ನ್ಯಾಯಾಲಯದಲ್ಲಿ ಹಿನ್ನಡೆಯಾದರೂ ಒಬಿಸಿ ಗಳಿಗೆ ಮೀಸಲಾತಿ ನೀಡಲು ಬದ್ಧ ಎಂದ ಆದಿತ್ಯನಾಥ್‌

Update: 2022-12-27 12:44 GMT

ಲಕ್ನೋ: ಉತ್ತರ ಪ್ರದೇಶ ಸರಕಾರವು ನಗರ ಸ್ಥಳೀಯಾಡಳಿತ ಚುನಾವಣೆಗಳಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಕರಡು ಅಧಿಸೂಚನೆಯನ್ನು ಅಲಹಾಬಾದ್‌ ಹೈಕೋರ್ಟ್‌ ರದ್ದುಗೊಳಿಸಿ ಚುನಾವಣೆಯನ್ನು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸದೆಯೇ ನಡೆಸುವಂತೆ ಸೂಚನೆ ನೀಡಿದ ನಂತರ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌,  ತಮ್ಮ ಸರ್ಕಾರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಿದೆ ಹಾಗೂ ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯಂತೆ ಸಮೀಕ್ಷೆ ನಡೆಸಲಿದೆ ಎಂದಿದ್ದಾರೆ.

ಸಮೀಕ್ಷೆ ನಡೆಯದೆ ಹಾಗೂ ಮೀಸಲಾತಿ ಒದಗಿಸದೆ ಚುನಾವಣೆ ನಡೆಯದು ಹಾಗೂ ಅಗತ್ಯವಿದ್ದರೆ ಅಲಹಾಬಾದ್‌ ಹೈಕೋರ್ಟ್‌ ಆದೇಶದ ವಿರುದ್ಧ ತಮ್ಮ ಸರ್ಕಾರ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸುವುದು ಎಂದು  ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ರಾಜ್ಯದ 17 ಮುನಿಸಿಪಲ್‌ ಕಾರ್ಪೊರೇಷನ್‌ಗಳ ಮೇಯರ್‌ ಹುದ್ದೆಗಳಿಗೆ ಹಾಗೂ 200 ಮುನಿಸಿಪಲ್‌ ಕೌನ್ಸಿಲ್‌ಗಳ ಅಧ್ಯಕ್ಷರ ಹುದ್ದೆಗಳು ಹಾಗೂ 545 ನಗರ ಪಂಚಾಯತುಗಳ ಅಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ಘೋಷಿಸಿ ಸರ್ಕಾರ ಈ ತಿಂಗಳು ತಾತ್ಕಾಲಿಕ ಪಟ್ಟಿ ಬಿಡುಗಡೆಗೊಳಿಸಿತ್ತು.

ಸುಪ್ರೀಂ ಕೋರ್ಟ್‌ ಸೂಚಿಸಿದಂತೆ ಸಮೀಕ್ಷೆ ನಡೆಸದೆ ಮೀಸಲಾತಿ ಪಟ್ಟಿ ಪ್ರಕಟಿಸಿರುವುದು ವಿಪಕ್ಷ ಸಮಾಜವಾದಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿತ್ತು.

ಇಂದು ನ್ಯಾಯಮೂರ್ತಿಗಳಾದ ಡಿ ಕೆ ಉಪಾಧ್ಯಾಯ ಹಾಗೂ ಸೌರವ್‌ ಲವಾಣಿಯಾ ಅವರ ನೇತೃತ್ವದ ಅಲಹಾಬಾದ್‌ ಹೈಕೋರ್ಟಿನ್‌ ವಿಭಾಗೀಯ ಪೀಠ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಗಾಗಿ ಸರ್ಕಾರ ಹೊರಡಿಸಿದ್ದ ಕರಡು ಅಧಿಸೂಚನೆಯನ್ನು ರದ್ದುಗೊಳಿಸಿದೆ.

Similar News