ಮಹಿಳೆಯರು ಸೂಕ್ತ ವಯಸ್ಸಿನಲ್ಲಿ ತಾಯಂದಿರಾಗಬೇಕು: ಅಸ್ಸಾಂ ಸಿಎಂ ಹೇಳಿಕೆಗೆ ಆಕ್ರೋಶ

Update: 2023-01-29 04:39 GMT

ಗುವಾಹತಿ: ಮಹಿಳೆಯರು ಸೂಕ್ತ ವಯಸ್ಸಿನಲ್ಲಿ ಅಂದರೆ 22ರಿಂದ 30ನೇ ವಯಸ್ಸಿನ ನಡುವೆ ತಾಯಂದಿರಾಗಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ನೀಡಿರುವ ಹೇಳಿಕೆ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.

"ಮಹಿಳೆಯರು ತಾಯಂದಿರಾಗಲು ಉತ್ತಮ ವಯಸ್ಸೆಂದರೆ 22 ರಿಂದ 30ನೇ ವರ್ಷ. ಮಹಿಳೆಯರು ಇದನ್ನು ಅನುಸರಿಸಿದರೆ ಅದು ಅವರಿಗೆ ಹಾಗೂ ಮಕ್ಕಳಿಗೆ ಉತ್ತಮ. 30ರ ಆಸುಪಾಸಿನಲ್ಲಿರುವ ಮಹಿಳೆಯರು ಶೀಘ್ರ ವಿವಾಹವಾಗಬೇಕು" ಎಂದು ಸಮಾರಂಭವೊಂದರಲ್ಲಿ ಮಾತನಾಡಿದ ಸಿಎಂ ಹೇಳಿದ್ದರು.

ಮುಖ್ಯಮಂತ್ರಿ ಹೇಳಿಕೆಯನ್ನು ಹಲವು ಮಂದಿ ಮಹಿಳಾ ಹೋರಾಟಗಾರ್ತಿಯರು ಟೀಕಿಸಿದ್ದು, ಮಹಿಳೆಯರ ಪ್ರಮುಖ ಸಮಸ್ಯೆಗಳ ಬಗ್ಗೆ ಮತ್ತು ನೈತಿಕ ಪೊಲೀಸ್ ಗಿರಿ ನಿಗ್ರಹಿಸುವ ಬಗ್ಗೆ ಮಾತನಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಸ್ಸಾಂನ ಸಿಲ್ಚೇರ್‌ನ ಸಾಮಾಜಿಕ ಹೋರಾಟಗಾರ್ತಿ ಹಾಗೂ ವಕೀಲೆ ಪೌಲೋಮಿ ನಾಗ್ (34) ಈ ಬಗ್ಗೆ ಪ್ರತಿಕ್ರಿಯಿಸಿ, ಇದರ ಬದಲು ಸಿಎಂ ಉದ್ಯೋಗ ಸೃಷ್ಟಿಯ ಬಗ್ಗೆ ಯೋಚಿಸಿ, ನವಜಾತ ಮಕ್ಕಳ ಬದುಕು ಉತ್ತಮವಾಗಲು ನೆರವು ನೀಡಬೇಕು ಎಂದು ಚುಚ್ಚಿದ್ದಾರೆ. ಸಿಎಂ ಕೇವಲ ವಕೀಲರು; ಮಹಿಳೆಯರು 30ರ ಮುನ್ನ ಗರ್ಭ ಧರಿಸಬೇಕು ಎಂದು ಸಲಹೆ ಮಾಡಲು ವೈದ್ಯರಲ್ಲ ಎಂದು ಅವರು ಹೇಳಿದ್ದಾರೆ.

ತಾಯ್ತನದ ಒತ್ತಡ ಮತ್ತು ಕಡಿಮೆ ಮಾತೃತ್ವ ಆರೈಕೆಯ ಕಾರಣದಿಂದ ಮಹಿಳೆಯರು ಹೆಚ್ಚು ಹೆಚ್ಚಾಗಿ ಉದ್ಯೋಗ ತೊರೆಯಬೇಕಾಗುತ್ತದೆ ಎಂದು ಪತ್ರಕರ್ತೆ ಶುಭಂ ಸುರಿತಾ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಇಂಥ ಹೇಳಿಕೆ ನೀಡುವ ಬದಲು ಮಹಿಳೆಯರಿಗೆ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ಹಾಗೂ ಭದ್ರತೆ ಒದಗಿಸುವ ಬಗ್ಗೆ ಗಮನ ಹರಿಸಬೇಕು ಎಂದು ಗುವಾಹತಿ ಮೂಲದ ಅನುರುತಾ ಹಜಾರಿಕಾ ಸಲಹೆ ಮಾಡಿದ್ದಾರೆ.

Similar News