×
Ad

ಅಪಘಾತದ ಬಳಿಕ ರಿಷಭ್ ಪಂತ್ ರನ್ನು ರಕ್ಷಿಸಿದ ಬಸ್ ಚಾಲಕನನ್ನು ಅಭಿನಂದಿಸಿದ ವಿವಿಎಸ್ ಲಕ್ಷ್ಮಣ್

Update: 2022-12-31 11:24 IST

ಹೊಸದಿಲ್ಲಿ: ದಿಲ್ಲಿಯಿಂದ ಡೆಹ್ರಾಡೂನ್‌ಗೆ ತಮ್ಮ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಶುಕ್ರವಾರ ಬೆಳಗ್ಗೆ ತೆರಳುತ್ತಿದ್ದಾಗ ಕ್ರಿಕೆಟಿಗ ರಿಷಬ್ ಪಂತ್ ಭೀಕರ ಅಪಘಾತಕ್ಕೀಡಾಗಿದ್ದರು. ಮರ್ಸಿಡಿಸ್ ಎಸ್‌ಯುವಿ ಅಪಘಾತಕ್ಕೀಡಾದ ನಂತರ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ರಕ್ಷಿಸಿದವರ  ಪೈಕಿ ಹರ್ಯಾಣ ರೋಡ್‌ವೇಸ್ ಬಸ್ ಚಾಲಕ ಸುಶೀಲ್ ಮಾನ್  ಪ್ರಮುಖರು.

ಗಾಯಗೊಂಡ ವ್ಯಕ್ತಿ ಯಾರೆಂದು ತನಗೆ ತಿಳಿದಿರಲಿಲ್ಲ ಹಾಗೂ  ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ್ದೆ ಎಂದು ಮಾನ್ ಹೇಳಿದರು.

ನಂತರ ಹರ್ಯಾಣ ರೋಡ್‌ವೇಸ್ ಸುಶೀಲ್ ಅವರನ್ನು ಪ್ರಶಂಸಾ ಪತ್ರ ಮತ್ತು ಶೀಲ್ಡ್ ಅನ್ನು ನೀಡಿ ಸನ್ಮಾನಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಭಾರತದ ಮಾಜಿ ಬ್ಯಾಟರ್ ಹಾಗೂ  ಪ್ರಸ್ತುತ NCA ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಸುಶೀಲ್ ಅವರನ್ನು ಶ್ಲಾಘಿಸಿದರು. "ಉರಿಯುತ್ತಿರುವ ಕಾರಿನಿಂದ ರಿಷಭ್ ಪಂತ್ ಅವರನ್ನು ಕರೆದೊಯ್ದು, ಬೆಡ್‌ಶೀಟ್ ಸುತ್ತಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ ಹರ್ಯಾಣ ರೋಡ್‌ವೇಸ್ ಡ್ರೈವರ್  ಸುಶೀಲ್ ಕುಮಾರ್ ಅವರಿಗೆ ಕೃತಜ್ಞತೆಗಳು. ನಿಮ್ಮ ನಿಸ್ವಾರ್ಥ ಸೇವೆಗಾಗಿ ನಾವು ನಿಮಗೆ ತುಂಬಾ ಋಣಿಯಾಗಿದ್ದೇವೆ, ಸುಶೀಲ್ ಜೀ  ರಿಯಲ್ ಹೀರೋ" ಎಂದು ಲಕ್ಷ್ಮಣ್ ಟ್ವೀಟ್ ನಲ್ಲಿ  ಬರೆದಿದ್ದಾರೆ.

"ರಿಷಭ್‌ಗೆ ಚಾಲಕ ಸುಶೀಲ್ ಜೊತೆಗೆ ಸಹಾಯ ಮಾಡಿದ ಬಸ್ ಕಂಡಕ್ಟರ್ ಪರಮ್‌ಜಿತ್ ಅವರನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗಿದೆ. ಉತ್ತಮ ಮನಸ್ಸು ಹಾಗೂ  ವಿಶಾಲ ಹೃದಯ ಹೊಂದಿರುವ ಈ ನಿಸ್ವಾರ್ಥ ವ್ಯಕ್ತಿಗಳಿಗೆ ತುಂಬಾ ಕೃತಜ್ಞರಾಗಿರಬೇಕು. ಅವರಿಗೆ ಹಾಗೂ  ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಗಳು" ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

Similar News