ನಿರ್ಬಂಧ ಹೇರಲ್ಪಟ್ಟ ಸಂಸ್ಥೆಗಳಿಗೆ ಮಾನವೀಯ ನೆರವು ಪಡೆಯಲು ಅವಕಾಶ: ಭದ್ರತಾ ಮಂಡಳಿ ನಿರ್ಣಯಕ್ಕೆ ಭಾರತ ಗೈರು

Update: 2022-12-10 18:12 GMT

ವಿಶ್ವಸಂಸ್ಥೆ, ಡಿ.10: ನಿರ್ಬಂಧ ಹೇರಲ್ಪಟ್ಟ ಸಂಸ್ಥೆಗಳಿಗೆ ಮಾನವೀಯ ನೆರವನ್ನು ಪಡೆಯುವುದಕ್ಕೆ ಅವಕಾಶ ಮಾಡಿಕೊಡುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಕುರಿತ ಮತದಾನಕ್ಕೆ ಭಾರತವು ಶುಕ್ರವಾರ ಗೈರುಹಾಜರಾಗಿದೆ.

ಅಮೆರಿಕ ಹಾಗೂ ಐಯರ್‌ಲ್ಯಾಂಡ್ ಈ ನಿರ್ಣಯವನ್ನು ಮಂಡಿಸಿದ್ದವು.   ಸರಕು ಹಾಗೂ ಸೇವೆಗಳ ಪೂರೈಕೆ ಮತ್ತು ಹಣಕಾಸು ನಿಧಿ ಪಾವತಿ ಪ್ರಕ್ರಿಯೆಯಿಂದ ನಿರ್ಬಂಧ ಹೇರಲ್ಪಟ್ಟ ಸಂಸ್ಥೆಗಳಿಗೆ ಮಾನವೀಯ ನೆರವು ಪಡೆಯುವುದಕ್ಕೆ ಅವಕಾಶ ನೀಡುವ  ಬಗ್ಗೆ ನಿರ್ಣಯದಲ್ಲಿ ಪ್ರಸ್ತಾವಿಸಲಾಗಿತ್ತು.
ಭಾರತವು ಪ್ರಸಕ್ತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಆವರ್ತನಾ ಅಧ್ಯಕ್ಷತೆಯನ್ನು ಹೊಂದಿದ್ದು, ನಿರ್ಣಯದ ಮೇಲಿನ ಮತದಾನಕ್ಕೆ ಗೈರುಹಾಜರಾದ ಏಕೈಕ ಸದಸ್ಯ ರಾಷ್ಟ್ರವಾಗಿದೆ. ಭದ್ರತಾ ಮಂಡಳಿಯ ಉಳಿದ ಎಲ್ಲಾ 14  ಸದಸ್ಯ ರಾಷ್ಟ್ರಗಳು ನಿರ್ಣಯದ ಪರವಾಗಿ ಮತದಾನ ಮಾಡಿದವು.

ನಿರ್ಣಯದ ಮೇಲಿನ ಮತದಾನಕ್ಕೆ ಗೈರುಹಾಜರಾಗುವ ತನ್ನ ದೇಶದ ನಡೆಯನ್ನು  ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಭೋಜ್ ಸಮರ್ಥಿಸಿಕೊಂಡಿದ್ದಾರೆ. ‘‘ ಮಾನವೀಯ ನೆರವು ಪೂರೈಕೆಗಾಗಿ ನೀಡುವ ಇಂತ ರಿಯಾಯಿತಿಗಳನ್ನು ಭಯೋತ್ಪಾದಕ ಗುಂಪುಗಳು ಸಂಪೂರ್ಣ ದುರುಪಯೋಗ ಪಡಿಸಿಕೊಂಡಿರುವ ಹಲವು ನಿದರ್ಶನಗಳಿವೆ. ಇಂತಹ ರಿಯಾಯಿತಿಗಳನ್ನು ಘೋಷಿಸುವುದರಿಂದ, 1267 ನಿರ್ಬಂಧಗಳ ಸಮಿತಿ ಮತ್ತಿತರ ವ್ಯವಸ್ಥೆಗಳ ಮೂಲಕ ಅವುಗಳ ಮೇಲೆ ಹೇರಲ್ಪಟ್ಟ ನಿರ್ಬಂಧಗಳನ್ನು ಅಣಕಿಸಿದಂತಾಗುತ್ತದೆ ಎಂದವರು ಹೇಳಿದ್ದಾರೆ.

ವಿಶ್ವಸಂಸ್ಥೆಯ 1267 ನಿರ್ಬಂಧಗಳ ಸಮಿತಿಯಡಿ ವಿಶ್ವಸಂಸ್ಥೆಯ ಯಾವುದೇ ಸದಸ್ಯ ರಾಷ್ಟ್ರವು ಓರ್ವ ವ್ಯಕ್ತಿ ಅಥವಾ ಒಂದು ಸಂಸ್ಥೆಯನ್ನು ಭಯೋತ್ಪಾದಕ ಹಾಗೂ ಭಯೋತ್ಪಾದಕ ಗುಂಪೆಂದು ಘೋಷಿಸುವ ಅಧಿಕಾರವನ್ನು ಹೊಂದಿದೆ.
ಮಾನವೀಯ ನೆರವನ್ನು ಪಡೆಯುವ ಸೋಗಿನಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುವುದಕ್ಕೆ ಭಯೋತ್ಪಾದಕ ಗುಂಪುಗಳಿಗೆ ಅವಕಾಶ ನೀಡಕೂಡದೆಂದು ಕಾಂಬೋಜ್ ಹೇಳಿದರು. ಇಂತಹ ವಿನಾಯಿತಿಗಳುನನ ಭಯೋತ್ಪಾದಕ ಗುಂಪುಗಳನ್ನು ಮುಖ್ಯವಾಹಿನಿಯೊಂದಿಗೆ ಸೇರಿಸಿಕೊಳ್ಳುವುದಕ್ಕೆ ಕಾರಣವಾಗಬಾರದು ಎಂದು ಕಾಂಬೋಜ್ ಅಭಿಪ್ರಾಯಿಸಿದರು.

‘‘ಭದ್ರತಾ ಮಂಡಳಿಯಲ್ಲಿ ಪಟ್ಟಿ ಮಾಡಲ್ಪಟ್ಟವು ಸೇರಿದಂತೆ ನಮ್ಮ ನೆರೆಹೊರೆಯಲ್ಲಿರುವ ಭಯೋತ್ಪಾದಕ ಗುಂಪುಗಳು ತಮ್ಮ ಮೇಲೆ ಹೇರಲಾದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಮಾನವೀಯ ಸಂಘಟನೆಗಳು ಹಾಗೂ ನಾಗರಿಕ ಸಂಘಟನೆಗಳ ಅವತಾರವನ್ನು ತಾಳಿರುವ ಹಲವು ದೃಷ್ಟಾಂತಗಳಿವೆ ’’ಎಂದು ಆಕೆ ತಿಳಿಸಿದರು.
ಇಂತಹ ನಿರ್ಣಯವನ್ನು ಅನುಷ್ಠಾನಕ್ಕೆ ತರುವಾಗ ಶ್ರದ್ಧೆ ಹಾಗೂ ಅತೀವ ಮುನ್ನೆಚ್ಚರಿಕೆಯನ್ನು  ಪಾಲಿಸಬೇಕೆಂದು ಭಾರತವು ಜಾಗತಿಕ ಸಮುದಾಯವನ್ನು ಆಗ್ರಹಿಸುತ್ತದ ಎಂದವರು ಹೇಳಿದರು.

Similar News