ ರಾತ್ರಿ ಖಾರ್ ನಲ್ಲಿ(Khar) ಆರೋಪಿಯೊಬ್ಬ ಯೂಟ್ಯೂಬರ್ ‘ಬೇಡ, ಬೇಡ” ಎಂದು ಕೂಗುತ್ತಿದ್ದರೂ ಆಕೆಯ ಕೈಹಿಡಿದೆಳೆಯುತ್ತಿರುವುದು ಕಂಡು ಬಂದಿದೆ.

ಆರೋಪಿಯು ಯೂಟ್ಯೂಬರ್ ಪ್ರತಿಭಟಿಸುತ್ತಿದ್ದರೂ ಆಕೆಯ ಸನಿಹಕ್ಕೆ ಬಂದು ಆಕೆಯ ಕೈ ಹಿಡಿದುಕೊಂಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಅಲ್ಲಿಂದ ಆಕೆ ತೆರಳಿದ ಬಳಿಕ, ಬೈಕ್‍ ನಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿರುವ ಆ ವ್ಯಕ್ತಿ ಆಕೆಗೆ ಲಿಫ್ಟ್ ನೀಡುವುದಾಗಿ ಆಹ್ವಾನ ನೀಡಿದ್ದಾನೆ. ಆದರೆ, ಆ ಮಹಿಳೆ ಅದನ್ನು ನಿರಾಕರಿಸಿದ್ದು, ನನ್ನ ಮನೆ ಸಮೀಪದಲ್ಲಿಯೇ ಇದೆ ಎಂದು ಅವರಿಗೆ ತಿಳಿಸಿದ್ದಾರೆ.

ಆ ವಿಡಿಯೊವನ್ನು ಮತ್ತೊಮ್ಮೆ ಟ್ವೀಟ್ ಮಾಡಿರುವ ಆ ಮಹಿಳೆ, ಆರೋಪಿಯೊಂದಿಗೆ ಮತ್ತೊಬ್ಬ ವ್ಯಕ್ತಿಯೂ ಇದ್ದುದರಿಂದ ಪರಿಸ್ಥಿತಿ ಉಲ್ಬಣಗೊಳ್ಳದಂತೆ ನಾನು ಪ್ರಯತ್ನಿಸಿದೆ ಎಂದು ಬರೆದುಕೊಂಡಿದ್ದಾಳೆ.

“ಕಳೆದ ರಾತ್ರಿ ನಾನು ನೇರ ಪ್ರಸಾರ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ನನಗೆ ಕಿರುಕುಳ ನೀಡಿದ. ಆತ ತನ್ನ ಇನ್ನೊಬ್ಬ ಗೆಳೆಯನೊಂದಿಗೆ ಇದ್ದುದರಿಂದ ಪರಿಸ್ಥಿತಿಯು ವಿಷಮಿಸದಂತೆ ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಕೆಲವರು ನಾನು ತೀರಾ ಆತ್ಮೀಯವಾಗಿ ಮಾತುಕತೆ ನಡೆಸುತ್ತಿದ್ದುದೇ ಘಟನೆಗೆ ಕಾರಣವೆಂದು ಹೇಳಿದ್ದಾರೆ. ಇದು ನಾನು ಮತ್ತೊಮ್ಮೆ ನೇರ ಪ್ರಸಾರ ಮಾಡುವ ಬಗ್ಗೆ ಮರುಚಿಂತನೆ ಮಾಡುವಂತೆ ಮಾಡಿದೆ” ಎಂದು ಆಕೆ ಹೇಳಿದ್ದಾಳೆ.

ವಿಡಿಯೊವನ್ನು ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ndtv.com ವರದಿ ಮಾಡಿದೆ. 

Similar News