ಕೊನೆಗೂ ಜೈಲಿನಿಂದ ಬಿಡುಗಡೆಯಾದ ಪತ್ರಕರ್ತ ಸಿದ್ದೀಕ್ ಕಪ್ಪನ್

Update: 2023-02-02 04:49 GMT

ಹೊಸದಿಲ್ಲಿ: ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ( Siddique Kappan) ಕೊನೆಗೂ ಎರಡು ವರ್ಷಗಳ ಬಳಿಕ ಉತ್ತರಪ್ರದೇಶದ ಲಕ್ನೋ ಜೈಲಿನಿಂದ ಗುರುವಾರ ಬೆಳಗ್ಗೆ ಬಿಡುಗಡೆಯಾದರು.

ತನ್ನ ವಿರುದ್ಧದ 2 ಪ್ರಕರಣಗಳಲ್ಲಿ ಜಾಮೀನು ಪಡೆದ ತಿಂಗಳಿಗೂ ಹೆಚ್ಚು ಸಮಯದ ನಂತರ ಲಕ್ನೋದ ವಿಶೇಷ ನ್ಯಾಯಾಲಯವು ಅವರನ್ನು ಬಿಡುಗಡೆಗೊಳಿಸುವ ಆದೇಶಕ್ಕೆ ಸಹಿ ಹಾಕಿದೆ.

 ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ 2022ರ ಡಿಸೆಂಬರ್ 23ರಂದು ಪಿಎಂಎಲ್‌ಎ ಪ್ರಕರಣದಲ್ಲಿ ಕಪ್ಪನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ  20 ವರ್ಷದ ದಲಿತ ಯುವತಿಯ ಮೇಲೆ  ಸಾಮೂಹಿಕ ಅತ್ಯಾಚಾರ ಹಾಗೂ  ಸಾವಿನ ಬಗ್ಗೆ ವರದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್‌ಗೆ ಹೋಗುತ್ತಿದ್ದಾಗ 2020ರ ಅಕ್ಟೋಬರ್ ನಲ್ಲಿ ಕಪ್ಪನ್ ರನ್ನು ಬಂಧಿಸಲಾಯಿತು. ಅಲ್ಲಿ ಅವರು ಅಶಾಂತಿ ಸೃಷ್ಟಿಸಲು ಹೋಗುತ್ತಿದ್ದಾರೆ  ಎಂದು ಪೊಲೀಸರು ಆರೋಪಿಸಿದ್ದರು.

ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಯಿತು ಹಾಗೂ  ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ನಿಷೇಧಿತ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾದಿಂದ ಹಣವನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯವು ಫೆಬ್ರವರಿ 2022 ರಲ್ಲಿ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.

ಕಪ್ಪನ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಯೋತ್ಪಾದನೆ ಪ್ರಕರಣದಲ್ಲಿ ಹಾಗೂ ಡಿಸೆಂಬರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ಆದರೆ ಸರಕಾರಿ ಅಧಿಕಾರಿಗಳ ಹಲವು  ವೈಫಲ್ಯದಿಂದಾಗಿ ಅವರ ಬಿಡುಗಡೆಯನ್ನು ತಡೆಹಿಡಿಯಲಾಯಿತು.

Similar News