TRS ಶಾಸಕರ ಖರೀದಿ ಯತ್ನ ಪ್ರಕರಣ: ಸಂಚು ರೂಪಿಸುವ ಮುಖ್ಯ ಸಭೆ ಬಿ.ಎಲ್. ಸಂತೋಷ್ ನಿವಾಸದಲ್ಲಿ ನಡೆದಿತ್ತು ಎಂದ ಸಿಟ್

Update: 2022-12-01 11:56 GMT

ಹೈದರಾಬಾದ್: ತೆಲಂಗಾಣ ರಾಷ್ಟ್ರೀಯ ಸಮಿತಿ (TRS) ಶಾಸಕರನ್ನು ಖರೀದಿ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕುರಿತಾದ ಪ್ರಕರಣದ ತನಿಖೆ ನಡೆಸುತ್ತಿರುವ ತೆಲಂಗಾಣ ವಿಶೇಷ ತನಿಖಾ ತಂಡ (SIT)  ಪ್ರಕರಣದ ಏಳು ಆರೋಪಿಗಳಿಂದ ಸಂಗ್ರಹಿಸಿದ ಸಾಕ್ಷ್ಯ ಕುರಿತಾದ ಮೂರು ಪುಟಗಳ ಟಿಪ್ಪಣಿಯನ್ನು ಹೈಕೋರ್ಟಿಗೆ ಸಲ್ಲಿಸಿದೆ. ಈ ಸಂಚನ್ನು ರೂಪಿಸಲು ನಡೆಸಲಾದ ಅತಿ ಮಹತ್ವದ ಸಭೆಯನ್ನು ಅಕ್ಟೋಬರ್ 15 ರಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ  ಬಿ. ಎಲ್. ಸಂತೋಷ್ (BL Santhosh) ಅವರ ಸರಕಾರಿ ನಿವಾಸದಲ್ಲಿ ನಡೆಸಲಾಗಿತ್ತು ಎಂದು ಈ ವರದಿಯಲ್ಲಿ ತಿಳಿಸಲಾಗಿದೆ ಎಂದು thenewsminute.com ವರದಿ ಮಾಡಿದೆ.

ಸಂತೋಷ್ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಭಾರತ್ ಧರ್ಮ ಜನ ಸೇನಾ ಮುಖ್ಯಸ್ಥ ತುಷಾರ್ ವೆಳ್ಳಪಳ್ಳಿ, ರಾಮಚಂದ್ರ ಭಾರತಿ, ಉದ್ಯಮಿ ನಂದ ಕುಮಾರ್ ಮತ್ತು ಎಂ ವಿಜಯ್ ಕುಮಾರ್ ಭಾಗವಹಿಸಿದ್ದರು ಎಂದು ಸಿಟ್ ಹೇಳಿದೆ.

ಆರೋಪಿಗಳ ಸೆಲ್ ಟವರ್ ಲೊಕೇಶನ್, ಛಾಯಾಚಿತ್ರಗಳನ್ನೊಳಗೊಂಡ ಸಾಕ್ಷ್ಯವನ್ನು ವಿಶೇಷ ತನಿಖಾ ತಂಡ ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿದೆ. ಆರೋಪಿಗಳ ನಡುವೆ ನಡೆದ ವಾಟ್ಸ್ ಆ್ಯಪ್ ಕರೆಗಳು, ಇತರ ಕರೆಗಳು, ಸಂದೇಶಗಳು ಮತ್ತು ಧ್ವನಿ ಸಂದೇಶಗಳ ಕುರಿತೂ ತಂಡ ಮಾಹಿತಿ ಸಂಗ್ರಹಿಸಿದೆ.

ರಾಮಚಂದ್ರ ಭಾರತಿ ಮತ್ತು ಬಿ ಎಲ್ ಸಂತೋಷ್ ಬಹಳ ಸಮಯದಿಂದ ಪರಿಚಿತರು ಹಾಗೂ ಇನ್ನೊಬ್ಬ ಆರೋಪಿಯಾಗಿರುವ ತಿರುಪತಿಯ ಸಿಂಹಯಾಜಿ ಸ್ವಾಮಿ ಹೋಟೆಲ್ ಒಂದರಲ್ಲಿ ರಾಜಕೀಯ ನಾಯಕರೊಂದಿಗೆ ಸಭೆ ನಡೆಸಿ ಅವರ ಪ್ರಸ್ತುತ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗುವ ಪ್ರಸ್ತಾವನೆ ಮುಂದಿಟ್ಟಿದ್ದರು ಎಂದು ಸಿಟ್ ವರದಿಯಲ್ಲಿ ಹೇಳಲಾಗಿದೆ.

ಸಿಟ್‍ನ ಈ ಟಿಪ್ಪಣಿಯನ್ನು ನ್ಯಾಯಾಧೀಶರಿಗೆ ತೆಲಂಗಾಣ ರಾಜ್ಯ ಸರಕಾರದ ಪರ ವಕೀಲ ದುಷ್ಯಂತ್ ದವೆ ಹೈಕೋರ್ಟ್ ಮುಂದೆ ಇರಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಟ್‍ನಿಂದ ಸಿಬಿಐ ಅಥವಾ ಸ್ವತಂತ್ರ ಏಜನ್ಸಿಗೆ ವಹಿಸಬೇಕೆಂಬ ಆರೋಪಿಗಳ ಅಪೀಲು ಸಂಬಂಧಿತ ಪ್ರಕರಣಗಳನ್ನು ಜಸ್ಟಿಸ್ ಬಿ ವಿಜಯಸೇನ್ ವಿಚಾರಣೆ ನಡೆಸುತ್ತಿದ್ದಾರೆ. ಗುಜರಾತ್‍ನಲ್ಲಿ ನಡೆದ ಸೊಹ್ರಾಬುದ್ದೀನ್ ಎನ್‍ಕೌಂಟರ್ ಪ್ರಕರಣದಲ್ಲಿ ಆಗಿನ ಗುಜರಾತ್ ಸಚಿವರಾಗಿದ್ದ ಪ್ರಸಕ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಖುಲಾಸೆಯನ್ನು ಉಲ್ಲೇಖಿಸಿದ ದವೆ, ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವುದಕ್ಕೆ ವಿರೋಧ ಸೂಚಿಸಿದರಲ್ಲದೆ  ಸರಕಾರವನ್ನು ಉರುಳಿಸುವ ಯತ್ನದಿಂದ ತನ್ನನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಎಲ್ಲಾ ಹಕ್ಕು ಇದೆ ಎಂದರು.

ಸಿಟ್ ನೇತೃತ್ವವನ್ನು ಹೈದರಾಬಾದ್ ಪೊಲೀಸ್ ಆಯುಕ್ತ ಸಿ ವಿ ಆನಂದ್ ವಹಿಸಿದ್ದು ಹಾಗೂ ಅವರ ಸೇವಾವಧಿ ಇನ್ನೂ ಐದು ವರ್ಷ ಇದೆ ಹಾಗೂ ಅವರು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುತ್ತಾರೆ ಹಾಗೂ ಸಿಟ್ ಭಾಗವಾಗಿ ಹಲವಾರು ಇತರ ಐಪಿಎಸ್ ಅಧಿಕಾರಿಗಳು ಇದ್ದಾರೆ ಎಂದು ಅವರು ಹೇಳಿದರು

ಮೂವರು ಪ್ರಮುಖ ಆರೋಪಿಗಳಾದ ರಾಮಚಂದ್ರ ಭಾರತಿ, ನಂದ ಕುಮಾರ್ ಮತ್ತು ಸಿಂಹಯಾಜಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದ್ದು ಅವರು ರೂ 3 ಲಕ್ಷ  ಹಾಗೂ ಇಬ್ಬರು ಶೂರಿಟಿಗಳನ್ನು ಹಾಜರುಪಡಿಸಬೇಕಿದೆ ಹಾಗೂ ಪ್ರತಿ ಸೋಮವಾರ ಸಿಟ್ ಮುಂದೆ ಹಾಜರಾಗಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

Similar News