ನ್ಯಾಯಮೂರ್ತಿಗಳ ನೇಮಕ ವಿಚಾರ: ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್‌

Update: 2023-02-03 13:55 GMT

ಹೊಸದಿಲ್ಲಿ: ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್(Supreme Court) ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ 10 ದಿನಗಳ ಕಾಲಾವಕಾಶ ನೀಡಿದೆ. 

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್(Sanjay Kishan Kaul) ಮತ್ತು ನ್ಯಾಯಮೂರ್ತಿ ಅಭಯ್ ಎಸ್ ಓಕಾ (A.S.Oka)ಅವರಿದ್ದ ನ್ಯಾಯಪೀಠವು ಕೇಂದ್ರ ಸರ್ಕಾರವು ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂನ ಶಿಫಾರಸನ್ನು ಅಂಗೀಕರಿಸುವಲ್ಲಿ ವಿಳಂಬದ ಬಗ್ಗೆ ವಿಚಾರಣೆ ನಡೆಸುತ್ತಿದೆ. 

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇಂದ್ರಕ್ಕೆ ಕಳುಹಿಸಿರುವ ಐದು ಹೆಸರುಗಳನ್ನು ಯಾವಾಗ ತೆರವುಗೊಳಿಸಲಾಗುವುದು? ಎಂದು ಪೀಠವು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಎನ್ ವೆಂಕಟರಮಣಿ (N Venkataramani)ಅವರನ್ನು ಕೇಳಿದೆ. ಈ ಕುರಿತು ಶೀಘ್ರವೇ ಸೂಚನೆ ನೀಡಲಾಗುವುದು ಎಂದು ಅಟಾರ್ನಿ ಜನರಲ್ ಹೇಳಿದರು.
 
"ನಾವು ತುಂಬಾ ಅಹಿತಕರವಾದ ನಿಲುವನ್ನು ತೆಗೆದುಕೊಳ್ಳುವಂತೆ ಮಾಡಬೇಡಿ" ಎಂದು ನ್ಯಾಯಾಧೀಶರು ಮೌಖಿಕ ಅವಲೋಕನದಲ್ಲಿ ಹೇಳಿದರು ಎಂದು ಪಿಟಿಐ ವರದಿ ಮಾಡಿದೆ. ದೇಶದಲ್ಲಿ ನ್ಯಾಯಾಂಗ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ನ್ಯಾಯಾಂಗದ ನಡುವಿನ ಜಟಾಪಟಿಯ ನಡುವೆ ಈ ಹೇಳಿಕೆಗಳು ಬಂದಿವೆ.

ಡಿಸೆಂಬರ್ 14 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಐವರು ನ್ಯಾಯಾಧೀಶರಿಗೆ ಬಡ್ತಿ ನೀಡುವಂತೆ ಶಿಫಾರಸು ಮಾಡಿತ್ತು.  

ಶುಕ್ರವಾರ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರ ಪೀಠವು ಅಟಾರ್ನಿ ಜನರಲ್ ಎನ್ ವೆಂಕಟರಮಣಿ ಅವರನ್ನು ವರ್ಗಾವಣೆಯ ಸ್ಥಿತಿಯ ಕುರಿತು ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟರಮಣಿ ಅವರು, ಶಿಫಾರಸ್ಸುಗಳನ್ನು ಸರ್ಕಾರ ಶೀಘ್ರವೇ ತೆರವುಗೊಳಿಸಲಿದೆ ಎಂದರು.

"ಇದು ನಡೆಯುತ್ತಲೇ ಇದೆ! ಆದರೆ ಇದು ಯಾವಾಗ ಪೂರ್ಣಗೊಳ್ಳುತ್ತದೆ? ವರ್ಷಗಳಿಂದ ಕೆಲಸಗಳು ನಡೆಯುತ್ತಿಲ್ಲ." ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು. 

ಮುಂದಿನ ಶುಕ್ರವಾರದ ವೇಳೆಗೆ ಅಟಾರ್ನಿ ಜನರಲ್ ಕೆಲವು "ಶುಭ ಸುದ್ದಿ" ನೀಡಲಿದ್ದಾರೆ ಎಂದು ನಾವು ಭಾವಿಸುತ್ತೇವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ವೆಂಕಟರಮಣಿ ಅವರು ಇನ್ನೂ ಕೆಲವು ದಿನಗಳ ಕಾಲಾವಕಾಶವನ್ನು ಕೇಳಿದ್ದು, ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೌಲ್‌ ಹತ್ತು ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ.

Similar News