ಗೆಹ್ಲೋಟ್-ಪೈಲಟ್ ಸಂಘರ್ಷ ತಾರಕಕ್ಕೆ: ದೊಡ್ಡ ಕೊರೋನ ಪಕ್ಷವನ್ನು ಪ್ರವೇಶಿಸಿದೆ ಎಂದು ಕಿಡಿಕಾರಿದ ರಾಜಸ್ಥಾನ ಸಿಎಂ

Update: 2023-01-20 08:23 GMT

ಜೈಪುರ: ರಾಜಸ್ಥಾನದಲ್ಲಿ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹಾಗೂ ಅವರ ಪ್ರತಿಸ್ಪರ್ಧಿ ಸಚಿನ್ ಪೈಲಟ್ (Sachin Pilot) ನಡುವಿನ ಅಧಿಕಾರಕ್ಕಾಗಿನ ಸಂಘರ್ಷ ತಾರಕಕ್ಕೇರಿದ್ದು, "ಕೊರೋನ ಸಾಂಕ್ರಾಮಿಕದ ನಂತರ ದೊಡ್ಡ ಕೊರೋನವೊಂದು ಪಕ್ಷವನ್ನು ಪ್ರವೇಶಿಸಿದೆ" ಎಂದು ಸಚಿನ್ ಪೈಲಟ್‌ರ ವಿರುದ್ಧ ಅಶೋಕ್ ಗೆಹ್ಲೋಟ್ ಸಭೆಯೊಂದರಲ್ಲಿ ಪರೋಕ್ಷವಾಗಿ ಕಿಡಿ ಕಾರಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು ndtv.com ವರದಿ ಮಾಡಿದೆ.

ಈ ವಿಡಿಯೊ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸರ್ಕಾರಿ ನೌಕರರೊಂದಿಗೆ ಏರ್ಪಡಿಸಿದ್ದ ಬಜೆಟ್ ಪೂರ್ವ ಸಭೆಗೆ ಸಂಬಂಧಿಸಿದ್ದೆಂದು ಹೇಳಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಯೊಬ್ಬರನ್ನು ಉದ್ದೇಶಿಸಿ, "ನಾನು ಸಭೆಯನ್ನು ಪ್ರಾರಂಭಿಸಿದ್ದೇನೆ.. ಮೊದಲು ಕೊರೋನ ಬಂತು.. ಇದರೊಂದಿಗೆ ದೊಡ್ಡ ಕೊರೋನವೊಂದು ನಮ್ಮ ಪಕ್ಷವನ್ನೂ ಪ್ರವೇಶಿಸಿದೆ" ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಅಶೋಕ್ ಗೆಹ್ಲೋಟ್ ಕಿಡಿ ಕಾರಿರುವುದು ಆ ವಿಡಿಯೋದಲ್ಲಿ ದಾಖಲಾಗಿದೆ.

ಉಪ ಚುನಾವಣೆಗಳು ಅಥವಾ ರಾಜ್ಯಸಭೆ ಚುನಾವಣೆಗಳ ಹೊರತಾಗಿಯೂ ರಾಜ್ಯ ನೌಕರರ ಬೆಂಬಲದಿಂದ ಸರ್ಕಾರವು ಅದ್ಭುತ ಯೋಜನೆಗಳನ್ನು ಜಾರಿಗೊಳಿಸಿದೆ ಎಂದೂ ಅಶೋಕ್ ಗೆಹ್ಲೋಟ್ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ.

ತಮ್ಮ ಸರ್ಕಾರದ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಿರುವ ಸಚಿನ್ ಪೈಲಟ್ ವಿರುದ್ಧ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡೆಸಿರುವ ಪ್ರತಿ ದಾಳಿ ಎಂದೇ ಈ ಮಾತುಗಳನ್ನು ವ್ಯಾಖ್ಯಾನಿಸಲಾಗುತ್ತಿದೆ.

ಸೋಮವಾರದಿಂದ ವಿವಿಧ ಜಿಲ್ಲೆಗಳಲ್ಲಿ ಪ್ರತಿ ದಿನ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿರುವ ಸಚಿನ್ ಪೈಲಟ್, ಪ್ರಶ್ನೆ ಪತ್ರಿಕೆ ಸೋರಿಕೆ, ಪಕ್ಷದ ಕಾರ್ಯಕರ್ತರ ನಿರ್ಲಕ್ಷ್ಯ ಹಾಗೂ ನಿವೃತ್ತ ಅಧಿಕಾರಿಗಳ ರಾಜಕೀಯ ನೇಮಕಾತಿಯನ್ನು ಪ್ರಸ್ತಾಪಿಸಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧದ ತಮ್ಮ ದಾಳಿಯನ್ನು ತೀವ್ರಗೊಳಿಸಿದ್ದಾರೆ.

2018ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಅಧಿಕಾರಕ್ಕಾಗಿನ ಕಿತ್ತಾಟ ಮುಂದುವರಿದಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ ತಲುಪಿದ ಭಾರತ್ ಜೋಡೊ ಯಾತ್ರೆ: ಕಥುವಾ ಅತ್ಯಾಚಾರಿಗಳನ್ನು ಬೆಂಬಲಿಸಿದ್ದ ಲಾಲ್ ಸಿಂಗ್ ಭಾಗಿ

Similar News