ದಿಲ್ಲಿಯಿಂದ ನಾಪತ್ತೆಯಾಗಿದ್ದ ಬಾಲಕನ ವಿರೂಪಗೊಂಡ ಮೃತದೇಹ ಉತ್ತರಪ್ರದೇಶದಲ್ಲಿ ಪತ್ತೆ

Update: 2022-12-07 04:45 GMT

ಹೊಸದಿಲ್ಲಿ: ಪೂರ್ವ ದಿಲ್ಲಿಯಿಂದ ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕನ ವಿರೂಪಗೊಂಡ ಮೃತದೇಹವನ್ನು ಉತ್ತರ ಪ್ರದೇಶದ ಮೀರತ್‌ನಲ್ಲಿ ಮಂಗಳವಾರ ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಬಾಲಕನನ್ನು ನವೆಂಬರ್ 30 ರಂದು ಪ್ರೀತ್ ವಿಹಾರ್‌ನಲ್ಲಿರುವ ಆತನ ನಿವಾಸದಿಂದ ಅಪಹರಿಸಲಾಗಿದೆ. ನಂತರ ಬಾಲಕನ ನೆರೆಮನೆಯಾತನಿಂದಲೇ ಹತ್ಯೆಗೀಡಾಗಿದ್ದಾನೆ. ಬಾಲಕನ ತಲೆಯಿಲ್ಲದ ಶವವನ್ನು ಮೀರತ್‌ನ ಹೊಲದಿಂದ ವಶಪಡಿಸಿಕೊಳ್ಳಲಾಗಿದೆ. ಬಂಧಿತ 16 ವರ್ಷದ ಆರೋಪಿ, ಬಾಲಕನನ್ನು ನರ ಬಲಿಗಾಗಿ ಕೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

" ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ನಿರಂತರ ವಿಚಾರಣೆಯಲ್ಲಿ, ಆರೋಪಿಯು ಮೀರತ್‌ನ ಕಬ್ಬಿನ ಗದ್ದೆಯಲ್ಲಿ ಬಾಲಕನನ್ನು ಬಿಟ್ಟಿದ್ದಾಗಿ ಬಹಿರಂಗಪಡಿಸಿದ್ದಾನೆ.  ಆ ನಂತರ, ತಂಡವನ್ನು ಮೀರತ್‌ಗೆ ಕಳುಹಿಸಲಾಯಿತು, ಸ್ಥಳೀಯ ಪೊಲೀಸರು ಅದಾಗಲೇ ತಲೆ ಮತ್ತು ಕೈಕಾಲು ಇಲ್ಲದ ಮೃತದೇಹವನ್ನು ಪತ್ತೆ ಮಾಡಿದ್ದಾರೆ ಎಂಬ ವಿಚಾರ ತಿಳಿಯಿತು’’ ಎಂದು  ಹಿರಿಯ ಪೊಲೀಸ್ ಅಧಿಕಾರಿ ಅಮೃತಾ ಗುಗುಲೋತ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“ತಲೆ, ಕೈಕಾಲು ಇಲ್ಲದ ಮೃತದೇಹದ ಸಮೀಪದಲ್ಲಿ ತಲೆ ಕೂಡ ಪತ್ತೆಯಾಗಿದೆ. ಧರಿಸಿದ ಬಟ್ಟೆಗಳ ಆಧಾರದ ಮೇಲೆ, ಶವವು ಪ್ರೀತ್ ವಿಹಾರ್ ಪ್ರದೇಶದಲ್ಲಿ ಕಾಣೆಯಾದ ಬಾಲಕನದ್ದು ಎಂದು ಗುರುತಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದರು. .

ಬಾಲಕನ ಭೀಕರ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ, ಬಾಲಕನ ಕುಟುಂಬ ಮತ್ತು ಇತರ ಸ್ಥಳೀಯರು ಪ್ರತಿಭಟನೆಗಳನ್ನು ನಡೆಸಿದರು ಮತ್ತು ಪ್ರೀತ್ ವಿಹಾರ್ ಪ್ರದೇಶದಲ್ಲಿ ರಸ್ತೆಯನ್ನು ತಡೆದರು. ಆಕ್ರೋಶಗೊಂಡ ಪ್ರತಿಭಟನಾಕಾರರು ಗುಂಪನ್ನು ಚದುರಿಸಲು ಯತ್ನಿಸುತ್ತಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.

Similar News