ಪಿಎಂ ಆವಾಸ್ ಯೋಜನೆಯ ಹಣ ಮಂಜೂರಾಗುತ್ತಿದ್ದಂತೆಯೇ ಪ್ರೇಮಿಗಳೊಂದಿಗೆ ಪರಾರಿಯಾದ 4 ವಿವಾಹಿತೆಯರು!
ಲಕ್ನೋ: ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ (Pradhan Mantri Awas Yojana (PMAY)) ಮಂಜೂರಾದ ಹಣದೊಂದಿಗೆ ತಮ್ಮ ಪ್ರೇಮಿಗಳೊಂದಿಗೆ ನಾಲ್ಕು ಮಂದಿ ವಿವಾಹಿತ ಮಹಿಳೆಯರು ಪರಾರಿಯಾದ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಯೋಜನೆಯಡಿ ಮೊದಲ ಕಂತಿನ ರೂ. 50,000 ಖಾತೆಗೆ ಜಮೆಯಾಗುತ್ತಿದ್ದಂತೆ ಈ ಮಹಿಳೆಯರು ತಮ್ಮ ಗಂಡಂದಿರನ್ನು ತೊರೆದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಈ ನಾಲ್ಕು ಪ್ರಕರಣಗಳಲ್ಲಿ ಹಣ ಮಂಜೂರಾಗಿದ್ದರೂ ಮನೆಗಳ ನಿರ್ಮಾಣ ಏಕೆ ಆರಂಭಿಸಲಾಗಿಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿ ಏಜನ್ಸಿ ಪರಿಶೀಲನೆ ಕೈಗೊಂಡಾಗ ಈ ವಿದ್ಯಮಾನ ಬೆಳಕಿಗೆ ಬಂದಿದೆ.
ಈ ಪರಾರಿಯಾದ ಮಹಿಳೆಯರ ಗಂಡಂದಿರಿಗೆ ದಿಕ್ಕೇ ತೋಚದಂತಾಗಿದ್ದು ಮುಂದಿನ ಕಂತುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡದೇ ಇರುವಂತೆ ಅಧಿಕಾರಿಗಳನ್ನು ಕೋರಿದ್ದಾರೆ ಎಂದು ವರದಿಯಾಗಿದೆ.
ಬಾರಾಬಂಕಿ ಜಿಲ್ಲೆಯ ಬೆಲ್ಹಾರ, ಬಂಕಿ, ಝೈದಪುರ್ ಮತ್ತು ಸಿದ್ದೌರ್ ಎಂಬಲ್ಲಿ ಈ ಘಟನೆಗಳು ವರದಿಯಾಗಿವೆ. ಬಾರಾಬಂಕಿ ಜಿಲ್ಲೆಯಲ್ಲಿ 1,604 ಮನೆಗಳಿಗೆ ಮಂಜೂರಾತಿ ದೊರಕಿತ್ತು, ಹಣವೂ ಮಂಜೂರಾಗಿತ್ತು ಆದರೆ 40 ಮಂದಿ ಮನೆಗಳ ನಿರ್ಮಾಣ ಆರಂಭಿಸಿಲ್ಲ ಎಂದು ತಿಳಿದು ನೋಟಿಸ್ ಜಾರಿಗೊಳಿಸಿ ತಕ್ಷಣ ಮನೆಗಳ ಕಾಮಗಾರಿ ಆರಂಭಿಸುವಂತೆ ಸೂಚಿಸಲಾಗಿತ್ತು. ಆಗ ನಾಲ್ಕು ಪ್ರಕರಣಗಳಲ್ಲಿ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಸಹಾಯಧನ ದೊರೆಯುತ್ತಿದ್ದಂತೆಯೇ ಪರಾರಿಯಾಗಿರುವ ವಿಚಾರ ಬೆಳಕಿಗೆ ಬಂತು.
ಸಂಬಂಧಿತರಿಗೆ ಅವರ ಪತ್ನಿಯರನ್ನು ಮನೆಗೆ ವಾಪಸ್ ಬರಲು ಮನವೊಲಿಸುವಂತೆ ಸೂಚಿಸಲಾಗಿದೆ. ಹಣ ದುರುಪಯೋಗವಾಗಿದ್ದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಇದನ್ನೂ ಓದಿ: ತೈಲ ಫ್ಯಾಕ್ಟರಿಯ ಟ್ಯಾಂಕರ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 7 ಕಾರ್ಮಿಕರು ಸಾವು