ಬುರ್ಖಾ ಧರಿಸಿ, ಬೆನ್ನಿನ ಹಿಂಭಾಗಕ್ಕೆ ಸ್ವಿಗ್ಗಿ ಬ್ಯಾಗ್ ಹೇರಿಕೊಂಡು ಹೋಗುತ್ತಿರುವ ಮಹಿಳೆಯ ಬದುಕು ಹೀಗಿದೆ...

Update: 2023-01-17 05:16 GMT

ಲಕ್ನೊ: ಲಕ್ನೊ ರಸ್ತೆಯೊಂದರಲ್ಲಿ ತಲೆಗೆ ಬುರ್ಖಾ ಧರಿಸಿ, ಬೆನ್ನಿನ ಹಿಂಭಾಗಕ್ಕೆ ಸ್ವಿಗ್ಗಿ ಬ್ಯಾಗ್ ಹೇರಿಕೊಂಡು ಹೋಗುತ್ತಿರುವ ಮಹಿಳೆಯ ಫೋಟೊವನ್ನು ಕ್ಲಿಕ್ಕಿಸಿರುವ ಅನಾಮಿಕರೊಬ್ಬರು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬೆನ್ನಿಗೇ ಆ ಫೋಟೊ ವೈರಲ್ ಆಗಿದೆ ಎಂದು dnaindia.com ವರದಿ ಮಾಡಿದೆ.

ಕೆಲವೇ ಗಂಟೆಗಳಲ್ಲಿ ವೈರಲ್ ಆಗಿರುವ ಆ ಫೋಟೋಗೆ ಹಲವಾರು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಏಕತಾನತೆಯನ್ನು ಮುರಿದು, ಅಪಾರ ಧೈರ್ಯವನ್ನು ಪ್ರದರ್ಶಿಸಿರುವ ಆ ಮಹಿಳೆಯನ್ನು ಪ್ರಶಂಸಿಸಿದ್ದಾರೆ. ಆದರೆ, ಆ ಫೋಟೋವನ್ನು ಆಕೆಯ ಹಿಂಭಾಗದಿಂದ ತೆಗೆದಿರುವುದರಿಂದ ಯಾರಿಗೂ ಆ ಮಹಿಳೆ ಯಾರೆಂದು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಕೊನೆಗೂ ಸತ್ಯ ಬಯಲಾಗಿದ್ದು, 40 ವರ್ಷ ವಯಸ್ಸಿನ ರಿಝ್ವಾನಾ ಸ್ವಿಗ್ಗಿ ಡೆಲಿವರಿ ಏಜೆಂಟ್ ಅಲ್ಲ; ಬದಲಿಗೆ ಮನೆಗೆಲಸದಾಕೆ ಎಂದು ತಿಳಿದು ಬಂದಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ರಿಝ್ವಾನಾ, ನಾನು ಹಲವರ ಮನೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಮನೆಗೆಲಸ ಮಾಡಿ, ರೂ. 1500 ಗಳಿಸುತ್ತೇನೆ. ಇದರೊಂದಿಗೆ ನಾನು ಬೀದಿ ವ್ಯಾಪಾರ ಕೂಡಾ ಮಾಡುತ್ತಿದ್ದು, ಸಣ್ಣ ವ್ಯಾಪಾರಸ್ಥರು ಹಾಗೂ ಮಳಿಗೆಗಳಿಂದ ಬಳಸಿ ಬಿಸಾಡುವ ಲೋಟಗಳು ಹಾಗೂ ಬಟ್ಟೆಗಳನ್ನು ಖರೀದಿಸಿ, ಮಾರಾಟ ಮಾಡುತ್ತೇನೆ. ಇದರಿಂದ ಒಂದು ಪಾಕೆಟ್ ಮಾಡಿದರೆ ನನಗೆ ಒಂದು ರೂಪಾಯಿ ದೊರೆಯುತ್ತದೆ. 

ಇದೆಲ್ಲದರಿಂದ ಒಟ್ಟಾರೆಯಾಗಿ ತಿಂಗಳಿಗೆ ರೂ. 5000-6000ವರೆಗೆ ಗಳಿಸುತ್ತೇನೆ. ಈ ಹಣದಿಂದ ನನ್ನ ಅಡುಗೆ ಮನೆಯಲ್ಲಿ ಒಲೆ ಉರಿಯುತ್ತದೆ" ಎಂದು ಹೇಳಿಕೊಂಡಿದ್ದಾಳೆ.

ರಿಝ್ವಾನಾ ನಾಲ್ಕು ಮಕ್ಕಳ ತಾಯಿಯಾಗಿದ್ದು, ಲುಬ್ನಾ (22), ಬುಶ್ರಾ (19), ನಶ್ರಾ (7) ಹಾಗೂ ಕಿರಿಯ ಪುತ್ರ ಮುಹಮ್ಮದ್ ಯಶಿ ಎಂಬ ಮಕ್ಕಳನ್ನು ಹೊಂದಿದ್ದಾಳೆ.  ಈ ನಾಲ್ವರ ಪೈಕಿ ಲುಬ್ನಾಗೆ ವಿವಾಹವಾಗಿದ್ದು, ತಾಯಿಯ ಮನೆ ಸಮೀಪದಲ್ಲೇ ತನ್ನ ಅತ್ತೆ-ಮಾವನೊಂದಿಗೆ ವಾಸಿಸುತ್ತಿದ್ದಾಳೆ. ಇನ್ನುಳಿದ ಮೂರು ಮಕ್ಕಳು ಒಂದು ಕೋಣೆಯ ಮನೆಯಲ್ಲಿ ತಮ್ಮ ತಾಯಿ ರಿಝ್ವಾನಾರೊಂದಿಗೆ ಜನತಾನಗರ ಕಾಲನಿಯಲ್ಲಿ ವಾಸಿಸುತ್ತಿದ್ದಾರೆ.

ರಿಝ್ವಾನಾಗೆ 23 ವರ್ಷಗಳ ಕೆಳಗೆ ವಿವಾಹವಾಗಿದ್ದು, ಆಕೆಯ ಪತಿ ಒಂದು ದಿನ ಕುಟುಂಬದ ಒಳಿತಿಗಾಗಿ ಯಾವುದೇ ಎಚ್ಚರಿಕೆ ಅಥವಾ ಮುನ್ಸೂಚನೆ ನೀಡದೆ ಮನೆ ತೊರೆದಿದ್ದ. ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದ ಆತನ ರಿಕ್ಷಾ ಒಂದು ದಿನ ಕಳುವಾಗಿ ಹೋಯಿತು. ಆನಂತರ  ಭಿಕ್ಷೆ ಬೇಡುತ್ತಿದ್ದ ಆತ, ಹಾಗೆಯೇ ಕಣ್ಮರೆಯಾಗಿಬಿಟ್ಟ ಎಂದು ಹೇಳಲಾಗಿದೆ.

ಆಕೆ ಬೆನ್ನಿನ ಹಿಂಭಾಗಕ್ಕೆ ಹೇರಿಕೊಂಡಿದ್ದ ಸ್ವಿಗ್ಗಿ ಬ್ಯಾಗ್ ಕುರಿತು ಪ್ರಶ್ನಿಸಿದಾಗ, ನನಗೆ ಬಳಸಿ ಬಿಸಾಡುವ ಲೋಟಗಳನ್ನು ಹೊತ್ತೊಯ್ಯಲು ಬಲಿಷ್ಠವಾದ ಬ್ಯಾಗೊಂದರ ಅವಶ್ಯಕತೆ ಇತ್ತು. ದಲಿಗಂಜ್ ಬಳಿ ಬ್ಯಾಗ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ 50 ರೂಪಾಯಿ ನೀಡಿ, ಅದನ್ನು ಖರೀದಿಸಿ ತಂದೆ. ಅಲ್ಲಿಂದ ನನ್ನ ವಸ್ತುಗಳನ್ನು ಆ ಬ್ಯಾಗ್‌ನಲ್ಲಿ ಕೊಂಡೊಯ್ಯುತ್ತಿದ್ದೇನೆ. ನಾನು ಸ್ವಿಗ್ಗಿಗಾಗಿ ಕೆಲಸ ಮಾಡುವುದಿಲ್ಲ. ನಾನು ನನ್ನ ಸಾಮಾನುಗಳನ್ನೆಲ್ಲ ಹೊತ್ತುಕೊಂಡು ಮಾರುಕಟ್ಟೆಗೆ ಹೋಗಲು ಆ ಬ್ಯಾಗ್ ಬಳಸುತ್ತೇನೆ. ನಾನು ದಿನವೊಂದಕ್ಕೆ 20-25 ಕಿಮೀ ನಡೆಯುತ್ತೇನೆ ಎಂದು ರಿಝ್ವಾನಾ ತಿಳಿಸಿದ್ದಾಳೆ.

ಆಕೆಯ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವುದರ ಕುರಿತು ರಿಝ್ವಾನಾಳನ್ನು ಪ್ರಶ್ನಿಸಿದಾಗ, ಒಬ್ಬ ಅಂಗಡಿ ಮಾಲೀಕರು ನನಗೆ ಆ ಫೋಟೊ ತೋರಿಸಿ, ಅದು ಹೇಗೆ ವೈರಲ್ ಆಯಿತು ಎಂದು ನನಗೆ ತಿಳಿಸಿದರು. ಇದರ ಬೆನ್ನಿಗೇ ಓರ್ವ ವ್ಯಕ್ತಿ ನನ್ನನ್ನು ಭೇಟಿ ಮಾಡಿ ನನ್ನ ಬ್ಯಾಂಕ್ ವಿವರಗಳನ್ನು ಕೇಳಿದ. ಆ ಘಟನೆಯ ನಂತರ ನಾನು ಕೆಲವರಿಂದ ನೆರವು ಸ್ವೀಕರಿಸಿದ್ದೇನೆ ಮತ್ತು ನನ್ನ ಬದುಕು ಒಳ್ಳೆಯ ದಿಕ್ಕಿನತ್ತ ಬದಲಾಗುತ್ತಿರುವಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾಳೆ.

ಆದರೆ, ಈವರೆಗೆ ಅಹಾರ ಸರಬರಾಜು ಸೇವೆಯ ಬಗ್ಗೆ ಅರಿವಿಲ್ಲದ ರಿಝ್ವಾನಾ, ಜನರು ನನಗೆ ಸ್ವಿಗ್ಗಿ ಕುರಿತು ತಿಳಿಸಿದ್ದಾರೆ. ನಾನು ಆ ಕೆಲಸ ಮಾಡಲು ಇಚ್ಛಿಸುತ್ತೇನಾದರೂ, ನನ್ನ ಬಳಿ ಯಾವುದೇ ಸಾರಿಗೆ ವಾಹನ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.

Similar News