‘ನಂದಿನಿ’ ಮತ್ತು ‘ಅಮುಲ್’ಗಳ ಮೇಲೆ ಅಮಿತ್ ಶಾ ದಾಳಿ!

ಸಹಕಾರಿ ಕ್ಷೇತ್ರದ ಕೇಂದ್ರೀಕರಣ ಹಾಗೂ ಕಾರ್ಪೊರೇಟೀಕರಣ

Update: 2023-01-05 03:15 GMT

ಭಾಗ -2

ಸಂಘಪರಿವಾರದ ‘ಸಹಕಾರ’

ಹಾಗೆ ನೋಡಿದರೆ ಈ ಬಗ್ಗೆ ಸರಕಾರ ಸಮಾಲೋಚನೆ ಮಾಡಿದ್ದು ಆರೆಸ್ಸೆಸ್‌ನ ಅಂಗಸಂಸ್ಥೆಯಾದ ‘ಸಹಕಾರ ಭಾರತಿ’ಯ ಜೊತೆಗೆ ಮಾತ್ರ. ನೋಟು ನಿಷೇಧ ಮಾಡುವಾಗಲೂ ಮೋದಿ ಸರಕಾರ ಆದೇಶ ಪಡೆದುಕೊಂಡಿದ್ದು ಆರೆಸ್ಸೆಸ್‌ನಿಂದಲೇ ವಿನಾ ಆರ್‌ಬಿಐನಿಂದಲ್ಲ. 2019ರಿಂದಲೂ ಕೃಷಿ ಸಚಿವರಾದ ತೋಮರ್ ಅವರು ಸಹಕಾರ ಭಾರತಿಯ ಪದಾಧಿಕಾರಿಗಳ ಜೊತೆ ತಮ್ಮ ಅಧೀನದಲ್ಲಿರುವ ಸಹಕಾರ ಇಲಾಖೆಯ ಮಾರ್ಪಾಡಿನ ಬಗ್ಗೆ ಹಲವಾರು ಸುತ್ತು ದೀರ್ಘ ಸಮಾಲೋಚನೆಯನ್ನು ಮಾಡುತ್ತಲೇ ಬಂದಿದ್ದಾರೆ. ಆ ಸಮಾಲೋಚನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಹಕಾರ ಭಾರತಿಯ ಮುಖ್ಯಸ್ಥರೂ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಾಮ ನಿರ್ದೇಶಿತ ಪಾಕ್ಷಿಕ ಸದಸ್ಯರೂ ಆಗಿರುವ ಸತೀಶ್ ಮರಾಥೆಯವರ ಪ್ರಕಾರ ಈ ಹೊಸ ಇಲಾಖೆಯ ಸೃಷ್ಟಿ ಮತ್ತು ಉದ್ದೇಶಗಳೆಲ್ಲಾ ಸಹಕಾರ ಭಾರತಿಯ ಸಲಹೆಯಂತೇ ರೂಪಿತವಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು ‘‘ಇಡೀ ದೇಶದ ಎಲ್ಲಾ ಸಹಕಾರಿಗಳನ್ನು ಒಂದೇ ರೀತಿಯ ನಿಯಂತ್ರಣಕ್ಕೆ ತರುವಂತಹ ಕೇಂದ್ರೀಯ ಕಾಯ್ದೆ’’ ಮತ್ತೊಂದು ‘‘ಈ ಸಹಕಾರಿಗಳಿಗೂ ಸುಲಭವಾಗಿ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಕಾಯ್ದೆಗಳ ಉದಾರೀಕರಣ’’. ಇವೆರಡೂ ಈ ಹೊಸ ಇಲಾಖೆಯ ಪ್ರಮುಖ ಕಾರ್ಯಭಾರವಾಗಲಿದೆಯೆಂದು ಈ ಇಲಾಖೆಯ ಪ್ರಪ್ರಥಮ ಮಂತ್ರಿಯಾದ ಅಮಿತ್ ಶಾ ಅವರು ಕೂಡಾ ಘೋಷಿಸಿದ್ದಾರೆ. ಅಮುಲ್ ಮತ್ತು ನಂದಿನಿ ಜಂಟಿ ಯೋಜನೆ ಆ ಕಾರ್ಯತಂತ್ರದ ಮುಂದುವರಿಕೆ ಸಹಕಾರಿಗಳ ಮೇಲೆ ಸವಾರಿಗಾಗಿ ಹೊಸ ಮಸೂದೆ!

ಸಹಕಾರಿ ಕ್ಷೇತ್ರದ ಮೇಲೆ ಕೇಂದ್ರದ ಸಂಪೂರ್ಣ ಹಿಡಿತವನ್ನು ಸಾಧಿಸುವ ಸಲುವಾಗಿಯೇ ಇದೇ ಡಿಸೆಂಬರ್ 7ರಂದು ಸಹಕಾರಿ ಮಂತ್ರಿಯೂ ಆಗಿರುವ ಅಮಿತ್ ಶಾ ಅವರು ‘ಬಹುರಾಜ್ಯ ಸಹಕಾರಿ ಸಂಸ್ಥೆಗಳ ತಿದ್ದುಪಡಿ ಮಸೂದೆ’ಯನ್ನು ಮಂಡಿಸಿದ್ದಾರೆ. ಅದರ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ವಿರೋಧವನ್ನು ತೋರಿ ಅದನ್ನು ಸದನ ಸಮಿತಿಯ ಅಧ್ಯಯನಕ್ಕೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರಸ್ತಾವಿತ ಮಸೂದೆಯ ಪ್ರಕಾರ:

ಅ) ಬಹುರಾಜ್ಯ ಸಹಕಾರಿಗಳ ಚುನಾವಣೆಯ ಉಸ್ತುವಾರಿ ಸಂಪೂರ್ಣ ಕೇಂದ್ರದ್ದು.

ಆ) ಬಹುರಾಜ್ಯ ಸಹಕಾರಿಯಲ್ಲಿ ಆಡಳಿತ ಮಂಡಳಿಯಲ್ಲಿ ಕೇಂದ್ರದಿಂದ ನಾಮ ನಿರ್ದೇಶನಗೊಂಡ ಕನಿಷ್ಠ ಮೂವರು ಸದಸ್ಯರಿರುತ್ತಾರೆ.

ಇ) ಒಂದು ಸಹಕಾರಿ ಸಂಸ್ಥೆಯನ್ನು ಬರ್ಖಾಸ್ತು ಮಾಡುವ ಅಥವಾ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ಕೇಂದ್ರದ್ದು.

ಈ) ಅದರ ಹಣಕಾಸಿನ ಸಹಕಾರ ಮತ್ತು ಆಡಿಟಿಂಗ್ ಹಾಗೂ ಶಿಸ್ತುಕ್ರಮ ಇತ್ಯಾದಿಗಳ ಜವಾಬ್ದಾರಿ ಕೇಂದ್ರದ್ದು. ಅರ್ಥಾತ್ ಒಂದು ಬಹುರಾಜ್ಯ ವಹಿವಾಟಿರುವ ಸಹಕಾರಿಯ ಮೇಲೆ ಅದರ ಮೂಲ ರಾಜ್ಯಗಳ ಅಧಿಕಾರ ಸಂಪೂರ್ಣವಾಗಿ ಇಲ್ಲವಾಗಿ ಕೇಂದ್ರದ್ದೇ ಅಧಿಕಾರವಾಗುತ್ತದೆ. ಅಂದರೆ ಒಂದು ವೇಳೆ ಅಮುಲ್- ನಂದಿನಿ ವಿಲೀನಗೊಂಡು ಒಂದು ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿ ರೂಪುಗೊಂಡರೆ ಅದರ ಸಂಪೂರ್ಣ ಉಸ್ತುವಾರಿ ಅಧಿಕಾರ ಅಮಿತ್ ಶಾ ನೇತೃತ್ವದ ಕೇಂದ್ರದ ಸಹಕಾರಿ ಇಲಾಖೆಯದ್ದೇ ಆಗುತ್ತದೆ. ಈಗಾಗಲೇ ಅಮುಲ್ ಸಂಸ್ಥೆ ಇತರ ರಾಜ್ಯಗಳ ಸಹಕಾರಿಗಳೊಡನೆ ಸೇರಿಕೊಂಡು ಆ ಬಗೆಯ ಬಹುರಾಜ್ಯ ಸಹಕಾರಿ ಸ್ಥಾಪಿಸಿದೆ. ಅದರ ಮುಂದಿನ ಹೆಜ್ಜೆ ನಂದಿನಿ ಮತ್ತು ಕೆಎಂಎಫ್ ಆಗಿದೆ.

ಯಾರ ‘ಸಹಕಾರ’ದಿಂದ ಯಾರ ‘ಸಮೃದ್ಧಿ’ಯಾಗಲಿದೆ?

ಮೋದಿ ಸರಕಾರ ಹೊಸ ಸಹಕಾರಿ ಇಲಾಖೆಯ ಧ್ಯೇಯ ವಾಕ್ಯವನ್ನು ‘‘ಸಹಕಾರದಿಂದ ಸಮೃದ್ಧಿ’’ ಎಂದು ಘೋಷಿಸಿದೆ. ಆದರೆ ಕೇಳಬೇಕಿರುವ ಪ್ರಶ್ನೆ ಯಾರ ಸಹಕಾರದಿಂದ ಯಾರ ಸಮೃದ್ಧಿ ಎಂಬುದು. ಏಕೆಂದರೆ ಸಹಕಾರಿ ಕ್ಷೇತ್ರದಲ್ಲಿ ಮೋದಿ ಸರಕಾರ ತರಬೇಕೆಂದಿರುವ ಬದಲಾವಣೆಯಲ್ಲಿ ಒಂದು ಭಾಗ ಕೇಂದ್ರೀಕರಣದ್ದಾದರೆ ಮತ್ತೊಂದು ಭಾಗ ಕಾರ್ಪೊರೇಟೀಕರಣದ್ದು ಹಾಗೂ ಹಿಂದುತ್ವ ರಾಜಕಾರಣದ ಭಾಗವಾಗಿ ತನ್ನ ಬೆಂಬಲಿಗ ಸಮೂಹವನ್ನು ಆರ್ಥಿಕವಾಗಿ-ರಾಜಕೀಯವಾಗಿ ಸದೃಢೀಕರಿಸಿಕೊಳ್ಳುವುದಾಗಿದೆ. ಅಮಿತ್ ಶಾ ಅವರು ಹೇಳಿರುವಂತೆ ಹಾಲು ಮತ್ತು ಹಾಲು ಉತ್ಪನ್ನಗಳ ವಿಷಯದಲ್ಲಿ ಭಾರತಕ್ಕೆ ಬರಲಿರುವ ದಿನಗಳಲ್ಲಿ ಬಹುದೊಡ್ಡ ರಫ್ತು ಮಾರುಕಟ್ಟೆ ತೆರೆದುಕೊಳ್ಳಲಿದೆ. ನಮ್ಮ ಹಾಲಿಗೆ ಭೂತಾನ್, ನೇಪಾಳವನ್ನೂ ಒಳಗೊಂಡಂತೆ ದಕ್ಷಿಣ ಏಶ್ಯದಲ್ಲಿ ಮತ್ತು ಪೂರ್ವ ಏಶ್ಯದಲ್ಲಿ ಬಹು ದೊಡ್ಡ ಮಾರುಕಟ್ಟೆಯಿದೆ.

ಅದರ ಲಾಭವನ್ನು ಪಡೆದುಕೊಳ್ಳಬೇಕೆಂದರೆ ಈಗ ಯುರೋಪಿನ ದೊಡ್ದ ದೊಡ್ಡ ಸಹಕಾರಿ ಕ್ಷೇತ್ರಗಳಲ್ಲಿ ಮಾಡಿಕೊಳ್ಳುತ್ತಿರುವ ಬದಲಾವಣೆಯಂತೆ ಕಾರ್ಪೊರೇಟ್ ಜ್ಞಾನ, ಕಾರ್ಪೊರೇಟ್ ಸಮಾಲೋಚನೆ ಮತ್ತು ಕಾರ್ಪೊರೇಟ್ ಬಂಡವಾಳದ ಸಹಾಯವನ್ನು ಪಡೆದುಕೊಳ್ಳಬೇಕು. ಈಗಾಗಲೇ ಅದನ್ನು ಕೆಲವು ರಾಜ್ಯಗಳ ಕೃಷಿ ಸಹಕಾರಿಗಳಲ್ಲಿ ಜಾರಿ ಮಾಡಲಾಗುತ್ತಿದೆ. ಅದನ್ನೇ ಹಾಲು ಕ್ಷೇತ್ರಕ್ಕೂ ವಿಸ್ತರಿಸುವ ಯೋಜನೆಯನ್ನು ನಿಧಾನವಾಗಿ ಒಪ್ಪಿಸಲಾಗುತ್ತಿದೆ. ಈ ಹೊಸ ಸಚಿವಾಲಯಕ್ಕೆ ಸಹಕಾರಿ ಕ್ಷೇತ್ರವನ್ನು ಹಂತಹಂತವಾಗಿ ದೊಡ್ಡ ಕಾರ್ಪೊರೇಟ್ ಆರ್ಥಿಕತೆಗೆ ಪೂರಕವಾಗಿ- ಪ್ರತಿಸ್ಪರ್ಧಿಯಾಗಲ್ಲ- ಅಭಿವೃದ್ಧಿಪಡಿಸುವ ಉದ್ದೇಶವಿದೆ. ಅದು ಸಹಕಾರಿಗಳಿಗೆ ‘‘ಸುಲಭವಾಗಿ ವ್ಯವಹಾರ ನಡೆಸಲು ಪೂರಕವಾದ ಔದ್ಯಮಿಕ ಚೌಕಟ್ಟನ್ನು ಒದಗಿಸುವುದು’’ ಎಂಬ ಘೋಷಣೆಯಲ್ಲಿ ಸ್ಪಷ್ಟವಾಗುತ್ತದೆ. ಇದಲ್ಲದೆ ಸಹಕಾರಿ ಕ್ಷೇತ್ರವನ್ನು ವಿಮೆ, ವಿದ್ಯುತ್ ವಿತರಣೆ, ಇನ್ನಿತರ ಕ್ಷೇತ್ರಗಳಿಗೂ ವಿಸ್ತರಿಸುವ ಮಹದಾಶಯ ಈ ಹೊಸ ಸಚಿವಾಲಯಕ್ಕಿದೆ. ಅದಕ್ಕಾಗಿ ಬೇಕಿರುವ ಬಂಡವಾಳವನ್ನು ಮಾರುಕಟ್ಟೆಯಿಂದ ಸಂಗ್ರಹಿಸಲು ಸ್ಟಾಕ್ ಮಾರ್ಕೆಟ್ ಪ್ರವೇಶಿಸಲು ಬೇಕಿರುವ ತಿದ್ದುಪಡಿಗಳೇ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ನ ತಾತ್ಪರ್ಯ. ಅಲ್ಲಿಗೆ ಯಶಸ್ವಿ ಸಹಕಾರಿಯನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸುವ ಕಾರ್ಪೊರೇಟ್ ಬಂಡವಾಳಿಗರೇ ಸಹಕಾರಿಗಳ ಅಸಲೀ ಮಾಲಕರು ಆಗುವ ಹಿಂಬಾಗಿಲು ತೆರೆಯುತ್ತದೆ. ಈಗಾಗಲೇ ಸಾಕಷ್ಟು ಚರ್ಚೆಯಾಗಿರುವಂತೆ ಸಹಕಾರಿ ಕ್ಷೇತ್ರವು ಗ್ರಾಮೀಣ ಅರ್ಥಿಕತೆಯಲ್ಲಿ ಅತ್ಯಂತ ಪ್ರಭಾವಿ ಸಂಸ್ಥೆಯಾಗಿದ್ದು ರೈತರ ಬದುಕನ್ನು ಹಾಗೂ ಗ್ರಾಮೀಣ ರಾಜಕೀಯವನ್ನು ನಿಯಂತ್ರಿಸುತ್ತದೆ. ಅಷ್ಟು ಮಾತ್ರವಲ್ಲ. ಗ್ರಾಮೀಣ ಪ್ರದೇಶದ ಪ್ರಭಾವಿ ಸಮುದಾಯಗಳ ಪ್ರಬಲ ವರ್ಗಗಳಿಗೆ ಆ ಮುಂದಿನ ರಾಜಕೀಯಕ್ಕೂ ಚಿಮ್ಮು ಹಲಗೆಯಾಗಿಯೂ ಕೆಲಸ ಮಾಡುತ್ತದೆ.

ಸಹಕಾರ ಕ್ಷೇತ್ರ ಪ್ರಬಲವಾಗಿರುವ ಮಹಾರಾಷ್ಟ್ರ, ಕೇರಳ, ಕರ್ನಾಟಕ, ಗುಜರಾತ್ ಇನ್ನಿತರ ರಾಜ್ಯಗಳಲ್ಲಿ ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವವರು ರಾಜ್ಯದ ರಾಜಕಾರಣದ ಮೇಲೆ ಹಿಡಿತ ಸಾಧಿಸುತ್ತಾ ಬಂದಿದ್ದಾರೆ. ಸಹಕಾರಿ ಕ್ಷೇತ್ರ ದುರ್ಬಲ ಸಮುದಾಯಗಳಿಗೆ ಕೆಲವು ಆರ್ಥಿಕ ಅನುಕೂಲಗಳನ್ನು ಮಾಡಿಕೊಟ್ಟಿದ್ದರೂ ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ, ಸಾಮಾಜಿಕ-ಆರ್ಥಿಕ ಅಧಿಕಾರ ರಚನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಈ ಸಾಮಾಜಿಕ ಸ್ಥರಗಳೇ ಸಾಮಾಜಿಕ ನೆಲೆಗಳೂ ಆಗಿವೆ. ಮೋದಿ ಸರಕಾರದ ಹೊಸ ಸಚಿವಾಲಯವು ಇವನ್ನು ‘‘ನಿಜಕ್ಕೂ ಜನರ ಸಹಕಾರಿ ಚಳವಳಿಯ ಕ್ಷೇತ್ರವನ್ನಾಗಿ ಮಾಡುವ ಉದ್ದೇಶ’’ವನ್ನು ಘೋಷಿಸಿದ್ದರೂ ಅದರ ಮೂಲ ಉದ್ದೇಶ ಈಗಿರುವ ಗ್ರಾಮೀಣ ಸಮೀಕರಣವನ್ನು ಮತ್ತಷ್ಟು ಗಟ್ಟಿಗೊಳಿಸಿ ತನ್ನೆಡೆಗೆ ಒಲಿಸಿಕೊಳ್ಳುವುದೇ ವಿನಾ ಅದನ್ನು ಬದಲಿಸುವುದೇನಲ್ಲ. ಹಾಲಿ ಸಹಕಾರಿಗಳು ಬಿಜೆಪಿಯೇತರ ರಾಜಕೀಯಕ್ಕೊಳಗಾಗಿದ್ದಾರೆ ಎಂಬುದಷ್ಟೆ ಅದರ ಇಂಗಿತ. ಹೊಸ ಸಚಿವಾಲಯವು ಹೊಸ ತಿದ್ದುಪಡಿಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದರೆ ಈ ಸಹಕಾರಿಗಳ ಹಣದ ಹರಿವು ಹಾಗೂ ಆಡಳಿತಗಳ ಮೇಲೆ ಕೇಂದ್ರೀಯವಾಗಿ ನಿಯಂತ್ರಣ ಸಾಧಿಸಬಹುದು ಅಥವಾ ಪೂರಕ ರಾಜಕೀಯ ಸಂದರ್ಭವೇ ಇದ್ದರೆ ಪ್ರೋತ್ಸಾಹಿಸಬಹುದು. ಅರ್ಥಾತ್ ಸಾಮ, ದಂಡ ನೀತಿಗಳ ಮೂಲಕ ತನ್ನೆಡೆಗೆ ಒಲಿಸಿಕೊಳ್ಳಬಹುದು. ಇದು ತತ್ ಕ್ಷಣದ ರಾಜಕೀಯ ಪ್ರಯೋಜನ. ತಾತ್ಪರ್ಯವಿಷ್ಟೆ.

ಸಹಕಾರಿ ಕ್ಷೇತ್ರದ ಬಿಜೆಪೀಕರಣ

ಮತ್ತು ಕಾರ್ಪೊರೇಟೀಕರಣ ಇದು ಇಂದಿನ ಬಂಡವಾಳಶಾಹಿ ಜಾಗತೀಕರಣದ ಕಾಲಘಟ್ಟದಲ್ಲಿ ಜಗತ್ತಿನೆಲ್ಲೆಡೆ ನಡೆಯುತ್ತಿರುವ ಪ್ರಕ್ರಿಯೆ. ಬಲವಾದ ಸಹಕಾರಿ ರಚನೆಗಳುಳ್ಳ ಅಮುಲ್‌ನಂತಹ ಯಶಸ್ವಿ ಸಹಕಾರಿಗಳು ಸಹ ಜಗತ್ತಿನೆಲ್ಲೆಡೆ ಕಾರ್ಪೊರೇಟ್ ಬಂಡವಾಳಶಾಹಿ ವಲಯ ಸೃಷ್ಟಿಸಿದ ಉಪಭೋಗಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತವೆ. ಇಂತಹ ಸಹಕಾರಿಗಳ ಮಾರುಕಟ್ಟೆ ಯಶಸ್ಸು ಸಹ ಬಂಡವಾಳಶಾಹಿ ಉಪಭೋಗಿತನದ ನಿರಂತರ ಬೆಳವಣಿಗೆಯ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಅವುಗಳು ಸಹ ಕಾರ್ಪೊರೇಟ್ ಆರ್ಥಿಕತೆಗೆ ಪೂರಕವಾದ ಮತ್ತೊಂದು ವಿಭಾಗವಾಗುತ್ತವೆ. ಹಾಗೆ ನೋಡಿದರೆ ಸಹಕಾರಿ ಕ್ಷೇತ್ರವನ್ನು ಬಂಡವಾಳವಾದ ಹಾಗೂ ಸಮಾಜವಾದಗಳ, ಖಾಸಗಿ ಮತ್ತು ಸರಕಾರಿ ಉದ್ಯಮಗಳ ಬೈನರಿಗಳಿಗೆ ಹೊರತಾದ ಮೂರನೇ ಜನವಲಯವೆಂದು ಬಣ್ಣಿಸಲಾಗುತ್ತಿತ್ತು. ಆದರೆ ಒಟ್ಟಾರೆಯಾಗಿ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯೇ ಆರ್ಥಿಕತೆ ಮತ್ತು ರಾಜಕೀಯವನ್ನು ಆವರಿಸಿಕೊಂಡಿರುವಾಗ ಸಹಕಾರಿ ಕ್ಷೇತ್ರವೊಂದು ಮಾತ್ರ ಜನಾರ್ಥಿಕತೆಯ ದ್ವೀಪವಾಗುಳಿಯಲಾರದು. ಒಂದೋ ಅವು ಕೊಪ್ಪದ ಸಹಕಾರಿ ಸಾರಿಗೆಯ ರೀತಿ ಬಂಡವಾಳದ ರಕ್ತಹೀನತೆಯಿಂದ ನಿಧಾನವಾಗಿ ಸಾಯುವಂತೆ ಸರಕಾರವೇ ನೋಡಿಕೊಳ್ಳುತ್ತದೆ. ಇಲ್ಲವೇ ಈ ಸಹಕಾರಿಗಳೇ ನಿಧಾನವಾಗಿ ಕಾರ್ಪೊರೇಟ್ ಆರ್ಥಿಕತೆಯ ಉತ್ಪಾದನೆ ಅಥವಾ ಮಾರುಕಟ್ಟೆ ವಲಯಗಳ ಅಗತ್ಯಗಳನ್ನು ಪೂರೈಸುವ ಮಿರರ್ ಇಮೇಜುಗಳಾಗಿ ಬದಲಾಯಿಸುತ್ತದೆ. ಒಂದು ಬಲವಾದ ಸಮಾಜಮುಖಿ ರಾಜಕೀಯ-ಅರ್ಥಿಕ ಸನ್ನಿವೇಶದಲ್ಲಿ ಮಾತ್ರ ಸಹಕಾರಿಗಳು ಜನರಿಗೆ ಸೇವೆ ಸಲ್ಲಿಸುತ್ತವೆ. ಇಲ್ಲದಿದ್ದಲ್ಲಿ ಕಾರ್ಪೊರೇಟುಗಳ ಮಧ್ಯವರ್ತಿಗಳಾಗುತ್ತವೆ. ನಮ್ಮಲ್ಲಿ ಸಹಕಾರಿ ಕ್ಷೇತ್ರಗಳ ಕಾರ್ಪೊರೇಟೀಕರಣ ಘೋಷಿತವಾಗಿ ಹಾಗೂ ತ್ವರಿತವಾಗಿ ನಡೆಯುತ್ತಿದೆ. ಅಷ್ಟೇ ವ್ಯತ್ಯಾಸ. ಅಮುಲ್ ಮತ್ತು ನಂದಿನಿಯ ಜಂಟಿ ಕಾರ್ಯಯೋಜನೆಯ ಘೋಷಣೆ ಹಿಂದೆ ಇರುವ ಹುನ್ನಾರವಿದು. ಇದನ್ನು ಫಲಿಸಲು ಕರ್ನಾಟಕದ ರೈತಾಪಿ ಬಿಡಬಾರದು. ಆದರೆ ಹಿಂದುತ್ವ, ಕಾರ್ಪೊರೇಟೀಕರಣ ಮತ್ತು ಕೇಂದ್ರೀಕರಣದ ದಾಳಿಗಳಿಂದ ಕರ್ನಾಟಕವನ್ನು ರಕ್ಷಿಸಿಕೊಳ್ಳದೆ ಅಮುಲ್ ದಾಳಿಯಿಂದ ನಂದಿನಿಯನ್ನು ರಕ್ಷಿಸಿಕೊಳ್ಳಬಹುದೇ?

Similar News