ಸಗಣಿಯಿಂದ ಮಾಡಿದ ಮನೆಗಳು ಅಣುವಿಕಿರಣದಿಂದ ರಕ್ಷಿಸುತ್ತವೆ ಎಂದ ಗುಜರಾತ್‌ ಕೋರ್ಟ್

ಗೋಕಳ್ಳಸಾಗಾಟದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Update: 2023-01-21 10:35 GMT

ಹೊಸದಿಲ್ಲಿ: ಗೋ ಸಗಣಿಯಿಂದ (cow dung) ನಿರ್ಮಿಸಿದ ಮನೆಗಳು ಅಣು ವಿಕಿರಣದಿಂದ ರಕ್ಷಿಸುತ್ತವೆ. ಗೋಮೂತ್ರವು ಹಲವು ರೋಗಗಳಿಗೆ ಪರಿಹಾರವಾಗಿದೆ ಎಂದು ಗುಜರಾತ್‌ನ (Gujarat) ತಾಪಿ ಎಂಬಲ್ಲಿನ ವ್ಯಾರ ಪಟ್ಟಣದ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರು ಅಬಿಪ್ರಾಯ ವ್ಯಕ್ತಪಡಿಸಿದ್ದಾರೆಂದು newsclick.in ವರದಿ ಮಾಡಿದೆ.

"ವಧೆ ಉದ್ದೇಶದಿಂದ ಅಕ್ರಮವಾಗಿ ಗೋಸಾಗಾಟ ಮಾಡಿದ" ವ್ಯಕ್ತಿಗೆ ಜೀವಾವಧಿ  ಶಿಕ್ಷೆ ವಿಧಿಸಿದ ಕ್ರಮವನ್ನು ಸಮರ್ಥಿಸಿ ನ್ಯಾಯಾಲಯ ಮೇಲಿನಂತೆ ಹೇಳಿದೆ.

22 ವರ್ಷದ ಮುಹಮ್ಮದ್‌ ಅಮೀನ್‌ ಎಂಬ ಮಹಾರಾಷ್ಟ್ರದ ಮಾಲೆಗಾಂವ್‌ ನಿವಾಸಿಯಾಗಿರುವ ಯುವಕನಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ. 5 ಲಕ್ಷ ದಂಡವನ್ನು ಗುಜರಾತ್‌ ಪ್ರಾಣಿ ಸಂರಕ್ಷಣಾ ಕಾಯಿದೆಯ ಸೆಕ್ಷನ್‌ 5, 6, 7 ಮತ್ತಿತರ ಕಾಯಿದೆಗಳನ್ವಯ ವಿಧಿಸಿತ್ತು. "ದಂಡ ಪಾವತಿಸಲು ವಿಫಲನಾದರೆ ಇನ್ನೂ ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು," ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಸಮೀರ್‌ ವಿನೋದಚಂದ್ರ ವ್ಯಾಸ್ ಆದೇಶಿಸಿದ್ದಾರೆ.

"ಗೋಕಳ್ಳಸಾಗಾಟ ಸಮಾಜಕ್ಕೆ ತೋರುವ ಅಗೌರವ," ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಗೋವಿನ ಧಾರ್ಮಿಕ ಪ್ರಾಮುಖ್ಯದ ಬಗ್ಗೆಯೂ ನ್ಯಾಯಾಧೀಶರು ಹೇಳಿಕೊಂಡಿದ್ದಾರೆ ಹಾಗೂ "ತ್ರಿದೇವಿಗಳು ಗೋವಿನಿಂದ ಪ್ರತ್ಯೇಕವಾಗಿಲ್ಲ, ದೇವಿಯರಾದ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿ/ಕಾಳಿ ಆದಿ ಗೋ ಸುರಭಿಯಿಂದ ಮೂಡಿದ್ದಾರೆ," ಎಂದಿದ್ದಾರೆ.

"ಗೋವು ರುದ್ರನ ಮಾತೆ, ವಾಸುವಿನ ಪುತ್ರಿ, ಆದಿ ಪುತ್ರರ ಸಹೋದರಿ ಮತ್ತು ಧ್ರುವ ರೂಪ್‌ ಅಮೃತ್‌ ಆಗಿದೆ," ಎಂದೂ ನ್ಯಾಯಾಲಯ ಹೇಳಿದೆ.

ಅಷ್ಟೇ ಅಲ್ಲದೆ ತೀರ್ಪಿನಲ್ಲಿ ವೇದದ ಹಲವು ಶ್ಲೋಕಗಳನ್ನೂ ಉಲ್ಲೇಖಿಸಲಾಗಿದೆ ಎಂದು newsclick.in ವರದಿ ಮಾಡಿದೆ.

ಇದನ್ನೂ ಓದಿ: ಮೈಸೂರು: ಸಿದ್ದರಾಮಯ್ಯ, ಝಮೀರ್ ಅಹ್ಮದ್ ಗೌಪ್ಯ ಮಾತುಕತೆ?

Similar News