ಮೂರು ಬಾರಿ ವಿಶ್ವಕಪ್ ವಿಜೇತ ಏಕೈಕ ಆಟಗಾರ ಪೀಲೆ ಇನ್ನು ನೆನಪು ಮಾತ್ರ

Update: 2022-12-30 09:15 GMT

ರಿಯೋ ಡಿ ಜನೈರೊ: ಕಡು ಬಡತನದಿಂದ ಆಧುನಿಕ ಇತಿಹಾಸದಲ್ಲಿ ಶ್ರೇಷ್ಠ ಹಾಗೂ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ, ಜಗತ್ತನ್ನೇ ಮೋಡಿ ಮಾಡಿದ ‘ಕಪ್ಪು ಮುತ್ತು’  ಬ್ರೆಝಿಲ್ ಫುಟ್ಬಾಲ್ ಮಾಂತ್ರಿಕ ಪೀಲೆ ಗುರುವಾರ ತಡರಾತ್ರಿ ಸಾವೊ ಪೌಲೊದಲ್ಲಿ 82 ನೇ ವಯಸ್ಸಿನಲ್ಲಿ ನಿಧನರಾದರು.

ಹದಗೆಡುತ್ತಿದ್ದ ಕ್ಯಾನ್ಸರ್  ಜೊತೆಗೆ ಹೋರಾಡುತ್ತಿದ್ದ ಲೆಜೆಂಡರಿ ಫುಟ್ಬಾಲ್ ಆಟಗಾರ ಪೀಲೆ  ಉಸಿರಾಟದ ಸಮಸ್ಯೆಯ ಕಾರಣಕ್ಕೆ ನವೆಂಬರ್ 29 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಸ್ಪತ್ರೆಯ ಹಾಸಿಗೆಯಿಂದಲೇ  ಖತರ್  ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಫಿಫಾ ವಿಶ್ವಕಪ್ ಸಂದರ್ಭದಲ್ಲಿ ಬ್ರೆಝಿಲ್ ತಂಡವನ್ನು ಹುರಿದುಂಬಿಸಿದ್ದರು.

ಪೀಲೆ ನಿಧನಕ್ಕೆ ಇಡೀ ಫುಟ್ಬಾಲ್ ಸಮುದಾಯ ಹಾಗೂ ಅವರ ಅಭಿಮಾನಿಗಳಿಂದ ಶ್ರದ್ಧಾಂಜಲಿಗಳ ಮಹಾಪೂರ ಹರಿದುಬಂದವು.

ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ   ಮೂರು ಬಾರಿ ಫಿಫಾ ವಿಶ್ವಕಪ್ ಗೆದ್ದ ಏಕೈಕ ಆಟಗಾರ ಪೀಲೆ ಅವರು ವಿಶ್ವ ದಾಖಲೆ 1,281 ಗೋಲುಗಳನ್ನು ಗಳಿಸಿದ್ದಾರೆ. 

ಅಮೋಘ  ಕೌಶಲ್ಯ ಹಾಗೂ  ಗೆಲುವಿನ ನಗುವಿನೊಂದಿಗೆ ಅವರು ಫುಟ್ಬಾಲ್ ಅನ್ನು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯನ್ನಾಗಿ ಮಾಡಲು ಸಹಾಯ ಮಾಡಿದರು. ತನ್ನ ಏಳು ದಶಕಗಳ ವೃತ್ತಿಜೀವನದಲ್ಲಿ ಪೋಪ್‌ಗಳು, ಅಧ್ಯಕ್ಷರು ಮತ್ತು ಹಾಲಿವುಡ್ ತಾರೆಗಳನ್ನು ಆಟಗಾರನಾಗಿ ಹಾಗೂ  ಕ್ರೀಡೆಯ ರಾಯಭಾರಿಯಾಗಿ ಮೋಡಿ ಮಾಡಿದರು.

ಪೀಲೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ ಅವರು ಅಕ್ಟೋಬರ್ 23, 1940 ರಂದು ಬ್ರೆಝಿಲಿಯನ್ ರಾಜ್ಯವಾದ ಮಿನಾಸ್ ಗೆರೈಸ್‌ನಲ್ಲಿರುವ ಟ್ರೆಸ್ ಕೊರಾಕೋಸ್‌ನಲ್ಲಿ ಜನಿಸಿದರು. ತಮ್ಮ ತಂದೆಯಿಂದ ಫುಟ್ಬಾಲ್ ನ ಮೊದಲ ಪಾಠವನ್ನು ಕಲಿತರು.

ಬ್ರೆಝಿಲ್ 3 ಬಾರಿ ವಿಶ್ವಕಪ್(1958, 1962 ಹಾಗೂ 1970)ಜಯಿಸಲು ಪೀಲೆ ಆಟವು ಪ್ರಮುಖವಾಗಿತ್ತು. ಬ್ರೆಝಿಲ್ ಪರವಾಗಿ ಅತ್ಯಂತ ಹೆಚ್ಚು ಗೋಲು ಗಳಿಸಿದ(71)ಅವರ ದಾಖಲೆಯನ್ನು ಇತ್ತೀಚೆಗೆ ನಡೆದ ವಿಶ್ವಕಪ್ ನಲ್ಲಿ ನೇಮರ್ ಸರಿಗಟ್ಟಿದ್ದರು.

1957ರಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಗೈದಿದ್ದ ಅವರು ವೃತ್ತಿಬದುಕಿನಲ್ಲಿ 1000ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ್ದರು. 1977ರಲ್ಲಿ ನಿವೃತ್ತಿಯಾಗಿದ್ದರು.

1958 ರಲ್ಲಿ ಬ್ರೆಝಿಲ್‌ನ ಚೊಚ್ಚಲ ಫಿಫಾ ವಿಶ್ವಕಪ್ ವಿಜಯೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಅವರು ಜಾಗತಿಕ ಸೂಪರ್‌ಸ್ಟಾರ್‌ ಸ್ಥಾನಮಾನ ಪಡೆದರು. ಚಿಕ್ಕ ವಯಸ್ಸಿನಲ್ಲಿಯೇ  ಪೀಲೆ ಅವರು ಫ್ರಾನ್ಸ್ ವಿರುದ್ಧದ ಸೆಮಿ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲು ಸಿಡಿಸಿದ್ದರು . ಆ ನಂತರ ಸ್ವೀಡನ್ ವಿರುದ್ಧದ ಫೈನಲ್‌ನಲ್ಲಿ ಅವಳಿ ಗೋಲು ಗಳಿಸಿದರು. ಈ ಮೂಲಕ ಬ್ರೆಝಿಲ್  ದಾಖಲೆಯ ಐದು ವಿಶ್ವ ಪ್ರಶಸ್ತಿಗಳ ಪೈಕಿ ಮೊದಲ ಪ್ರಶಸ್ತಿ ಜಯಿಸಲು ನೆರವಾಗಿದ್ದರು.

1962 ರಲ್ಲಿ ಬ್ರೆಝಿಲ್ ವಿಶ್ವಕಪ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ನೆರವಾಗಿದ್ದ ಪೀಲೆ 1970 ರಲ್ಲಿ ಮೂರನೇ ವಿಶ್ವಕಪ್  ಅನ್ನು ಗೆದ್ದುಕೊಂಡರು. 1970ರಲ್ಲಿ ಬ್ರೆಝಿಲ್ ತಂಡ  ಇಟಲಿಯನ್ನು ಫೈನಲ್‌ನಲ್ಲಿ ಸೋಲಿಸಿದಾಗ ಅದು ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಫುಟ್ಬಾಲ್ ವಿಶ್ವಕಪ್ ಆಗಿತ್ತು. ಪೀಲೆ ಅವರು ತಮ್ಮ ವಿಶ್ವಕಪ್ ವೃತ್ತಿಜೀವನದಲ್ಲಿ ಒಟ್ಟು ನಾಲ್ಕು ಪಂದ್ಯಾವಳಿಗಳಲ್ಲಿ ಆಡಿರುವ 14 ಪಂದ್ಯಗಳಲ್ಲಿ  12 ಗೋಲುಗಳನ್ನು ಗಳಿಸಿದ್ದರು,

ಪೀಲೆ ತನ್ನ ಜೀವಿತಾವಧಿಯಲ್ಲಿ 95 ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಬ್ರೆಝಿಲ್ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿದ್ದರು.  ಈ ತಿಂಗಳ ಆರಂಭದಲ್ಲಿ ನಡೆದ ವಿಶ್ವಕಪ್‌ನಲ್ಲಿ ನೇಮರ್ ಅವರು ಪೀಲೆ ದಾಖಲೆಯನ್ನು ಸರಿಗಟ್ಟಿದ್ದರು.

ಫಿಫಾ ದಿಂದ 'ದಿ ಗ್ರೇಟೆಸ್ಟ್' ಎಂದು  ಕರೆಯಲ್ಪಟ್ಟಿರುವ ಪೀಲೆ ಅವರು 1995-1998ರ ಅವಧಿಯಲ್ಲಿ ದೇಶದ ಕ್ರೀಡಾ ಸಚಿವರಾಗಿದ್ದರು.

Similar News