ಶೇರು ಬೆಲೆಗಳಲ್ಲಿ ಹಸ್ತಕ್ಷೇಪ ಆರೋಪ: ಹಿಂಡೆನ್ ಬರ್ಗ್ ವಿರುದ್ಧ ಕಾನೂನು ಕ್ರಮಕ್ಕೆ ಅದಾನಿ ಗ್ರೂಪ್ ಚಿಂತನೆ

Update: 2023-01-26 16:45 GMT

ಹೊಸದಿಲ್ಲಿ,ಜ.26: ಅಮೆರಿಕ ಮೂಲದ ಹಿಂಡೆನ್ ಬರ್ಗ್ ರೀಸರ್ಚ್ ನ ವರದಿಯು ತನ್ನ ಶೇರುದಾರರು ಮತ್ತು ಹೂಡಿಕೆದಾರರ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡಿದ್ದು,ಅದರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲು ತಾನು ಚಿಂತನೆ ನಡೆಸಿರುವುದಾಗಿ ಅದಾನಿ ಗ್ರೂಪ್ ಗುರುವಾರ ತಿಳಿಸಿದೆ.

ಅದಾನಿ ಗ್ರೂಪ್ ವಿದೇಶಿ ತೆರಿಗೆ ಸ್ವರ್ಗಗಳ ಅನುಚಿತ ಬಳಕೆಯನ್ನು ಮಾಡಿಕೊಂಡಿದೆ ಹಾಗೂ ಕೃತಕವಾಗಿ ಬೆಲೆ ಹೆಚ್ಚಿಸಲಾದ ತನ್ನ ಲಿಸ್ಟೆಡ್ ಕಂಪನಿಗಳ ಶೇರುಗಳ ಆಧಾರದಲ್ಲಿ ಕೋಟಿಗಟ್ಟಲೆ ರೂ.ಗಳ ಸಾಲಗಳನ್ನು ಪಡೆದಿದೆ,ಹೀಗಾಗಿ ಇಡೀ ಗ್ರೂಪ್ ಅನಿಶ್ಚಿತ ಆರ್ಥಿಕ ನೆಲೆಯ ಮೇಲೆ ನಿಂತಿದೆ ಎಂದು ಹಿಂಡನ್ಬರ್ಗ್ ಬುಧವಾರ ತನ್ನ ವರದಿಯಲ್ಲಿ ಆರೋಪಿಸಿತ್ತು. ಇದರ ಬೆನ್ನಲ್ಲೇ ಅದಾನಿ ಗ್ರೂಪ್ನ ಎಲ್ಲ ಏಳೂ ಲಿಸ್ಟೆಡ್ ಕಂಪನಿಗಳ ಶೇರುಗಳು ಭಾರೀ ಕುಸಿತಕ್ಕೊಳಗಾಗಿದ್ದು,ಹೂಡಿಕೆದಾರಿಗೆ ಅಪಾರ ನಷ್ಟವುಂಟಾಗಿದೆ.

‘ಹಿಂಡನ್ಬರ್ಗ್ (Hindenburg) ವಿರುದ್ಧ ಪರಿಹಾರಾತ್ಮಕ ಮತ್ತು ದಂಡನಾತ್ಮಕ ಕ್ರಮಕ್ಕಾಗಿ ಅಮೆರಿಕ ಮತ್ತು ಭಾರತೀಯ ಕಾನೂನುಗಳಡಿ ಸಂಬಂಧಿತ ನಿಬಂಧನೆಗಳನ್ನು ನಾವು ತೂಗಿ ನೋಡುತ್ತಿದ್ದೇವೆ ’ ಎಂದು ಅದಾನಿ ಗ್ರೂಪ್ ನ ಕಾನೂನು ವಿಭಾಗದ ಮುಖ್ಯಸ್ಥ ಜತಿನ್ ಜಲುಂಧವಾಲಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂಡನ್ಬರ್ಗ್ (Hindenburg) ಪ್ರಕಟಿಸಿದ ದುರುದ್ದೇಶಪೂರಿತ,ಕುಚೇಷ್ಟೆಯ, ಸಂಶೋಧನೆಯನ್ನು ನಡೆಸಿರದ ವರದಿಯು ಅದಾನಿ ಗ್ರೂಪ್,ನಮ್ಮ ಶೇರುದಾರರು ಮತ್ತು ಹೂಡಿಕೆದಾರರ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು  ಮಾಡಿದೆ. ವರದಿಯು ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಸೃಷ್ಟಿಸಿದ ಏರಿಳಿತಗಳು ತೀವ್ರ ಕಳವಳಕಾರಿಯಾಗಿವೆ ಮತ್ತು ಭಾರತೀಯ ಪ್ರಜೆಗಳ ಅನಪೇಕ್ಷಿತ ನೋವಿಗೆ ಕಾರಣವಾಗಿವೆ ಎಂದು ಜಲುಂಧವಾಲಾ ತಿಳಿಸಿದ್ದಾರೆ.

ವರದಿ ಮತ್ತು ಅದರಲ್ಲಿರುವ ಆಧಾರರಹಿತ ಹೇಳಿಕೆಗಳು ಅದಾನಿ ಗ್ರೂಪ್ ನ ಕಂಪನಿಗಳ ಶೇರುಗಳ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುವಂತಿವೆ. ಹಿಂಡನ್ಬರ್ಗ್(Hindenburg) ತಾನೇ ಒಪ್ಪಿಕೊಂಡಿರುವಂತೆ ಅದಾನಿ ಶೇರುಗಳ ಬೆಲೆ ಕುಸಿತದಿಂದ ಅದು ಲಾಭ ಮಾಡಿಕೊಳ್ಳುವ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದ್ದಾರೆ. ಅದಾನಿ ಗ್ರೂಪ್ ನು  ಶೇರುಗಳಲ್ಲಿ ತಾನು ಶಾರ್ಟ್ ಪೊಸಿಷನ್ ಗಳನ್ನು ಹೊಂದಿರುವುದಾಗಿ ಹಿಂಡನ್ಬರ್ಗ್ (Hindenburg)  ತಿಳಿಸಿತ್ತು.

ಹಿಂಡನ್ಬರ್ಗ್ ನ  ಆರೋಪವು ಅದಾನಿ ಗ್ರೂಪ್ ನ ಮುಂಚೂಣಿಯ ಕಂಪನಿ ಅದಾನಿ ಎಂಟರ್ಪ್ರೈಸಸ್ ನ ಶೇರು ಮಾರಾಟ ಪ್ರಕ್ರಿಯೆಯನ್ನು ಹಾಳು ಮಾಡುವ ಪ್ರಯತ್ನವಾಗಿದೆ ಎಂದೂ ಜಲುಂಧವಾಲಾ ಹೇಳಿದ್ದಾರೆ.

ಇದನ್ನು ಓದಿ: ಗಮನ ಸೆಳೆಯುತ್ತಿರುವ 74ನೇ ಗಣರಾಜ್ಯೋತ್ಸವದ ಗೂಗಲ್ ಡೂಡಲ್ ರಚಿಸಿದ ಕಲಾವಿದ ಪಾರ್ಥ್ ಕೊಥೆಕರ್ ಯಾರೆಂದು ಗೊತ್ತೆ?

Similar News