×
Ad

ಛತ್ತೀಸ್‌ಗಢ ಚರ್ಚ್ ದಾಳಿ ಪ್ರಕರಣ: ಬಿಜೆಪಿ ನಾಯಕ ಸೇರಿ ಐವರ ಬಂಧನ

Update: 2023-01-04 23:54 IST

ರಾಯಪುರ, ಜ. 4: ಛತ್ತೀಸ್ಗಢ ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿರುವ ಚರ್ಚೊಂದರ ಮೇಲೆ ಜನವರಿ 2ರಂದು ನಡೆದ ಗುಂಪು ದಾಳಿಗೆ ಸಂಬಂಧಿಸಿ ಬಿಜೆಪಿ ನಾಯಕನೊಬ್ಬನ ಸಹಿತ ಐವರನ್ನು ರಾಜ್ಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಬಿಜೆಪಿ ನಾಯಕ ರೂಪ್ಸಾಯಿ ಸಲಾಮ್, ಪವನ್ಕುಮಾರ್ ನಾಗ್, ಅತುಲ್ ನೇತಮ್, ಅಂಕಿತ್ ನಂದಿ ಮತ್ತು ದೋಮೇಂದ್ರ ಯಾದವ್ ಎಂಬುದಾಗಿ ಗುರುತಿಸಲಾಗಿದೆ.

ನಾರಾಯಣಪುರ ಜಿಲ್ಲೆಯ ಎಡ್ಕ ಗ್ರಾಮದಲ್ಲಿ ಅಕ್ರಮ ಧಾರ್ಮಿಕ ಮತಾಂತರಗಳು ನಡೆಯುತ್ತಿವೆ ಎಂದು ಆರೋಪಿಸಿ ಆದಿವಾಸಿಗಳ ಗುಂಪೊಂದು ಪ್ರತಿಭಟನೆ ನಡೆಸಿದ ಬಳಿಕ, ಜನವರಿ 2ರಂದು ಗುಂಪೊಂದು ಚರ್ಚ್ ಮೇಲೆ ದಾಳಿ ನಡೆಸಿತ್ತು. ಆದಿವಾಸಿಗಳ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 8 ಮಂದಿ ಗಾಯಗೊಂಡ ಒಂದು ದಿನದ ಬಳಿಕ ಈ ದಾಳಿ ನಡೆದಿದೆ.
ಸೋಮವಾರ ನಡೆದ ದಾಳಿಯಲ್ಲಿ, ಜಿಲ್ಲಾ ಪೊಲೀಸ್ ಮುಖ್ಯಸ್ಥ ಸದಾನಂದ ಕುಮಾರ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.ಈ ನಡುವೆ, ನಾರಾಯಣಪುರಕ್ಕೆ ಹೋಗುವುದರಿಂದ ಇಬ್ಬರು ಬಿಜೆಪಿ ಸಂಸದರು ಮತ್ತು ಓರ್ವ ಶಾಸಕನನ್ನು ಪೊಲೀಸರು ಭದ್ರತೆಯ ಕಾರಣ ನೀಡಿ ತಡೆದಿದ್ದಾರೆ.

Similar News