ಸಂಸತ್ತಿನ ಪಾರಮ್ಯದ ಮುಸುಕಿನಲ್ಲಿ ಕಾರ್ಪೊರೇಟ್-ಹಿಂದುತ್ವದ ಪಾರಮ್ಯದ ಉದ್ದೇಶ

Update: 2023-01-20 03:07 GMT

ಭಾಗ-3

1980ರ ಮಿನರ್ನ ಮಿಲ್ಸ್ ಪ್ರಕರಣ

ಇಷ್ಟೆಲ್ಲಾ ಆದರೂ ಇಂದಿರಾ ಸರಕಾರ 42ನೇ ತಿದ್ದುಪಡಿಯ 4 ಮತ್ತು 5ನೇ ಅಂಶವನ್ನು ಜನತಾ ಸರಕಾರ ಮಾಡಿದ 44ನೇ ತಿದ್ದುಪಡಿಯೂ ರದ್ದು ಮಾಡಿರಲಿಲ್ಲ. ಆ ಅಂಶಗಳು ಪ್ರಭುತ್ವ ನಿರ್ದೇಶನಾ ತತ್ವಗಳನ್ನು ಜಾರಿಗೆ ತರುವಾಗ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುವ ಕಾನೂನು ತರಬಹುದಾದ ಅಧಿಕಾರವನ್ನು ಸಂಸತ್ತಿಗೆ ಉಳಿಸುತ್ತಿತ್ತು.

ಆದರೆ 1980ರಲ್ಲಿ ಬೆಂಗಳೂರಿನ ಮಿನರ್ವ ಮಿಲ್ಸ್‌ನ ರಾಷ್ಟ್ರೀಕರಣವನ್ನು ವಿರೋಧಿಸಿ ಸುಪ್ರೀಂ ಕೋರ್ಟಿನಲ್ಲಿ ದಾಖ ಲಾದ ದಾವೆಯಲ್ಲಿ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಸತ್ತಿಗೆ ಸಂವಿಧಾನ ತಿದ್ದುಪಡಿಯ ಬಗ್ಗೆ ಇರುವ ಅಧಿಕಾರ ತುಂಬಾ ಸೀಮಿತವಾದದ್ದು ಎಂದು ಘೋಷಿಸಿತು.

 ‘‘ಸಂಸತ್ತು ಕೂಡ ಸಂವಿಧಾನದ ಸೃಷ್ಟಿಯಾಗಿದ್ದು, ಸಂವಿಧಾನ ಸಂಸತ್ತಿನ ಸೃಷ್ಟಿಯಲ್ಲ. ಹೀಗಾಗಿ ತನ್ನನ್ನು ಸೃಷ್ಟಿ ಮಾಡಿದವರು ನೀಡಿರುವ ಸೀಮಿತ ಅಧಿಕಾರವನ್ನು ವಿಶಾಲವಾಗಿ ಹೆಚ್ಚಿಸಿಕೊಂಡು ಸಂವಿಧಾನದ ಮೂಲ ಸ್ವರೂಪವನ್ನು ಬದಲಿಸುವ ಅಧಿಕಾರ ಸಂಸತ್ತಿಗೆ ಇಲ್ಲ’’ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿತು.

ವಿಶೇಷವೇನೆಂದರೆ ಮಿನರ್ವ ಮಿಲ್ಸ್ ಪ್ರಕರಣದಲ್ಲಿ ಸಂವಿಧಾನದ ಮೂಲ ಸ್ವರೂಪದ ತಿದ್ದುಪಡಿಯಾಗಬಾರದು ಎಂಬ ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನು ಬಹುವಾಗಿ ಉಲ್ಲೇಖಿಸುವ ನ್ಯಾಯಾಧೀಶ ವೈ.ವಿ. ಚಂದ್ರಚೂಡ್ ಅವರು ಕೇಶವಾನಂದ ಭಾರತಿ ಪ್ರಕರಣದಲ್ಲಿ ಬಹುಮತದ ಟಿಪ್ಪಣಿಯ ಭಾಗವಾಗಿದ್ದರೂ ತೀರ್ಪಿನ ಭಾಗವಾಗಿರಲಿಲ್ಲ. ಆದರೆ ಮಿನರ್ವ ಮಿಲ್ಸ್ ತೀರ್ಪಿನಲ್ಲಿ ಅವರೇ ಸಂಪೂರ್ಣವಾಗಿ ಕೇಶವಾನಂದ ಭಾರತಿ ತೀರ್ಪನ್ನು ಎತ್ತಿ ಹಿಡಿಯುತ್ತಾರೆ.

ಅಷ್ಟು ಮಾತ್ರವಲ್ಲ, ಆ ನಂತರ ನೀಡಲಾದ ಒಂಭತ್ತು ನ್ಯಾಯಾಧೀಶರ 1992ರ ಇಂದಿರಾ ಸಹಾನಿ ಪ್ರಕರಣ, 1994ರ ಬೊಮ್ಮಾಯಿ ಪ್ರಕರಣ ಇನ್ನಿತರ ಎಲ್ಲಾ ಸಾಂವಿಧಾನಿಕ ನ್ಯಾಯಾದೇಶಗಳಲ್ಲೂ ಕೇಶವಾನಂದ ಭಾರತಿ ಪ್ರಕರಣದಲ್ಲಿ ವಿಷದ ಪಡಿಸಿರುವಂತೆ ಸಂಸತ್ತಿಗೆ ಸಂವಿಧಾನದ ಮೂಲ ಸ್ವರೂಪವನ್ನು ಬದಲಿಸುವ ಅಧಿಕಾರವಿಲ್ಲ ಎಂಬ ಸಾಂವಿಧಾನಿಕ ತತ್ವವನ್ನು ಪದೇಪದೇ ಸ್ಪಷ್ಟಪಡಿಸಲಾಗಿದೆ.

ಸಂವಿಧಾನದ ಮೂಲಸ್ವರೂಪವನ್ನು ಸಂಸತ್ತು ತಿದ್ದಬಾರದು -ಬಿಜೆಎಸ್

ಈಗಾಗಲೇ ಗಮನಿಸಿದಂತೆ ಈಗಿನ ಬಿಜೆಪಿಯ ಮೂಲ ಅವತಾರವಾದ ಭಾರತೀಯ ಜನ ಸಂಘವೂ (ಬಿಜೆಎಸ್) ಜನತಾ ಪಕ್ಷದ ಸರಕಾರದ ಭಾಗವಾಗಿತ್ತು. ವಾಜಪೇಯಿ ಮತ್ತು ಅಡ್ವಾಣಿಯವರು ಮೊರಾರ್ಜಿ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳಾಗಿದ್ದರು. 44ನೇ ಸಂವಿಧಾನ ತಿದ್ದುಪಡಿಯನ್ನು ಜಾರಿಗೆ ತಂದದ್ದು ಬಿಜೆಎಸ್-ಜನತಾ ಸರಕಾರವೇ.

44ನೇ ತಿದ್ದುಪಡಿಯ ಪ್ರಕಾರ ‘‘ಸಂಸತ್ತಿಗೆ ಸಂವಿಧಾನದ ಮೂಲ ರಚನೆಗೆ ತಿದ್ದುಪಡಿ ತರುವ ಅಧಿಕಾರವಿಲ್ಲ. ಬಹುಸಂಖ್ಯಾತ ಜನರು ಭಾಗವಹಿಸುವ ಜನಮತಗಣನೆಯಲ್ಲಿ ಒಪ್ಪಿಗೆ ಪಡೆದರೆ ಮಾತ್ರ ಸಂಸತ್ತು ಅಂತಹ ತಿದ್ದುಪಡಿ ಮಾಡಬಹುದು’’ ಎಂದು ಹೇಳುತ್ತದೆ.

ಅರ್ಥಾತ್ ಸಂಸತ್ತಿಗೆ ಸಂವಿಧಾನದ ಕೆಲವು ಭಾಗಳಿಗೆ ತಿದ್ದುಪಡಿ ಮಾಡುವ ಅಧಿಕಾರವಿಲ್ಲ ಎಂಬ ಕಾನೂನು ಮಾಡಿದ್ದು ಈಗಿನ ಬಿಜೆಪಿಯ ಅಂದಿನ ನಾಯಕಮಣಿಗಳೇ. ಉಪರಾಷ್ಟ್ರಪತಿ ಜಗದೀಪ್ ಧನ್ಕರ್‌ರವರ ಗುರುಗಳೇ! ಆದರೆ ಈಗ ಮಾತ್ರ ಅದೇ ಮಹಾಶಯರು ಸಂವಿಧಾನವನ್ನು ಬದಲಿಸುವ ಅಧಿಕಾರ ಸಂಸತ್ತಿಗಿದೆ ಎಂದು ಸಂವಿಧಾನಕ್ಕಿಂತಲೂ ಸಂಸತ್ತೇ ದೊಡ್ಡದು ಎಂದು ಪ್ರತಿಪಾದಿಸುತ್ತಿದ್ದಾರೆ.

ಹಾಗಿದ್ದರೆ ಆಗ ಮತ್ತು ಈಗ ಬದಲಾಗಿರುವ ಸಂದರ್ಭವೇನು ಎಂಬುದು ಅರ್ಥಮಾಡಿಕೊಂಡರೆ ಈ ದಾಳಿಯ ಉದ್ದೇಶ ಸ್ಪಷ್ಟವಾದೀತು.

ಹೀಗೆ ಭಾರತದ ನ್ಯಾಯಿಕ ಇತಿಹಾಸದಲ್ಲಿ ಸಂಸತ್ತು ಪರಮೋಚ್ಚವೋ ಅಥವಾ ಸುಪ್ರೀಂ ಕೋರ್ಟ್ ಪರಮೋಚ್ಚವೋ ಎಂಬ ತೀರದ ಸಾಂವಿಧಾನಿಕ ಸಂಘರ್ಷವು ಸಂವಿಧಾನವೇ ಪರಮೋಚ್ಚ ಎಂಬ ಸಮಾಧಾನದೊಂದಿಗೆ ಒಂದು ಪರಿಹಾರವನ್ನು ಕಂಡುಕೊಂಡಿತ್ತು.

ಜನರಿಂದ ಆಯ್ಕೆಯಾಗುವ ಸಂಸತ್ತಿಗೆ ಬದಲಾದ ಸಂದರ್ಭಗಳಿಗೆ ಮತ್ತು ಅಗತ್ಯಗಳಿಗೆ ತಕ್ಕಂತೆ ಶಾಸನಗಳನ್ನು ಮಾಡುವ ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರವಿದ್ದರೂ, ಪ್ರಚಂಡ ಸಂಖ್ಯಾ ಬಲವಿದ್ದರೂ ಸಂವಿಧಾನವು ಜನರಿಗೆ ನೀಡಿರುವ ಸಮಾನತೆ, ಸೆಕ್ಯುಲರಿಸಂ, ಸಂಸದೀಯ ಪ್ರಜಾತಂತ್ರ, ಫೆಡರಲಿಸಂ, ಮುಕ್ತ ಚುನಾವಣೆ ಇನ್ನಿತ್ಯಾದಿ ಮೂಲಭೂತ ಹಕ್ಕುಗಳನ್ನೇ ಬದಲಿಸುವ ಅಧಿಕಾರವಿಲ್ಲವೆಂದು ‘‘ಸಂವಿಧಾನದ ಮೂಲ ಸ್ವರೂಪ ಸಿದ್ಧಾಂತ’’ವನ್ನು ಅನ್ವೇಷಣೆ ಮಾಡಲಾಗಿತ್ತು.

ಈಗ ಸಂಸತ್ತಿನ ಸಾರ್ವಭೌಮತೆಯ ಹೆಸರಿನಲ್ಲಿ ಸರ್ವಾಧಿಕಾರವನ್ನು ಹೇರುವ ಸರದಿ ಬಿಜೆಪಿಯದ್ದು. ಆದರೆ ಅಷ್ಟೇ ಅಲ್ಲ.

ಸಂಸತ್ತಿನ ಪಾರಮ್ಯದ ಮುಸುಕಿನಲ್ಲಿ...

ಇಂದಿರಾಗಾಂಧಿ ಹೇರಬಯಸಿದ ಸಂಸತ್ತಿನ ಪಾರಮ್ಯಕ್ಕೂ ಬಿಜೆಪಿಯು ಸಂವಿಧಾನಕ್ಕೆ ಮಾಡುತ್ತಿರುವ ಫ್ಯಾಶಿಸ್ಟ್ ದಾಳಿಗೂ ಒಂದು ಮೂಲಭೂತ ವ್ಯತ್ಯಾಸವಿದೆ.

ಆಗ ಇಂದಿರಾಗಾಂಧಿ ಸರಕಾರಕ್ಕೆ ಕನಿಷ್ಠ ಪಕ್ಷ ಭೂ ಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣದಂತಹ ಜನಪರವಾದ ಕಾನೂನುಗಳನ್ನು ತರುವ ಮುಖವಾಡವಾದರೂ ಇತ್ತು. ಸಂವಿಧಾನದೊಳಗೆ ನಾಗರಿಕ ಸ್ವಾತಂತ್ರ್ಯವನ್ನು ಒದಗಿಸುವ ಮೂಲಭೂತ ಹಕ್ಕುಗಳಿಗಿಂತ, ಸಾಮಾಜಿಕ-ಆರ್ಥಿಕ ಸಮಾನತೆಗಳನ್ನು ಒದಗಿಸುವ ಪ್ರಭುತ್ವ ನಿರ್ದೇಶನಾ ತತ್ವಗಳನ್ನು ಜಾರಿಗೆ ತರಬೇಕೆಂಬ ತೋರಿಕೆಯಾದರೂ ಇತ್ತು.

ಇಂದಿರಾ ಸರಕಾರದ್ದು ನೈಜವಲ್ಲದ ತೋರಿಕೆಯ ಬದ್ಧತೆ ಏಕೆಂದರೆ 1971ರ ನಂತರ ಇಂದಿರಾ ಸರಕಾರ ಗರೀಬಿ ಹಠಾವೋ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಥವಾ 1975ರ ನಂತರ ತುರ್ತುಸ್ಥಿತಿಯಲ್ಲಿ ಜನಸಾಮಾನ್ಯರಿಗಿಂತ ಅತಿಹೆಚ್ಚು ಲಾಭ ಪಡೆದವರು ಟಾಟಾ-ಬಿರ್ಲಾಗಳೇ ಎಂಬುದು ಎಲ್ಲಾ ಅಧ್ಯಯನಗಳು ಸಾಬೀತುಪಡಿಸುತ್ತವೆ. ದೇವರಾಜ ಅರಸ್‌ರಂತಹ ಕಾಂಗ್ರೆಸ್ ಮುಖ್ಯಮಂತ್ರಿಗಳಿದ್ದ ಕಡೆ ಕೆಲವು ಭಾಗಶಃ ಜನಪರ ಸುಧಾರಣೆಗಳು ಬಂದಿದ್ದು ನಿಜವಾದರೂ ಅವು ಸ್ಥಾಪಿತ ಊಳಿಗಮಾನ್ಯ ಹಾಗೂ ಬಂಡವಾಳಶಾಹಿ ವರ್ಗಗಳನ್ನು ಎದುರುಹಾಕಿಕೊಳ್ಳಲಿಲ್ಲ.

ಅದೇನೇ ಇದ್ದರೂ ಆಗ ನಡೆದ ಸಂಸತ್ತು ಮತ್ತು ಸುಪ್ರೀಂ ಕೋರ್ಟಿನ ನಡುವಿನ ಪರಮಾಧಿಕಾರದ ಸಂಘರ್ಷದಲ್ಲಿ ಜನಪರತೆಯ ಭಾಷೆಯಾದರೂ ಇತ್ತು ಮತ್ತು ಜನಪರ ನೀತಿಗಳಿಗೆ  ಮಾನ್ಯತೆ ತಂದುಕೊಡುವ ಅಜೆಂಡಗಳಿಗೆ ಜನಮಾನ್ಯತೆಯಿತ್ತು.

ಹೀಗಾಗಿ ಸಂಸತ್ತೋ ಅಥವಾ ಸುಪ್ರೀಂ ಕೋರ್ಟೋ ಎಂಬ ಸಂಘರ್ಷವು ಕೂಡ ತೋರಿಕೆಗೆ ಆದರೂ ಜನಹಿತ ಮತ್ತು ಪ್ರಜಾತಂತ್ರವನ್ನು ಆಳಗೊಳಿಸುವ ಉದ್ದೇಶವನ್ನು ಘೋಷಿಸಿಕೊಂಡಿತ್ತು.

ಆಗ ಮೂಲಭೂತ ಹಕ್ಕುಗಳೋ? ಪ್ರಭುತ್ವ ನಿರ್ದೇಶಿತ ತತ್ವಗಳೋ? ಎಂಬ ಕೃತಕ ಸಂಘರ್ಷವಾದರೂ ಇತ್ತು. ಆದರೆ ಮೋದಿ ನೇತೃತ್ವದ ಆರೆಸ್ಸೆಸ್ ನಿರ್ದೇಶಿತ ಬಿಜೆಪಿ ಸರಕಾರಕ್ಕೆ ಮೂಲಭೂತ ಹಕ್ಕುಗಳ ಬಗ್ಗೆಯೂ ನಂಬಿಕೆಯಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಮತ್ತು ನ್ಯಾಯಗಳ ಪ್ರಭುತ್ವ ನಿರ್ದೇಶನಾ ತತ್ವಗಳಲ್ಲೂ ನಂಬಿಕೆಯಿಲ್ಲ. ಅಸಲು ಅವರಿಗೆ ಈ ಸಂವಿಧಾನದಲ್ಲೇ ನಂಬಿಕೆಯಿಲ್ಲ.

ಈಗ ಸಂಸತ್ತಿನ ಪಾರಮ್ಯ ಬೋಧಿಸುತ್ತಿರುವ ಬಿಜೆಪಿಗೆ ಅಂತಹ ಯಾವುದೇ ಸೋಗು ಹಾಕುವ ಅಗತ್ಯವೂ ಇಲ್ಲ ಎನ್ನುವುದೇ ಬದಲಾದ ಸಂದರ್ಭದ ಭೀಕರತೆಯನ್ನು ಸೂಚಿಸುತ್ತದೆ. ಒಂದೆಡೆ 1991ರ ನಂತರ ಜನಪರತೆಯೆಂದರೆ ಮಾರುಕಟ್ಟೆ ಪರ ನೀತಿಗಳು ಎಂದಾಗಿದೆ. ಭೂ ಸುಧಾರಣೆ ಎಂದರೆ ಬಲಿಷ್ಟರಿಗೆ ಭೂಮಿ ಹಂಚಿಕೆ ಎಂದಾಗಿದೆ.

ಸ್ವಾತಂತ್ರ್ಯದ ಪ್ರಥಮ ದಶಕಗಳಲ್ಲಿ ಭೂಮಾಲಕರು, ಜಮೀನ್ದಾರರು, ರಾಜಮನೆತನಗಳು ಮತು ಸಾಹುಕಾರಿಗಳ ಹಕ್ಕುಗಳ ಪರವಾಗಿ ನಿಂತ ಅಪರಾಧವನ್ನು ಕಳೆದುಕೊಳ್ಳಲೋ ಎಂಬಂತೆ 1980ರ ದಶಕದಲ್ಲಿ ಜನಪರವಾದ ಆ್ಯಕ್ಟಿವಿಸ್ಟ್ ಪಾತ್ರ ವಹಿಸಿದ್ದ ಸುಪ್ರೀಂ ಕೋರ್ಟ್, 1991ರ ನಂತರ ಅದರಲ್ಲೂ ಕಳೆದ ಒಂದು ದಶಕದಲ್ಲಿ ಮಾರುಕಟ್ಟೆ ಪರವಾದ ಹಿಂದುತ್ವೀಕರಣಗೊಳ್ಳುತ್ತಿರುವ ಸಂಸತ್ತಿಗೆ ನೈತಿಕ ಮತ್ತು ಸಾಂವಿಧಾನಿಕ ಸಮರ್ಥನೆ ಒದಗಿಸುವ ಸಂಸ್ಥೆಯಾಗಿ ಬದಲಾಗಿದೆ.

ಇಂತಹ ಸಂದರ್ಭದಲ್ಲಿ ಸಂವಿಧಾನದ ಮೇಲೆ ದಾಳಿ ಮಾಡುವ ಮೂಲಕ ಬಿಜೆಪಿ-ಆರೆಸ್ಸೆಸ್ ನಿರಾಯುಧರಾದ ಜನರ ಮೇಲೆ ಅಂತಿಮ ದಾಳಿಯನ್ನು ನಡೆಸುತ್ತಿದೆ. ತಾನು ಜಾರಿಗೆ ತರಬೇಕೆಂದಿರುವ ಮುಸ್ಲಿಮ್ ವಿರೋಧಿ ಸಿಎಎ, ಬಡಜನರ ನಾಗರಿಕತ್ವ ಕಳೆಯುವ ಎನ್‌ಪಿಅರ್, ಎನ್‌ಆರ್‌ಸಿ, ಜನರ ಮೇಲೆ ಬೇಹುಗಾರಿಕೆ ನಡೆಸುವ ಪೆಗಾಸಸ್ ಗೂಢಚರ್ಯೆ, ಅರಣ್ಯ ಸಂಪತ್ತನ್ನು ಬಹುರಾಷ್ಟ್ರೀಯರಿಗೆ ಧಾರೆ ಎರೆಯುವ ತಿದ್ದುಪಡಿಗಳು- ಒಟ್ಟಿನಲ್ಲಿ ಜನರ ಸ್ವಾತಂತ್ರ್ಯ ಮತ್ತು ಜೀವನೋಪಾಯಗಳು ಮತ್ತು ನಾಗರಿಕ ಹಕ್ಕುಗಳ ಮೇಲೆ ತಾನು ನಡೆಸಲಿರುವ ಬ್ರಾಹ್ಮಣೀಯ ಕಾರ್ಪೊರೇಟ್ ದಾಳಿಗೆ ಕೋರ್ಟ್‌ಗಳಲ್ಲಿ ಅಳಿದುಳಿದ ಜನಪರ ನ್ಯಾಯಾಧೀಶರು ತೋರಬಹುದಾದ ಅಲ್ಪಸ್ವಲ್ಪಅಡ್ಡಿಯೂ ಎದುರಾಗಬಾರದೆಂದು ಸಂಸತ್ತಿನ ಪಾರಮ್ಯದ ಮಾತನಾಡುತ್ತಿವೆ.

ಹೀಗಾಗಿ ಉಪರಾಷ್ಟ್ರಪತಿ ಧನ್ಕರ್ ಅವರು ಸಂಸತ್ತಿನ ಪರಮಾಧಿಕಾರದ ಬಗ್ಗೆ ಮಾತನಾಡುತ್ತಿದ್ದರೆ ಅವರು ಸಾರಾಂಶದಲ್ಲಿ ಹೇಳುತ್ತಿರುವುದು ಮೋದಿ ಸರಕಾರ ಜಾರಿಗೆ ತರಬೇಕೆಂದಿರುವ ಕಾರ್ಪೊರೇಟ್ ಬಂಡವಾಳಿಗರ, ಬ್ರಾಹ್ಮಣೀಯ ಹಿಂದೂ ರಾಷ್ಟ್ರದ ನೀತಿಗಳಿಗೆ ಸುಪ್ರೀಂ ಕೋರ್ಟ್ ಅಡ್ಡಿ ಬರಬಾರದು ಎಂಬುದೇ ಆಗಿದೆ. ಕೊಲಿಜಿಯಂ ಪದ್ಧತಿಯ ಅಪಾರದರ್ಶಕತೆಯನ್ನು ನೆಪವಾಗಿರಿಸಿಕೊಂಡು ಸುಪ್ರೀಂ ಕೋರ್ಟನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಮೋದಿ ಸರಕಾರ 2015ರಲ್ಲಿ ಸಂಸತ್ತಿನಲ್ಲಿ ಜಾರಿ ಮಾಡಿದ NJAC ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಆದರೂ ಮೋದಿ ಸರಕಾರ ಆ ನಂತರ ತಂದ ಯಾವುದೇ ಸಂವಿಧಾನ ವಿರೋಧಿ, ಮೂಲ ಸ್ವರೂಪ ವಿರೋಧಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ಇಂದಿರಾ ಕಾಲದಲ್ಲಿ ತೋರಿದಷ್ಟು  ಪ್ರತಿರೋಧವನ್ನೂ ತೋರಲಿಲ್ಲ.

ಇಂದಿರಾ ಕಾಲದಲ್ಲಿ ಜಸ್ಟಿಸ್ ಖನ್ನಾರಂಥವರು ಇಂದಿರಾ ಗಾಂಧಿಯ ಸರ್ವಾಧಿಕಾರಕ್ಕೆ ಪ್ರತಿರೋಧ ತೋರಿದ್ದಕ್ಕೆ ಕೇವಲ ಭಡ್ತಿ ಕಳೆದುಕೊಂಡರು. ಮೋದಿ-ಶಾ ಕಾಲದಲ್ಲಿ ವಿರೋಧ ತೋರಿದ  ಜಸ್ಟಿಸ್ ಲೋಯಾ ಅಂಥವರು ನಿಗೂಢ ರೀತಿಯಲ್ಲಿ ನಿಧನರಾದರು.

ಇಂದಿರಾ ಕಾಲದಲ್ಲಿ ಹೆಚ್ಚೆಂದರೆ ಕೆ.ಎಸ್. ಹೆಗ್ಡೆಯಂಥವರಿಗೆ ಮುಖ್ಯ ನ್ಯಾಯಾಧೀಶರಾಗಿ ಭಡ್ತಿಯಾಗುತ್ತಿರಲಿಲ್ಲ. ಮೋದಿ ಕಾಲದಲ್ಲಿ ಜಸ್ಟಿಸ್ ಖುರೇಶಿಯಂಥವರಿಗೆ ಹೈಕೋರ್ಟಿನಿಂದಲೇ  ಪದೋನ್ನತಿ ಸಿಗುವುದಿಲ್ಲ.

ಇಂದಿರಾ ಕಾಲದಲ್ಲಿ ಲಾಭ ಪಡೆದ ನ್ಯಾಯಾಧೀಶರೂ ಸಂವಿಧಾನದ ಚೌಕಟ್ಟಿನಲ್ಲೇ ಮಾತಾಡುತ್ತಿದ್ದರು. ಮೋದಿ ಕಾಲದಲ್ಲಿ ನ್ಯಾಯಾಧೀಶರು ಸ್ವಪ್ರೇರಿತರಾಗಿಯೇ ಸಂವಿಧಾನಕ್ಕೆ ವಿರುದ್ಧವಾಗಿ ಬ್ರಾಹ್ಮಣೀಯ ಹಿಂದುತ್ವದ ಭಜನೆ ಮಾಡುತ್ತಾರೆ.

ಹಾಗೆ ನೋಡಿದರೆ, 1980ರ ನಂತರ (ಇತ್ತೀಚಿನ ಮೇಲ್ಜಾತಿ ಮೀಸಲಾತಿ ನೀತಿಯನ್ನೂ ಒಳಗೊಂಡಂತೆ), 60ಕ್ಕೂ ಹೆಚ್ಚು ಸಂವಿಧಾನ ತಿದ್ದುಪಡಿಗಳು ಜಾರಿಯಾಗಿವೆ. ಆದರೆ ಸುಪ್ರೀಂ ಕೋರ್ಟ್ NJAC ಯಂತಹ ನ್ಯಾಯಾಂಗವನ್ನು ಸರಕಾರದ ಅಧೀನಗೊಳಿಸುವ ಕಾಯ್ದೆಯಂತಹ ಕೆಲವೇ ಕೆಲವು ಕಾಯ್ದೆಗಳನ್ನು ಬಿಟ್ಟರೆ ಸರಕಾರದ ಯಾವುದೇ ಸಂವಿಧಾನ ವಿರೋಧಿ ತಿದ್ದುಪಡಿಗಳನ್ನು ವಿರೋಧಿಸುವ ತೀರ್ಪು ನೀಡಿಲ್ಲ ಅಥವಾ ಅಂತಹ ವಿವಾದಾಸ್ಪದ ಕಾಯ್ದೆಗಳನ್ನೇ ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ.

ಆದರೂ ಈಗ ಅಳಿದುಳಿದಿರುವ ನ್ಯಾ. ಚಂದ್ರಚೂಡ್ ಅವರಂತಹ ಸ್ವತಂತ್ರ ಭಾವದ ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರಾಗಿದ್ದಾರೆ. ಇನ್ನು ಕೆಲವೇ ಕೆಲವು ಅಂತಹ ನ್ಯಾಯಾಧೀಶರು ಬಾಕಿ ಉಳಿದಿದ್ದಾರೆ. ಸಿಎಎ, ಆರ್ಟಿಕಲ್ 370 ರದ್ದು, ಪೆಗಾಸಸ್ ಬೇಹುಗಾರಿಕೆ, ಎಲೆಕ್ಟೊರಲ್ ಬಾಂಡ್ ಇನ್ನಿತ್ಯಾದಿ ಮೋದಿ ಸರಕಾರದ ಹಲವಾರು ಹಿಂದುತ್ವವಾದಿ ನೀತಿಗಳು ಅವರ ಮುಂದೆ ವಿಚಾರಣೆಗೆ ಬರುವುದರಿಂದ ನ್ಯಾಯಾಂಗದ ಮೇಲೆ, ಸಂಸತ್ತಿನ ಪಾರಮ್ಯದ ಮೇಲೆ ಮೋದಿ ಸರಕಾರ ನಿರಂತರ ದಾಳಿ ಪ್ರಾರಂಭಿಸಿದೆ.

ಹೀಗಾಗಿ ಸಂಸತ್ತಿನ ಪರಮಾಧಿಕಾರದ ಹೆಸರಲ್ಲಿ ಸಂವಿಧಾನದ ಮೂಲರಚನೆಯ ತಿದ್ದುಪಡಿಯ ಅಧಿಕಾರಕ್ಕಾಗಿ ಮೋದಿ ಸರಕಾರ ನಡೆಸುತ್ತಿರುವ ಈ ದಾಳಿ ಸಂವಿಧಾನದ ಮೇಲೆ ಮತ್ತು ಜನರ ಸಾರ್ವಭೌಮತೆಯ ಮೇಲೆಯೇ ನಡೆಯುತ್ತಿರುವ ದಾಳಿಯಾಗಿದೆ. ಸಾಂವಿಧಾನಿಕವಾಗಿಯೇ ಫ್ಯಾಶಿಸ್ಟ್ ಹಿಂದುತ್ವ ರಾಷ್ಟ್ರವನ್ನು ಜಾರಿಗೆ ತರುವ ಸನ್ನಾಹವಾಗಿದೆ.

ಆದ್ದರಿಂದ ವಾಸ್ತವದಲ್ಲಿ ಇಂದು ಈ ದೇಶ ತುರ್ತುಸ್ಥಿತಿಗಿಂತ ಭೀಕರವಾದ ಅಪಾಯವನ್ನು ಎದುರಿಸುತ್ತಿದೆ. ತಮ್ಮ ಮೇಲೆಯೇ ನಡೆಯುತ್ತಿರುವ ಈ ಯುದ್ಧ ದ ಬಗ್ಗೆ ಜನರನ್ನು ಪ್ರಜ್ಞಾವಂತಗೊಳಿಸುವ ಮೂಲಕ ಮಾತ್ರ ಈ ಯುದ್ಧದಲ್ಲಿ ಗೆಲ್ಲಲು ಸಾಧ್ಯ. ಏಕೆಂದರೆ ಸಂಸತ್ತು ಮತ್ತು ಕೋರ್ಟ್‌ಗಳನ್ನು ಈಗಾಗಲೇ ಮೋದಿ ನೇತೃತ್ವದ ಹಿಂದುತ್ವ ಹೆಚ್ಚೂ ಕಡಿಮೆ ವಶಪಡಿಸಿಕೊಂಡು ಆಗಿದೆ.

ಅಲ್ಲವೇ?

Similar News