ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಚೆನ್ನೈನ ಅತಿ ಕಿರಿಯ ಮಹಾನಗರ ಪಾಲಿಕೆ ಸದಸ್ಯೆಯನ್ನು ವಶಕ್ಕೆ ಪಡೆದ ಪೊಲೀಸರು

Update: 2023-01-27 10:54 GMT

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ (BBC) ನಿರ್ಮಿಸಿರುವ ಸಾಕ್ಷ್ಯಚಿತ್ರದ ವಿಡಿಯೋ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜನವರಿ 26ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬೃಹತ್ ಚೆನ್ನೈ ಮಹಾನಗರ ಪಾಲಿಕೆಯ ಅತ್ಯಂತ ಕಿರಿಯ ಸದಸ್ಯೆ ಹಾಗೂ ತೆಯಾಂಪೇಟ್ ವಾರ್ಡ್‌ನ ನಗರ ಪಾಲಿಕೆ ಸದಸ್ಯೆ ಪ್ರಿಯದರ್ಶಿನಿ ಅವರನ್ನು ಪೊಲೀಸರು ಕೆಲ ಕಾಲ ವಶಕ್ಕೆ ಪಡೆದಿದ್ದರು ಎಂದು thenewsminute.com ವರದಿ ಮಾಡಿದೆ.

ಭಾರತೀಯ ಕಮ್ಯೂನಿಸ್ಟ್‌ ಪಕ್ಷ(ಮಾರ್ಕ್ಸ್‌ವಾದಿ)ದ ವಿದ್ಯಾರ್ಥಿ ಘಟಕವಾದ ಭಾರತೀಯ ಪ್ರಜಾಸತ್ತಾತ್ಮಕ ಯುವ ಒಕ್ಕೂಟವು ಚೆನ್ನೈನ ಟಿ.ಪಿ.ಛತ್ರಂ ಬಳಿ ಇರುವ ಬಿ.ಆರ್.ಅಂಬೇಡ್ಕರ್ ಪ್ರತಿಮೆಯೆದುರು ಆಯೋಜಿಸಲಾಗಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು  ಕೇಂದ್ರ ಸರ್ಕಾರ ನಿಷೇಧಿಸಿರುವ ಬಿಬಿಸಿಯ "India: The Modi Question' ಸಾಕ್ಷ್ಯಚಿತ್ರದ ವಿಡಿಯೊವನ್ನು ಒಟ್ಟಾಗಿ ವೀಕ್ಷಿಸಲು ಆ ವಿಡಿಯೊದ ಕೊಂಡಿಗಳನ್ನು ಹಂಚಿಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು 14 ಮಂದಿ ಪ್ರತಿಭನಾಕಾರರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು ಎಂದು ನಗರಪಾಲಿಕೆ ಸದಸ್ಯೆಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ಹೀಗಿದ್ದೂ ಪ್ರತಿಭಟನಾಕಾರರು ಬಿಬಿಸಿ ಸಾಕ್ಷ್ಯಚಿತ್ರವನ್ನು ವೀಕ್ಷಿಸುವಲ್ಲಿ ಸಫಲರಾದರು ಎಂದು ನಗರಪಾಲಿಕೆ ಸದಸ್ಯೆಯ ಕುಟುಂಬದ ಸದಸ್ಯರು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.

ಭಾರತೀಯ ಕಮ್ಯೂನಿಸ್ಟ್‌ ಪಕ್ಷ(ಮಾರ್ಕ್ಸ್‌ವಾದ)ದ ಸದಸ್ಯೆಯಾಗಿರುವ ಪ್ರಿಯದರ್ಶಿನಿ, ವಾರ್ಡ್ ನಂ. 98, ತೆಯಾಂಪೇಟ್‌ನಿಂದ ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 5,253 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಅವರಿಗೀಗ ಕೇವಲ 21 ವರ್ಷ ವಯಸ್ಸಾಗಿದ್ದು, ಬೃಹತ್ ಚೆನ್ನೈ ಮಹಾನಗರ ಪಾಲಿಕೆಯ ಅತ್ಯಂತ ಕಿರಿಯ ನಗರಪಾಲಿಕೆ ಸದಸ್ಯೆಯಾಗಿದ್ದಾರೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಬಳಕೆದಾರರಿಗೆ ಕೆಲವು ತುರ್ತು ಎಚ್ಚರಿಕೆ ನೀಡಿದ ಭಾರತ ಸರ್ಕಾರ

Similar News