ಪಿಎಂ ಕೇರ್ಸ್ ನಿಧಿ ಸಾರ್ವಜನಿಕ ಪ್ರಾಧಿಕಾರವಲ್ಲ, RTI ಕಾಯ್ದೆ ಅನ್ವಯಿಸುವುದಿಲ್ಲ: ಕೇಂದ್ರ ಸರಕಾರ

Update: 2023-01-31 14:38 GMT

ಹೊಸದಿಲ್ಲಿ, ಜ. 31: ಪಿಎಂ ಕೇರ್ಸ್ ಪಂಡ್ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ)ಯ ವ್ಯಾಖ್ಯಾನದ ಅಡಿಯಲ್ಲಿ ‘ಸಾರ್ವಜನಿಕ ಪ್ರಾಧಿಕಾರ’ ಅಲ್ಲ ಹಾಗೂ ಈ ಟ್ರಸ್ಟ್ ಕಾಯ್ದೆಯ ನಿಬಂಧನೆ ಅಡಿಯಲ್ಲಿ ಬರುವುದಿಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. 

ಪಿಎಂ ಕೇರ್ಸ್ ನಿಧಿಯನ್ನು ಭಾರತದ ಸಂವಿಧಾನದ ಅಡಿಯಲ್ಲಿ ಅಥವಾ ಸಂಸತ್ತು, ರಾಜ್ಯ ಶಾಸಕಾಂಗ ರೂಪಿಸಿದ ಯಾವುದೇ ಕಾನೂನಿನ ಅಡಿಯಲ್ಲಿ ರೂಪಿಸಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡಾವಿಟ್ನಲ್ಲಿ ಕೇಂದ್ರ ಸರಕಾರ ತಿಳಿಸಿದೆ. ಈ ಟ್ರಸ್ಟ್ ಯಾವುದೇ ಸರಕಾರದಿಂದಾಗಲಿ, ಸರಕಾರಕ್ಕೆ ಸೇರಿದ ಸಂಸ್ಥೆಯಿಂದಾಗಲಿ ಒಡೆತನ, ನಿಯಂತ್ರಣವನ್ನು ಹೊಂದಿಲ್ಲ ಅಥವಾ ಹೆಚ್ಚಿನ ಹಣ ಹೂಡಿಕೆ ಮಾಡಿಲ್ಲ. ಮುಂದೆ ಹಣ ಹೂಡಿಕೆ ಮಾಡುವ ಉದ್ದೇಶವೂ ಇಲ್ಲ. ಕೇಂದ್ರ ಸರಕಾರವಾಗಲಿ ಯಾವುದೇ ರಾಜ್ಯ ಸರಕಾರವಾಗಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈ ಟ್ರಸ್ಟ್ನ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯಲ್ಲಿ ನಿಯಂತ್ರಣವನ್ನು ಹೊಂದಿಲ್ಲ ಎಂದು ಅಫಿಡಾವಿಟ್ ಹೇಳಿದೆ. 

ಪಿಎಂ ಕೇರ್ಸ್ ನಿಧಿಯ ಕಾರ್ಯ ನಿರ್ವಹಣೆಯ ಪಾರದರ್ಶಕತೆಗೆ ಸಂವಿಧಾನದ ಅಡಿಯಲ್ಲಿ ಘೋಷಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಕೇಂದ್ರ ಸರಕಾರ ಜುಲೈಯಲ್ಲಿ ಸಲ್ಲಿಸಿದ ಒಂದು ಪುಟಗಳ ಪ್ರತಿಕ್ರಿಯೆ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸುಬ್ರಹ್ಮಣೀಯಮ್ ಪ್ರಸಾದ್ ಅವರನ್ನು ಒಳಗೊಂಡ ಪೀಠ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಕೇಂದ್ರ ಸರಕಾರ ಈ ವಿಸ್ತೃತ ಪ್ರತಿಕ್ರಿಯೆ ಸಲ್ಲಿಸಿದೆ. 

ಉಪ ರಾಷ್ಟ್ರಪತಿಯಂತಹ ಸರಕಾರದ ಉನ್ನತ ಅಧಿಕಾರಿಯಾಗಿರುವವರು ದೇಣಿಗೆ ನೀಡುವಂತೆ ರಾಜ್ಯ ಸಭೆಯ ಸದಸ್ಯರಲ್ಲಿ ಮನವಿ ಮಾಡಿದ್ದಾರೆ ಹಾಗೂ ಪಿಎಂ ಕೇರ್ಸ್ ನಿಧಿಯನ್ನು ಸರಕಾರದ ನಿಧಿ ಎಂದು ಬಿಂಬಿಸಿದ್ದಾರೆ ಎಂದು ದೂರುದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಶ್ಯಾಮ್ ಧವನ್ ವಾದಿಸಿದರು. ಅದಾಗ್ಯೂ ಅಫಿಡಾವಿಟ್ ಪಿಎಂ ಕೇರ್ಸ್ ನಿಧಿಯನ್ನು ‘‘ಸಾರ್ವಜನಿಕ ದತ್ತಿ ಟ್ರಸ್ಟ್’’ ಎಂದು ಕರೆಯುತ್ತದೆ. ಇದು ಕೇವಲ ಸ್ವಯಂಪ್ರೇರಿತ ದೇಣಿಗೆ ಹೊರತು ಕೇಂದ್ರದ ವ್ಯವಹಾರ ಅಲ್ಲ ಎಂದು ಹೇಳಿದೆ. ಪಿಎಂ ಕೇರ್ಸ್ ನಿಧಿ ಸರಕಾರದಿಂದ ನಿಧಿಯನ್ನಾಗಲಿ, ಹಣಕಾಸಿನ ನೆರವನ್ನಾಗಲಿ ಸ್ವೀಕರಿಸಿಲ್ಲ ಎಂದು ಅಫಿಡಾವಿಟ್ ತಿಳಿಸಿದೆ.

Similar News