ಜೋಶಿಮಠದ ಹಾದಿಯಲ್ಲಿ...!

Update: 2023-01-13 18:34 GMT

ಮಾನ್ಯರೇ,

ಪ್ರಕೃತಿ ಸೌಂದರ್ಯದಿಂದ ಕಣ್ಮನ ಸೆಳೆಯುತ್ತಿದ್ದ ಮೈಸೂರಿನ ಚಾಮುಂಡಿ ಬೆಟ್ಟ ಕಳೆದ ವರ್ಷದಲ್ಲಿಯೇ ಮೂರುಬಾರಿ ಕುಸಿದು ಮೈಸೂರಿಗರಲ್ಲಿ ಭಾರೀ ಆತಂಕವನ್ನುಂಟು ಮಾಡಿಬಿಟ್ಟಿದೆ. ಇಷ್ಟೆಲ್ಲಕ್ಕೂ ಕಾರಣ ಮನುಷ್ಯರ ದುರಾಸೆಯ ಫಲ. ಅಭಿವೃದ್ಧಿಯ ಹೆಸರಲ್ಲಿ ಬೆಟ್ಟಕಡಿದು ಕಟ್ಟಡಗಳನ್ನು ನಿರ್ಮಿಸಿದ್ದು ಇಂದು ಚಾಮುಂಡಿ ಬೆಟ್ಟ ಕುಸಿಯಲು ಪರೋಕ್ಷವಾಗಿ ಕಾರಣವಾಗಿದೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇದರ ಜೊತೆಗೆ ಸರಕಾರ ಹೀಗಾಗಲೇ ಬೆಟ್ಟಕ್ಕೆ ರೂಪ್‌ವೇ ನಿರ್ಮಿಸಲು ಹೊರಟಿದೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಮತ್ತೆ ಬೆಟ್ಟದ ಪರಿಸರವನ್ನು ನಾಶ ಮಾಡಲು ಹೊರಟಿದೆ. ಉತ್ತರಾಖಂಡದ ಜೋಶಿಮಠ ಈಗ ‘ಅಭಿವೃದ್ಧಿ’ಯ ಪರಿಣಾಮಕ್ಕೆ ಸಾಕ್ಷಿಯಾಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಾದರೂ ಪ್ರವಾಸೋದ್ಯಮದ ಹೆಸರಿನಲ್ಲಿ ಹೊಸ ಹೊಸ ಯೋಜನೆಗಳಿಗೆ ಕಡಿವಾಣ ಹಾಕುವ ಮೂಲಕ ಚಾಮುಂಡಿ ಬೆಟ್ಟ ಉಳಿಸಿಕೊಳ್ಳ ಬೇಕಾಗಿದೆ. ಇಲ್ಲವಾದಲ್ಲಿ ಜೋಶಿಮಠ ಪಟ್ಟಣದ ಪರಿಸ್ಥಿತಿಯನ್ನು ಮೈಸೂರಿಗರು ಸಹ ಭವಿಷ್ಯದಲ್ಲಿ ಎದುರಿಸಬೇಕಾಗಬಹುದು. ಆದ್ದರಿಂದ ಆದಷ್ಟು ಬೇಗ ಸರಕಾರ ಎಚ್ಚೆತ್ತುಕೊಂಡು ತಜ್ಞರ ಸೂಕ್ತ ಸಲಹೆ ಪಡೆದು ಕುಸಿಯುತ್ತಿರುವ ಬೆಟ್ಟವನ್ನು ಉಳಿಸಲು ಮುಂದಾಗಬೇಕಾಗಿದೆ.
 

Similar News