ಪತ್ನಿಯ ತಲೆಗೆ ಹೊಡೆದ ಆರೋಪ: ವಿನೋದ್ ಕಾಂಬ್ಳಿ ವಿರುದ್ಧ ಪ್ರಕರಣ

Update: 2023-02-05 03:13 GMT

ಮುಂಬೈ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಪಾನಮತ್ತನಾಗಿ ಪತ್ನಿಯನ್ನು ಬೈದು ತಲೆಯ ಮೇಲೆ ಹೊಡೆದ ಆರೋಪದಲ್ಲಿ ಕಾಂಬ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂಬೈನ ಬಾಂದ್ರಾ (ಪಶ್ಚಿಮ)ದ ಫ್ಲಾಟ್‌ನಲ್ಲಿ ಶುಕ್ರವಾರ ಕಾಂಬ್ಳಿ ಹಲ್ಲೆ ನಡೆಸಿದ್ದಾಗಿ ಪತ್ನಿ ದೂರು ನೀಡಿದ್ದಾರೆ. ಕಾಂಬ್ಳಿ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 324 (ಅಪಾಯಕಾರಿ ಅಸ್ತ್ರಗಳಿಂದ ಗಾಯಗೊಳಿಸುವುದು) ಮತ್ತು 504 (ಅವಮಾನ) ಅನ್ವಯ ದೂರು ದಾಖಲಿಸಲಾಗಿದೆ ಎಂದು ಬಾಂದ್ರಾ ಪೊಲೀಸರು ಹೇಳಿದ್ದಾರೆ. ಪತ್ನಿ ಆ್ಯಂಡ್ರಿಯಾ ಅವರ ತಲೆ ಮೇಲೆ ಕುಕ್ಕಿಂಗ್ ಪಾನ್‌ನ ಹ್ಯಾಂಡಲ್ ಎಸೆದಿದ್ದಾಗಿ ಆಪಾದಿಸಲಾಗಿದೆ. ಇದರಿಂದ ಆಕೆಯ ತಲೆಗೆ ಗಾಯವಾಗಿದೆ. ಈ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ ಎಂದು ಆ್ಯಂಡ್ರಿಯಾ ಸ್ಪಷ್ಟಪಡಿಸಿದ್ದಾರೆ.

ಮಧ್ಯಾಹ್ನ 1 ಗಂಟೆಯಿಂದ 1.30ರ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಪಾನಮತ್ತನಾಗಿ ಫ್ಲಾಟ್‌ಗೆ ಬಂದ ಕಾಂಬ್ಳಿ ಪತ್ನಿಯನ್ನು ಬೈದಾಡಲು ಆರಂಭಿಸಿದ್ದಾಗಿ ತಿಳಿದು ಬಂದಿದೆ. ಕಾಂಬ್ಳಿಯ 12 ವರ್ಷದ ಮಗ ಈ ಘಟನೆಗೆ ಸಾಕ್ಷಿಯಾಗಿದ್ದು, ತಂದೆಯನ್ನು ಸಮಾಧಾನಪಡಿಸಲು ಯತ್ನಿಸಿದ್ದ ಎನ್ನಲಾಗಿದೆ. ಆದರೆ ಅಡುಗೆ ಮನೆಗೆ ಧಾವಿಸಿದ ಕಾಂಬ್ಳಿ ಪಾನ್ ಹ್ಯಾಂಡಲ್ ಅನ್ನು ಪತ್ನಿಯತ್ತ ಎಸೆದಿದ್ದಾಗಿ ದೂರು ನೀಡಲಾಗಿದೆ.

ಗಾಗಯಗೊಂಡ ಆ್ಯಂಡ್ರಿಯಾ ಮೊದಲು ಬಾಭಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದ ಬಳಿಕ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು ಎಂದು ಪೊಲೀಸರು ವಿವರಿಸಿದ್ದಾರೆ. ಘಟನೆ ಬಳಿಕ ಕಾಂಬ್ಳಿ ಮೊಬೈಲ್ ಸ್ವಿಚ್ ಆಫ್ ಆಗಿದೆ.

Similar News