ಹಿಮಾಚಲದಲ್ಲಿ ಬಿಜೆಪಿಗೆ ಸೋಲು: ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಜೆಪಿ ನಡ್ಡಾ ವಿರುದ್ಧ ಬಿಜೆಪಿ ಬೆಂಬಲಿಗರ ಆಕ್ರೋಶ

Update: 2022-12-08 17:20 GMT

ಹೊಸದಿಲ್ಲಿ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಬಿಜೆಪಿ ಸೋಲಿನ ಬಳಿಕ ರಾಜ್ಯದ ಸಂಸದರಾಗಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹಾಗೂ ಬಿಜೆಪಿ (BJP) ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರ ವಿರುದ್ಧ ಬಿಜೆಪಿ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಪಕ್ಷದ ಒಳಜಗಳಕ್ಕೆ ಠಾಕೂರ್‌ ಹಾಗೂ ನಡ್ಡಾರನ್ನು ಗುರಿಯಾಗಿಸಿದ ಬಿಜೆಪಿ ಬೆಂಬಲಿಗರು ಪಕ್ಷದ ಸೋಲಿಗೆ ಪಕ್ಷದ ಆಂತರಿಕ ಬಂಡಾಯವನ್ನು ಗುರಿ ಮಾಡಿದ್ದಾರೆ. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ತವರು ರಾಜ್ಯವಾದ ಹಿಮಾಚಲ ಪ್ರದೇಶದ 68 ಕ್ಷೇತ್ರಗಳ ಪೈಕಿ ಕನಿಷ್ಠ 21 ಕ್ಷೇತ್ರಗಳಲ್ಲಿ ಬಿಜೆಪಿಯೊಳಗೆ ಬಂಡಾಯವೆದ್ದಿದೆ. ಅವುಗಳಲ್ಲಿ ಎರಡು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. 

ಬಿಜೆಪಿ ಒಳಜಗಳ ಮೂರು ಬಣಗಳಾಗಿ ಒಡೆದು ಹೋಗಿದೆ. ಜೆಪಿ ನಡ್ಡಾ ಬೆಂಬಲಿಗರು ಒಂದು ಕಡೆಯಾದರೆ, ಅನುರಾಗ್‌ ಠಾಕೂರ್‌ ಬೆಂಬಲಿಗರು ಇನ್ನೊಂದೆಡೆ, ಮತ್ತೊಂದು ಕಡೆ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಅವರ ನಿಷ್ಠರು ಇದ್ದಾರೆ ಎಂದು ndtv.com ವರದಿ ಮಾಡಿದೆ. 

ಟ್ವಿಟರ್ ಬಳಕೆದಾರ ದುಶ್ಯಂತ್ ಎ ಅವರು, “ನಡ್ಡಾ, ಅನುರಾಗ್ ಠಾಕೂರ್ ರಾಜ್ಯದಲ್ಲಿ ನಡೆದ ಮುಖಾಮುಖಿ ಸ್ಪರ್ಧೆಯಲ್ಲಿ, ಬಿಜೆಪಿಯ ಹಣ, ಮಾಧ್ಯಮ ಮತ್ತು ಸಂಸ್ಥೆಗಳ ಬಲದ ವಿರುದ್ಧ, ಪ್ರಿಯಾಂಕಾ ಗಾಂಧಿ ಅವರು ಮೋದಿ ಅವರನ್ನು ಸೋಲಿಸಿದ್ದಾರೆ.” ಎಂದು ಟ್ವೀಟ್‌ ಮಾಡಿದ್ದಾರೆ.

ಅನುರಾಗ್‌ ಠಾಕೂರ್‌ ಅವರು, ಬಿಜೆಪಿಯ ಪ್ರಮುಖ ವ್ಯಕ್ತಿ ಎಂದು ಬಿಂಬಿತವಾಗಿದ್ದರೂ ಕಳೆದ ಬಾರಿ ಸೋತಿದ್ದ ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ಶ್ರಮವನ್ನು ಪ್ರಶಂಸಿಸಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರು. ಅನೇಕರು ಇದನ್ನು ತನ್ನ ತಂದೆಗೆ ಟಿಕೆಟ್ ಕೊಡಿಸಲು ಸಾಧ್ಯವಾಗದ ಮಗನ ಅಸಹಾಯಕತೆಯ ಕಣ್ಣೀರೆಂಬಂತೆ ನೋಡಿದರು. ರಾಜಕಾರಣದಿಂದ ಧುಮಾಲ್‌ ಅವರು ನಿವೃತ್ತಿ ಹೊಂದಿದ್ದಾರೆ ಎಂದು ಪಕ್ಷ ಹೇಳಿಕೊಂಡರೂ, ಬಿಜೆಪಿಗೆ ಬಂಡಾಯ ನಾಯಕರನ್ನು ಓಲೈಸುವ ಅಗತ್ಯವಿದ್ದರೆ ಧುಮಾಲ್ ಅವರ ಮೂಲಕವೇ ಹೋಗಬೇಕಿತ್ತು. ಬಂಡಾಯ ನಾಯಕರು "ನಮ್ಮ ಕುಟುಂಬದ ಭಾಗ" ಮತ್ತು "ಅವರಿಗೆ ಅವರದೇ ಆದ ಕಾರಣಗಳಿವೆ" ಎಂದು ಬಂಡಾಯ ನಾಯಕರನ್ನು ಧುಮಾಲ್‌ ಸಮರ್ಥಿಸಿದ್ದರು ಎಂದು ndtv.com ವರದಿ ಮಾಡಿದೆ. 
 
ಹಲವು ಟ್ವಿಟರ್‌ ಬಳಕೆದಾರರು ಗುಜರಾತಿನಲ್ಲಿ ಪ್ರಧಾನಿ ಮೋದಿ ಬೀರಿದ ಪರಿಣಾಮವನ್ನು ಹಿಮಾಚಲದಲ್ಲಿ ಜೆಪಿ ನಡ್ಡಾ ಹಾಗೂ ಅನುರಾಗ್‌ ಠಾಕೂರ್‌ ಅವರ ಪರಿಣಾಮಗಳೊಂದಿಗೆ ಹೋಲಿಸಿದ್ದಾರೆ. ಫಲಿತಾಂಶದ ಬಳಿಕ, ಹಿಮಾಚಲ ಬಿಜೆಪಿ ಅಧ್ಯಕ್ಷರ ತವರು ರಾಜ್ಯವೇ ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಅನುರಾಗ್‌ ಠಾಕೂರ್‌ ರನ್ನು ಬಿಜೆಪಿಯಿಂದ ಉಚ್ಛಾಟಿತಗೊಳಿಸಬೇಕು, ಜೆಪಿ ನಡ್ಡಾ ಬದಲು ಗುಜರಾತಿನಲ್ಲಿ ಭಾರೀ ಅಂತರದಲ್ಲಿ ಗೆದ್ದ ಸಿಆರ್‌ ಪಾಟೀಲರನ್ನು ಬಿಜೆಪಿಯ ಹೊಸ ಅಧ್ಯಕ್ಷರನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ. 
 
“ನಾನು ಸಿ.ಆರ್.ಪಾಟೀಲ್ ಬಿಜೆಪಿಯ ನೂತನ ಅಧ್ಯಕ್ಷರಾಗಬೇಕೆಂದು ಭಾವಿಸುತ್ತೇನೆ. ಅವರು ಗುಜರಾತಿನಲ್ಲಿ ಭರ್ಜರಿ ಬಹುಮತ ಹೊಂದಿರುವ ಮಹಾನ್ ನಾಯಕ. ಪಕ್ಷಾತೀತವಾಗಿ ಕುಟುಂಬ ರಾಜಕಾರಣ ಮಾಡುತ್ತಿರುವ ಅನುರಾಗ್ ಠಾಕೂರ್ ಅವರನ್ನು ಬಿಜೆಪಿಯಿಂದ ವಜಾಗೊಳಿಸಬೇಕು” ಎಂದು ಗಿರೀಶ್‌ ಜುಯಲ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. 

ಆಂತರಿಕ ಬಂಡಾಯವಿದ್ದರೂ ಇಲ್ಲದಿದ್ದರೂ ಹಿಮಾಚಲದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರ ಬದಲಾಯಿಸುವ ಸ್ಥಳೀಯ ಸಾಂಪ್ರದಾಯಿಕ ಪ್ರವೃತ್ತಿ ಈ ಬಾರಿಯೂ ಮುಂದುವರೆದಿದೆ. ನರೇಂದ್ರ ಮೋದಿ ವರ್ಚಸ್ಸಿನಲ್ಲಿ, ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೂ, ಹಿಮಾಚಲದಲ್ಲಿ ಬಿಜೆಪಿ ಗೆದ್ದಿದ್ದರೆ ಅನುರಾಗ್‌ ಠಾಕೂರ್‌ ಮುಖ್ಯಮಂತ್ರಿಯ ಕುರ್ಚಿಗೆ ಬಲವಾಗಿ ಕಣ್ಣಿಟ್ಟಿದ್ದರು.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳುವಲ್ಲಿ ನೆರವಾದ ಐದು ಪ್ರಮುಖ ಅಂಶಗಳು

Similar News