ಶಾಲಾ ಮಕ್ಕಳ ಸಮವಸ್ತ್ರ ಪೂರೈಕೆ ವ್ಯವಸ್ಥಿತವಾಗಲಿ

Update: 2023-02-01 18:48 GMT

ಮಾನ್ಯರೇ,

ಉಳ್ಳವರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಾರೆ. ಸರಕಾರಿ ಶಾಲೆಗೆ ಮಕ್ಕಳು ಹೆಚ್ಚಾಗಿ ಗ್ರಾಮಾಂತರ ಭಾಗದಿಂದ ಬರುತ್ತಾರೆ. ಅಪ್ಪ, ಅಮ್ಮ ಕೂಲಿ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಹರಸಾಹಸ ಪಡುತ್ತಾರೆೆ. ಸರಕಾರ ಮಕ್ಕಳಿಗೆ ಸಮವಸ್ತ್ರ ನೀಡುವುದರಿಂದ ಮಕ್ಕಳಲ್ಲಿ ಭೇದ-ಭಾವ ಉಂಟಾಗದು. ಆದರೆ ಸರಕಾರಿ ಶಾಲಾ ಮಕ್ಕಳಿಗೆ ಸರಿಯಾದ ಸಮವಸ್ತ್ರ ಸಿಗದಿದ್ದರೆ ಸರಕಾರಿ ಶಾಲೆಯ ಬಗ್ಗೆ ಮಕ್ಕಳಿಗೆ ಕೀಳರಿಮೆ ಉಂಟಾಗಬಹುದು.
ಖಾಸಗಿ ಶಾಲೆಯಲ್ಲಿ ವರ್ಷಕ್ಕೊಮ್ಮೆ ಸಮವಸ್ತ್ರವನ್ನು ಬದಲಾವಣೆ ಮಾಡುವ ಪದ್ಧತಿ ಇದೆ. ಆದರೆ ಸರಕಾರಿ ಶಾಲೆಯಲ್ಲಿ ಇದು ಸಾಧ್ಯವಾಗುತ್ತಿಲ್ಲ. ಮಕ್ಕಳು ಇರುವ ಒಂದೇ ಜೊತೆ ಬಟ್ಟೆ ಹಾಕಿಕೊಂಡು ಪ್ರತಿದಿನವೂ ಹೇಗೆ ಹೋಗಲು ಸಾಧ್ಯ? ಒಂದೇ ಬಟ್ಟೆಯನ್ನು ಪ್ರತಿದಿನ ಹಾಕುವುದರಿಂದ ಆ ಬಟ್ಟೆ ಕೊಳೆಯಾಗುವುದಿಲ್ಲವೇ? ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಇದು ಪರಿಣಾಮ ಬಿರುವುದಿಲ್ಲವೇ?
ಸಮವಸ್ತ್ರವಿಲ್ಲದೆ ಶಾಲೆಗೆ ಹೋದರೆ ಶಿಕ್ಷಕರು ತರಗತಿಯಿಂದ ಹೊರಗಡೆ ಹಾಕುತ್ತಾರೆ. ಇದನ್ನೆಲ್ಲಾ ಸಹಿಸಿಕೊಂಡು ವಿದ್ಯಾರ್ಥಿಗಳು ಕಲಿಕೆಯತ್ತ ಮುಂದುವರಿಯಲು ಸಾಧ್ಯವೇ?.
ಖಾಸಗಿ ಶಾಲೆಗಳಲ್ಲಿ ಇರುವ ಹಾಗೆ ಹೆಚ್ಚಿನ ಸರಕಾರಿ ಶಾಲೆಗಳಲ್ಲಿ ಸರಿಯಾದ ಗ್ರಂಥಾಲಯ, ಶೌಚಾಲಯ ಮತ್ತಿತರ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಆದರೂ ಸರಕಾರಿ ಶಾಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಹೈಕೋರ್ಟ್ ಹೇಳಿದಂತೆ ಉತ್ಸವಗಳಿಗೆ ಸರಕಾರವು ಕೋಟಿ ಕೋಟಿ ರೂ. ಖರ್ಚು ಮಾಡುತ್ತದೆ. ಆದರೆ ಸರಕಾರಿ ಶಾಲಾ ಮಕ್ಕಳನ್ನು ನಿರ್ಲಕ್ಷಿಸುವುದು ಬೇಸರದ ಸಂಗತಿ. ಇನ್ನಾದರೂ ಸರಕಾರ ಸರಿಯಾದ ಸಮವಸ್ತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು.
 

Similar News