ಫುಟ್ಬಾಲ್‌ ದಂತ ಕತೆ ಪೀಲೆ ಅವರ ಕೆಲ ಅವಿಸ್ಮರಣೀಯ ದಾಖಲೆಗಳು

Update: 2022-12-30 12:31 GMT

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಫುಟ್ಬಾಲ್‌ ದಂತ ಕಥೆ ಪೀಲೆ ಸುದೀರ್ಘ ಅನಾರೋಗ್ಯದ ಬಳಿಕ ಗುರುವಾರ ನಿಧನರಾಗಿದ್ದಾರೆ.

ಅವರ ಕೆಲ ಅವಿಸ್ಮರಣೀಯ ದಾಖಲೆಗಳ ಕಿರುನೋಟ ಇಲ್ಲಿದೆ.

►ಪೀಲೆ ತಮ್ಮ ಫುಟ್ಬಾಲ್‌ ವೃತ್ತಿಜೀವನದಲ್ಲಿ ಮೂರು ಬಾರಿ ವಿಶ್ವ ಕಪ್‌ ಗಳಿಸಿದ ತಂಡದ ಆಟಗಾರರಾಗಿದ್ದರು. ಇದು ಓರ್ವ ಫುಟ್ಬಾಲ್‌ ಆಟಗಾರನ ಪಾಲಿಗೆ ಸಾರ್ವಕಾಲಿಕ ದಾಖಲೆ. ಬ್ರೆಝಿಲ್‌ ತಂಡ 1958, 1962 ಹಾಗೂ 1970 ರಲ್ಲಿ ವಿಶ್ವ ಕಪ್‌ ಗೆದ್ದಾಗ ಪೀಲೆ ಅದರ ಭಾಗವಾಗಿದ್ದರು. 1958 ರಲ್ಲಿ ಬ್ರೆಝಿಲ್‌ ವಿಶ್ವ ಕಪ್‌ ಗೆದ್ದಾಗ ಪೀಲೆ ಅವರ ವಯಸ್ಸು 17 ವರ್ಷ ಹಾಗೂ 249 ದಿನಗಳಾಗಿದ್ದವು. ವಿಶ್ವ ಕಪ್‌ ಗೆದ್ದ ತಂಡದ ಭಾಗವಾಗಿದ್ದ ಅತ್ಯಂತ ಕಿರಿಯ ಸದಸ್ಯ ಅವರಾಗಿದ್ದರು.

►1958 ಫುಟ್ಬಾಲ್‌ ವಿಶ್ವ ಕಪ್‌ನಲ್ಲಿ ಪೀಲೆ ಫ್ರಾನ್ಸ್‌ ವಿರುದ್ಧದ ಸೆಮಿ ಫೈನಲ್‌ನಲ್ಲಿ 23 ನಿಮಿಷದ ಹ್ಯಾಟ್ರಿಕ್‌ ಸಾಧಿಸಿದರು. ವಿಶ್ವ ಕಪ್‌ ಹ್ಯಾಟ್ರಿಕ್‌ ಗೋಲ್‌ ಬಾರಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆಯೂ ಪೀಲೆ ಅವರದ್ದಾಗಿತ್ತು.

►ಹದಿನೆಂಟು ವರ್ಷ ತುಂಬುವ ಮೊದಲೇ ಫಿಫಾ ವಿಶ್ವ ಕಪ್‌ನಲ್ಲಿ ಗೋಲ್‌ ಬಾರಿಸಿದ ಏಕೈಕ ಆಟಗಾರ ಪೀಲೆ ಅವರಾಗಿದ್ದರು. ಹದಿಹರೆಯದವರಾಗಿರುವಾಗಲೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 25 ಗೋಲ್‌ ಬಾರಿಸಿದ ಮೊದಲ ಫುಟ್ಬಾಲ್‌ ಆಟಗಾರ ಅವರಾಗಿದ್ದರು.

►ಪೀಲೆ 1957 ರಲ್ಲಿ  ಬ್ರೆಜಿಲ್‌ ಹಾಗೂ ಆರ್ಜೆಂಟಿನಾ ನಡುವಿನ ಪಂದ್ಯದಲ್ಲಿ ಗೋಲ್‌ ಬಾರಿಸಿದಾಗ  ಬ್ರೆಝಿಲ್‌ನ ರಾಷ್ಟ್ರೀಯ ಫುಟ್ಬಾಲ್‌ ತಂಡಕ್ಕೆ ಗೋಲ್‌ ಬಾರಿಸಿದ ಅತ್ಯಂತ ಕಿರಿಯ ಆಟಗಾರರಾಗಿದ್ದರು. ಈ ಗೋಲ್‌ ಬಾರಿಸಿದಾಗ ಪೀಲೆ ಅವರ ವಯಸ್ಸು 16 ವರ್ಷ ಹಾಗೂ 9 ತಿಂಗಳುಗಳು.

►ಬ್ರೆಝಿಲ್‌ ಕ್ಲಬ್‌ ಸಾಂಟೋಸ್‌ಗೆ ಗರಿಷ್ಠ ಗೋಲ್‌ ಬಾರಿಸಿದ ಆಟಗಾರರಾಗಿದ್ದಾರೆ ಪೀಲೆ,  ಒಟ್ಟು 659 ಪಂದ್ಯಗಳಲ್ಲಿ ಅವರು 643 ಗೋಲ್‌ ಬಾರಿಸಿದ್ದರು.

►ಪೀಲೆ ಬ್ರೆಝಿಲ್‌ನ ಜಂಟಿ-ಗರಿಷ್ಠ ಗೋಲ್‌ ಬಾರಿಸಿದವರಾಗಿದ್ದಾರೆ. ಸೆಲೆಕಾವೋ ತಂಡಕ್ಕಾಗಿ ಆಡಿದ 92 ಪಂದ್ಯಗಳಲ್ಲಿ ಅವರು 77 ಗೋಲ್‌ ಬಾರಿಸಿದ್ದರು. ಅವರ ಈ ಸಾಧನೆಯನ್ನು ತೀರಾ ಇತ್ತೀಚೆಗಷ್ಟೇ ನೇಮರ್‌ ಜೂನಿಯರ್‌ ಸರಿಗಟ್ಟಿದ್ದರು.

►ಗರಿಷ್ಠ ಹ್ಯಾಟ್ರಿಕ್‌ ಗೋಲ್‌ ಬಾರಿಸಿದ ಏಕೈಕ ಆಟಗಾರ ಪೀಲೆ ಆಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಅವರು 92 ಹ್ಯಾಟ್ರಿಕ್‌ ಗೋಲ್‌ ಬಾರಿಸಿದ್ದರು.

►ಫುಟ್ಬಾಲ್‌ ಇತಿಹಾಸದಲ್ಲಿಯೇ ಗರಿಷ್ಠ ಗೋಲ್‌ ಬಾರಿಸಿದ ಆಟಗಾರನೆಂದು ಗಿನ್ನೆಸ್‌ ವಿಶ್ವ ದಾಖಲೆ ಮತ್ತು ಫಿಫಾ ಇವುಗಳು ಪೀಲೆ ಅವರನ್ನು ಮಾನ್ಯ ಮಾಡಿವೆ. ಪೀಲೆ ಒಟ್ಟು 1363 ಪಂದ್ಯಗಳಲ್ಲಿ 1279 ಗೋಲುಗಳನ್ನು ಬಾರಿಸಿದ್ದರು ಈ ಗೋಲುಗಳಲ್ಲಿ ಸೌಹಾರ್ದ ಪಂದ್ಯಗಳು, ಹವ್ಯಾಸಿ ಪಂದ್ಯಗಳು ಮತ್ತು ಜೂನಿಯರ್‌ ನ್ಯಾಷನಲ್‌ ಗೇಮ್ಸ್‌ ಸಹಿತ ಇತರ ಪಂದ್ಯಗಳಲ್ಲಿ ಅವರು ಬಾರಿಸಿದ್ದರು.

►ಎರಡು ಕ್ಯಾಲೆಂಡರ್‌ ವರ್ಷಗಳಲ್ಲಿ ಪೀಲೆ 100 ಕ್ಕೂ ಅಧಿಕ ಗೋಲ್‌ ಬಾರಿಸಿದ್ದರು. 1959 ಕ್ಯಾಲೆಂಡರ್‌ ವರ್ಷದಲ್ಲಿ ಅವರು 127 ಗೋಲ್‌  ಹಾಗೂ 1961 ರಲ್ಲಿ 110 ಗೋಲ್‌ ಬಾರಿಸಿದ್ದರೆಂದು ಫಿಫಾ ಅಂಕಿಅಂಶಗಳು ತಿಳಿಸುತ್ತವೆ. ಈ ದಾಖಲೆಗಳ ಹತ್ತಿರಕ್ಕೂ ಇಲ್ಲಿಯ ತನಕ ಯಾವುದೇ ಆಟಗಾರ ತಲುಪಿಲ್ಲ. 

Similar News